ಮೊಹಾಲಿ: ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಮುಂದಿನ ಆವೃತ್ತಿ ಐಪಿಎಲ್(IPL 2024) ಸೀಸನ್ಗಾಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ಹಾಗೂ ಆರ್ಸಿಬಿ(RCB) ತಂಡದ ಕೋಚ್ ಆಗಿದ್ದ ಸಂಜಯ್ ಬಂಗಾರ್(Sanjay Bangar) ಅವರನ್ನು ಕ್ರಿಕೆಟ್ ಅಭಿವೃದ್ಧಿಯ ಮುಖ್ಯಸ್ಥರಾನ್ನಾಗಿ(Head of Cricket Development) ನೇಮಕ ಮಾಡಿದೆ. ಈ ವಿಚಾರವನ್ನು ಪಂಜಾಬ್ ಕಿಂಗ್ಸ್(Punjab Kings) ಫ್ರಾಂಚೈಸಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಾದ ಎಕ್ಸ್ನಲ್ಲಿ ಪ್ರಕಟಿಸಿದೆ.
ಮತ್ತೆ ಪಂಜಾಬ್ ಫ್ರಾಂಚೈಸಿಗೆ
ಸಂಜಯ್ ಬಂಗಾರ್ ಅವರು ತಮ್ಮ ಐಪಿಎಲ್ ಜರ್ನಿಯನ್ನು ಆರಂಭಿಸಿದ್ದು ಪಂಜಾಬ್ ಫ್ರಾಂಚೈಸಿಯ ಮೂಲಕವೇ. ಹೌದು, 2014ರಲ್ಲಿ ಅವರು ಪಂಜಾಬ್ ತಂಡಕ್ಕೆ ಸಹಾಯಕ ತರಬೇತುದಾರರಾಗಿ ನೇಮಕಗೊಳ್ಳುವ ಮೂಲಕ ಐಪಿಎಲ್ ಕೋಚಿಂಗ್ ಆರಂಭಿಸಿದ್ದರು. ಇದೇ ಋತುವಿನಲ್ಲಿ ಪಂಜಾಬ್ ತಂಡ ಫೈನಲ್ ಕೂಡ ಪ್ರವೇಶಿಸಿತ್ತು. ಆದರೆ ಫೈನಲ್ನಲ್ಲಿ ಪಂಜಾಬ್ ಕೆಕೆಆರ್ ವಿರುದ್ಧ ಸೋಲು ಕಂಡಿತ್ತು. ಬಿಸಿಸಿಐ ಸ್ವಹಿತಾಸಕ್ತಿ ಸಂಘರ್ಷದ ಕಾರಣದಿಂದ ಅವರು ಕೆಳಗಿಳಿಯುವವರೆಗೂ ಅವರು ಮೂರು ವರ್ಷಗಳ ಕಾಲ ಪಂಜಾಬ್ ತಂಡದ ಮುಖ್ಯ ಕೋಚ್ ಆಗಿ ಮುಂದುವರಿದಿದ್ದರು.
ಆಗಸ್ಟ್ 2014 ರಲ್ಲಿ, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ನಿರಾಶಾದಾಯಕ ಪ್ರದರ್ಶನ ತೋರಿದ ಕಾರಣ ತಂಡದ ಕೋಚಿಂಗ್ ಸ್ಟಾಫ್ಗಳನ್ನು ಬದಲಾಯಿಸಲಾಯಿತು. ಪಂಜಾಬ್ ಕೋಚ್ ಆಗಿದ್ದ ಬಂಗಾರ್ ಅವರನ್ನು ಭಾರತೀಯ ರಾಷ್ಟ್ರೀಯ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಿಸಲಾಯಿತು. ಜೂನ್ 2016 ರಲ್ಲಿ ಜಿಂಬಾಬ್ವೆ ಪ್ರವಾಸಕ್ಕೆ ಅವರು ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದದ್ದರು. ಅನಿಲ್ ಕುಂಬ್ಳೆ ಮತ್ತು ರವಿಶಾಸ್ತ್ರಿ ಅವರ ಮುಖ್ಯ ಕೋಚಿಂಗ್ ಅಡಿಯಲ್ಲಿ ಬಂಗಾರ್ ಅವರು ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಇದನ್ನೂ ಓದಿ IPL 2024: ಹರಾಜಿನಲ್ಲಿ ಯಾವ ತಂಡಕ್ಕೆ ಎಷ್ಟು ಆಟಗಾರರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ
We are delighted to announce the return of our sher, Sanjay Bangar as the new Head of Cricket Development at Punjab Kings.
— Punjab Kings (@PunjabKingsIPL) December 8, 2023
Mr. Bangar brings a wealth of experience and expertise to our organization, and we are confident that under his leadership, our cricket development… pic.twitter.com/oDamatwpYg
ಆರ್ಸಿಬಿಗೆ ಕೋಚ್ ಆಗಿದ್ದ ಬಂಗಾರ್
ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಹುದ್ದೆಯಿಂದ ಕೆಳಗಿಳಿದ ಬಳಿಕ ಬಂಗಾರ್ ಫೆಬ್ರವರಿ 2021 ರಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಲಹೆಗಾರರಾಗಿ ಸೇರಿಕೊಂಡರು. 2022 ಐಪಿಎಲ್ ಋತುವಿನಲ್ಲಿ ಆರ್ಸಿಬಿಯ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಅವರ ಮಾರ್ಗದರ್ಶನದಲ್ಲಿ, ಆರ್ಸಿಬಿ 2021 ಮತ್ತು 2022 ರಲ್ಲಿ ಪ್ಲೇ ಆಫ್ ತಲುಪಿತ್ತು. 2023ರಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರಿ ಬಂದಿರಲಿಲ್ಲ. ಹೀಗಾಗಿ ಅವರನ್ನು ಕೋಚ್ ಹುದ್ದೆಯಿಂದ ಕೈಬಿಡಲಾಗಿತ್ತು. ಇದೀಗ ತಮ್ಮ ಕೋಚಿಂಗ್ ವೃತ್ತಿ ಬದುಕು ಆರಂಭಿಸಿದ ಪಂಜಾಬ್ ತಂಡಕ್ಕೆ ಮತ್ತೆ ಸೇರಿಕೊಂಡಿದ್ದಾರೆ.
ಪಂಜಾಬ್ ಕಿಂಗ್ಸ್
ಹೆಸರು ಬದಲಿಸಿದರು ಅದೃಷ್ಟ ಬದಲಾಗದ ಪಂಜಾಬ್ ಕಿಂಗ್ಸ್ ತಂಡಕ್ಕೆ ಡಿ.19ರಂದು ನಡೆಯುವ ಆಟಗಾರರ ಹರಾಜಿನಲ್ಲಿ 8 ಆಟಗಾರರನ್ನು ಖರೀದಿ ಮಾಡುವ ಅವಕಾಶವಿದೆ. ಇಬ್ಬರು ವಿದೇಶಿ ಆಟಗಾರರು ಹಾಗೂ 6 ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ. ಫ್ರಾಂಚೈಸಿ ಬಳಿ 29.10 ಕೋಟಿ. ರೂ.ಹಣವಿದೆ.