ಗುವಾಹಟಿ: ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 5 ವಿಕೆಟ್ ಅಂತರದ ಗೆಲುವು ಸಾಧಿಸಿತು. ಪಂಜಾಬ್ ಗೆಲುವಿನಿಂದ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ(IPL 2024 Points Table) ಕೊನೆಯ ಸ್ಥಾನಕ್ಕೆ ಕುಸಿದಿದೆ. ಪಂಜಾಬ್ 10 ಅಂಕದೊಂದಿಗೆ 9ನೇ ಸ್ಥಾನಿಯಾಗಿದೆ.
ಇಂದು ನಡೆಯುವ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿದೆ. ಹೈದರಾಬಾದ್ ಗೆಲುವು ಸಾಧಿಸಿದರೆ ಅಧಿಕೃತವಾಗಿ ಪ್ಲೇ ಆಫ್ಗೆ ಪ್ರವೇಶ ಪಡೆಯಲಿದೆ. ಗುಜರಾತ್ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಇದು ಔಪಚಾರಿಕ ಪಂದ್ಯವಾಗಿದೆ.
ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ಕೆಕೆಆರ್ | 13 | 9 | 3 | 19 (+1.428) |
ರಾಜಸ್ಥಾನ್ ರಾಯಲ್ಸ್ | 12 | 8 | 4 | 16 (+0.349) |
ಚೆನ್ನೈ | 13 | 7 | 6 | 14 (+0.528) |
ಹೈದರಾಬಾದ್ | 12 | 7 | 5 | 14 (+0.406) |
ಆರ್ಸಿಬಿ | 13 | 6 | 7 | 12 (+0.387) |
ಡೆಲ್ಲಿ | 13 | 6 | 7 | 12 (-0.482) |
ಲಕ್ನೋ | 12 | 6 | 6 | 12 (-0.769) |
ಗುಜರಾತ್ | 13 | 5 | 7 | 11 (-1.063) |
ಪಂಜಾಬ್ | 13 | 5 | 8 | 10 (-0.347) |
ಮುಂಬೈ | 13 | 4 | 9 | 8 (-0.271) |
ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 65ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ವೈಫಲ್ಯ ಕಂಡು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 144 ರನ್ ಗಳಿಸಿತು. ಸಣ್ಣ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್(Punjab Kings) ಕೂಡ ಒಂದು ಹಂತದಲ್ಲಿ ಆಘಾತ ಎದುರಿಸಿ ಬಳಿಕ ಚೇತರಿಕೆ ಹಾದಿ ಹಿಡಿದು 18.5 ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ 145 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಇದನ್ನೂ ಓದಿ IPL 2024: ಆರ್ಸಿಬಿ ಪಂದ್ಯದ ವೇಳೆ ಕಳಪೆ ಆಹಾರ ವಿತರಣೆ: ಕೆಎಸ್ಸಿಎ ವಿರುದ್ಧ ಎಫ್ಐಆರ್
ಚೇಸಿಂಗ್ ವೇಳೆ ಪಂಜಾಬ್ ಕೂಡ ಅಗ್ರ ಕ್ರಮಾಂಕದ ಆಟಗಾರರನ್ನು ಅಗ್ಗಕ್ಕೆ ಕಳೆದುಕೊಂಡು ರಾಜಸ್ಥಾನ್ ತಂಡದ ಹಾಗೆ ಆರಂಭಿಕ ಆಘಾತಕ್ಕೆ ಸಿಲುಕಿತು. ಪ್ರಭಾಸಿಮ್ರಾನ್ ಸಿಂಗ್(6) ಮತ್ತು ಜಾನಿ ಬೇರ್ಸ್ಟೋ(14) ರನ್ ಗಳಿಸಿ ಪೆವಿಲಿಯನ್ ಸೇರಿದರು. ಈ ವಿಕೆಟ್ ಪತನದ ಬಳಿಕ ಆಡಲಿಳಿದ, ಈ ಬಾರಿಯ ಐಪಿಎಲ್ನಲ್ಲಿ ವಿಸ್ಫೋಟಕ ಬ್ಯಾಟಿಂಗ್ ನಡೆಸಿ ಸಂಚಲನ ಸೃಷ್ಟಿಸಿದ್ದ ಶಶಾಂಕ್ ಸಿಂಗ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು. 36 ರನ್ಗೆ 3 ವಿಕೆಟ್ ಕಳೆದುಕೊಂಡ ಪಂಜಾಬ್, ಚೇತರಿಕೆ ಕಾಣುವಷ್ಟರಲ್ಲಿ ಉತ್ತಮವಾಗಿ ಆಡುತ್ತಿದ್ದ ರೀಲಿ ರೋಸೊ(22) ವಿಕೆಟ್ ಕೂಡ ಕಳೆದುಕೊಂಡಿತು. ತಂಡದ ಮೊತ್ತ 50 ಗಡಿ ದಾಟುವ ಮುನ್ನ 4 ವಿಕೆಟ್ ಕಳೆದುಕೊಂಡು ಮತ್ತಷ್ಟು ತೀವ್ರ ಸಂಕಟಕ್ಕೆ ಒಳಗಾಯಿತು.
ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ನೆರವಾದದ್ದು ನಾಯಕ ಸ್ಯಾಮ್ ಕರನ್ ಮತ್ತು ಜಿತೇಶ್ ಶರ್ಮ. ಉಭಯ ಆಟಗಾರರು ತಾಳ್ಮೆಯುತ ಬ್ಯಾಟಿಂಗ್ ನಡೆಸಿ ಉತ್ತಮ ಜತೆಯಾಟವೊಂದನ್ನು ಸಂಘಟಿಸಿದರು. 5ನೇ ವಿಕೆಟ್ಗೆ 63 ರನ್ ಒಟ್ಟುಗೂಡಿಸಿದರು. ಈ ಉಪಯುಕ್ತ ಜತೆಯಾಟದ ಸಹಾಯದಿಂದ ಪಂಜಾಬ್ ಗೆಲುವಿನ ದಡ ಸೇರಿತು. ಜಿತೇಶ್ ಶರ್ಮ 20 ಎಸೆತಗಳಿಂದ 22 ರನ್ ಬಾರಿಸಿ ಪರಾಗ್ಗೆ ವಿಕೆಟ್ ಒಪ್ಪಿಸಿದರು. ಕರನ್ ಅಜೇಯರಾಗಿ ಉಳಿದು ಅರ್ಧಶತಕ ಬಾರಿಸಿದರು. ಇದು ಅವರ ಈ ಆವೃತ್ತಿಯ 2ನೇ ಅರ್ಧಶತಕವಾಗಿದೆ. ಒಟ್ಟು 41 ಎಸೆತ ಎದುರಿಸಿದ ಕರನ್ 63* ರನ್ ಬಾರಿಸಿದರು. ಈ ವೇಳೆ ಇವರ ಬ್ಯಾಟ್ನಿಂದ 5 ಬೌಂಡರಿ ಮತ್ತು 3 ಸಿಕ್ಸರ್ ಸಿಡಿಯಿತು.