ಮುಂಬಯಿ: ಗುರುವಾರ ರಾತ್ರಿ ನಡೆದ ಐಪಿಎಲ್(IPL 2024) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆರ್ಸಿಬಿ(Royal Challengers Bengaluru) ವಿರುದ್ಧ ಭರ್ಜರಿ 7 ವಿಕೆಟ್ಗಳ ಗೆಲುವು ಸಾಧಿಸಿ ಮೆರೆದಾಡಿತು. ಜತೆಗೆ ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ(IPL 2024 Points Table) ಒಂದು ಸ್ಥಾನದ ಏರಿಕೆಯೂ ಕಂಡಿದೆ. ಸೋಲು ಕಂಡ ಆರ್ಸಿಬಿ ಈ ಹಿಂದೆ ಇದ್ದ 9ನೇ ಸ್ಥಾನದಲ್ಲೇ ಮುಂದುವರಿದಿದೆ.
ನೂತನ ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ರಾಜಸ್ಥಾನ್ ರಾಯಲ್ಸ್ | 5 | 4 | 1 | 8 (+0.871) |
ಕೆಕೆಆರ್ | 4 | 3 | 1 | 6 (+1.528) |
ಲಕ್ನೋ ಸೂಪರ್ ಜೈಂಟ್ಸ್ | 4 | 3 | 1 | 6 (+0.775) |
ಚೆನ್ನೈ ಸೂಪರ್ ಕಿಂಗ್ಸ್ | 5 | 3 | 2 | 4(+0.666) |
ಹೈದರಾಬಾದ್ | 5 | 3 | 2 | 6 (+0.344) |
ಗುಜರಾತ್ | 6 | 3 | 3 | 6 (-0.637) |
ಮುಂಬಯಿ | 5 | 2 | 3 | 4 (-0.073) |
ಪಂಜಾಬ್ | 5 | 2 | 3 | 4 (-0.196) |
ಆರ್ಸಿಬಿ | 6 | 1 | 5 | 2 (-1.124) |
ಡೆಲ್ಲಿ ಕ್ಯಾಪಿಟಲ್ಸ್ | 5 | 1 | 4 | 2 (-1.370) |
7 ವಿಕೆಟ್ ಅಂತರದ ಸೋಲು ಕಂಡ ಆರ್ಸಿಬಿ
ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಬೃಹತ್ ಮೊತ್ತದ ಮೇಲಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ತಂಡ, ದಿನೇಶ್ ಕಾರ್ತಿಕ್(53*), ರಜತ್ ಪಾಟಿದಾರ್(50) ಮತ್ತು ನಾಯಕ ಫಾಫ್ ಡುಪ್ಲೆಸಿಸ್(61) ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 196 ರನ್ ಬಾರಿಸಿತು. ದೊಡ್ಡ ಮೊತ್ತವನ್ನು ಬಹಳ ಜೋಶ್ನಿಂದಲೇ ಬೆನ್ನತ್ತಿದ ಮುಂಬೈ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಅವರ ಪ್ರಚಂಡ ಬ್ಯಾಟಿಂಗ್ ನೆರವಿನಿಂದ 15.3 ಓವರ್ಗಳಲ್ಲಿ ಕೇವಲ 3 ವಿಕೆಟ್ಗೆ 199 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಇದನ್ನೂ ಓದಿ IPL 2024 Points Table: ರಾಜಸ್ಥಾನ್ಗೆ ಮೊದಲ ಸೋಲು; ಅಂಕಪಟ್ಟಿಯಲ್ಲಿ ಪ್ರಮುಖ ಬದಲಾವಣೆ
ಸಿಡಿದ ಸೂರ್ಯಕುಮಾರ್
ಕಳೆದ ಪಂದ್ಯದಲ್ಲಿ ಶೂನ್ಯ ಸುತ್ತಿದ್ದ ಸೂರ್ಯಕುಮಾರ್ ಈ ಪಂದ್ಯದಲ್ಲಿ ಸಿಡಿದು ನಿಂತರು. ನಟರಾಜ ಭಂಗಿಯಲ್ಲಿ ಬ್ಯಾಟ್ ಬೀಸಿ ಮೈದಾನದ ಅಷ್ಟ ದಿಕ್ಕುಗಳಿಗೂ ಚೆಂಡನ್ನು ಹೊಡೆದು ನೆರೆದಿದ್ದ ತವರಿನ ಪ್ರೇಕ್ಷಕರಿಗೆ ಬರಪೂರ ರಂಚನೆ ನೀಡಿದರು. ರೋಹಿತ್ ಶರ್ಮ ತಲಾ ಮೂರು ಸಿಕ್ಸರ್ ಮತ್ತು ಬೌಂಡರಿ ಸಹಾಯದಿಂದ 38 ರನ್ ಗಳಿಸಿ ಟಾಪ್ಲಿ ಹಿಡಿದ ಅತ್ಯದ್ಭುತ ಕ್ಯಾಚ್ಗೆ ವಿಕೆಟ್ ಕೈಚೆಲ್ಲಿದರು. ಕೇವಲ 17 ಎಸೆತಗಳಿಂದ ಅರ್ಧಶತಕ ಬಾರಿಸಿದ ಸೂರ್ಯಕುಮಾರ್ ಯಾದವ್ ಒಟ್ಟು 52 ರನ್ ಬಾರಿಸಿ ಮಿಂಚಿದರು. ಅವರ ಈ ಸೊಗಸಾದ ಬ್ಯಾಟಿಂಗ್ನಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ದಾಖಲಾಯಿತು. ಅಂತಿಮವಾಗಿ ನಾಯಕ ಹಾರ್ದಿಕ್ ಪಾಂಡ್ಯ(21) ಮತ್ತು ತಿಲಕ್ ವರ್ಮ(16) ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಜಿದ್ದಿಗೆ ಬಿದ್ದವಂತೆ ಬ್ಯಾಟ್ ಬೀಸಿದ ಇಶಾನ್ ಕಿಶನ್ ಬರೋಬ್ಬರಿ 5 ಸಿಕ್ಸರ್ ಮತ್ತು 7 ಬೌಂಡರಿ ನೆರವಿನಿಂದ 69 ರನ್ ಬಾರಿಸಿದರು. ಇವರ ಈ ಆಕ್ರಮಣಕಾರಿ ಬ್ಯಾಟಿಂಗ್ನಿಂದ ತಂಡಕ್ಕೆ ಮೊದಲ ವಿಕೆಟ್ಗೆ 101 ರನ್ ಹರಿದು ಬಂತು.