Site icon Vistara News

IPL 2024: ಗೆಲುವಿನಲ್ಲೂ ನೂತನ ದಾಖಲೆ ಬರೆದ ಆರ್​ಸಿಬಿ

IPL 2024

ಅಹಮದಾಬಾದ್​: ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್​ಸಿಬಿ ಇದೀಗ ಗೆಲುವಿನ ಹಳಿಗೆ ಮರಳಿದೆ. ಇಂದಿನ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್(Gujarat Titans)​ ವಿರುದ್ಧ ಗೆಲ್ಲುವು ಮೂಲಕ ಸತತ 2ನೇ ಹಾಗೂ ಒಟ್ಟಾರೆ ಮೂರನೇ ಗೆಲುವು ದಾಖಲಿಸಿದೆ. ಗುಜರಾತ್​ ವಿರುದ್ಧ 9 ವಿಕೆಟ್​ ಅಂತರದ ಗೆಲುವು ಸಾಧಿಸುವ ಮೂಲಕ ಆರ್​ಸಿಬಿ(Royal Challengers Bengaluru) ಐಪಿಎಲ್​ನಲ್ಲಿ(IPL 2024) ನೂತನ ದಾಖಲೆಯೊಂದನ್ನು ನಿರ್ಮಿಸಿದೆ.

ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಗುಜರಾತ್​ ಟೈಟಾನ್ಸ್​, ಸಾಯಿ ಸುದರ್ಶನ್​(84*) ಮತ್ತು ಶಾರೂಖ್​ ಖಾನ್​(58) ಅವರ ಅರ್ಧಶತಕದ ಉಪಯುಕ್ತ ಬ್ಯಾಟಿಂಗ್​ ನೆರವಿನಿಂದ 20 ಓವರ್​ಗೆ 3 ವಿಕೆಟ್​ ಕಳೆದುಕೊಂಡು ಭರ್ತಿ 200 ರನ್​ ಪೇರಿಸಿತು. ಜವಾಬಿತ್ತ ಆರ್​ಸಿಬಿ ಫುಲ್​ ಬ್ಯಾಟಿಂಗ್​ ಜೋಶ್​ನೊಂದಿಗೆ ಕೇವಲ 16 ಓವರ್​ಗಳಲ್ಲಿ 1 ವಿಕೆಟ್​ನಷ್ಟಕ್ಕೆ ಇನ್ನೂ 24 ಎಸೆತಗಳು ಬಾಕಿ ಇರುವಂತೆಯೇ 206 ರನ್​ ಬಾರಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.

ಈ ಗೆಲುವಿನ ಮೂಲಕ ಐಪಿಎಲ್​ನ ಇದುವರೆಗಿನ ಇತಿಹಾಸದಲ್ಲಿ ಅತಿ ಕಡಿಮೆ ಎಸೆತಗಳನ್ನು ಎದುರಿಸಿ 200 ರನ್​ ಚೇಸಿಂಗ್​ ಮಾಡಿದ ಮೊದಲ ತಂಡ ಎಂಬ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿತು. ಇದಕ್ಕೂ ಮುನ್ನ ಈ ದಾಖಲೆ ಮುಂಬೈ ಇಂಡಿಯನ್ಸ್​ ತಂಡದ ಪರ ಇತ್ತು. 2023ರಲ್ಲಿ ಆರ್​ಸಿಬಿ ವಿರುದ್ಧವೇ ಮುಂಬೈ ಈ ದಾಖಲೆ ಬರೆದಿತ್ತು.

ಅತಿ ಹೆಚ್ಚು ಬಾಲ್​ ಉಳಿಸಿ 200 ರನ್​ ಚೇಸಿಂಗ್​ ನಡೆಸಿದ ತಂಡಗಳು


ಆರ್​ಸಿಬಿ-24 ಎಸೆತ ಬಾಕಿ ಇರುವಂತೆ ಗೆಲುವು

ಮುಂಬೈ ಇಂಡಿಯನ್ಸ್​- 21 ಎಸೆತ ಬಾಕಿ ಇರುವಂತೆ ಗೆಲುವು

ಡೆಲ್ಲಿ ಕ್ಯಾಪಿಟಲ್ಸ್​-15 ಎಸೆತ ಬಾಕಿ ಇರುವಂತೆ ಗೆಲುವು

ಮುಂಬೈ ಇಂಡಿಯನ್ಸ್​-12 ಎಸೆತ ಬಾಕಿ ಇರುವಂತೆ ಗೆಲುವು

ಇದನ್ನೂ ಓದಿ RCB vs GT: ವಿಲ್​ ಜ್ಯಾಕ್ಸ್ ಅಜೇಯ ಶತಕ; ಆರ್​ಸಿಬಿಗೆ 9 ವಿಕೆಟ್​ ಭರ್ಜರಿ ಗೆಲುವು

ಈ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿದ ವಿಲ್​ ಜಾಕ್ಸ್​ 41 ಎಸೆತಗಳಿಂದ ಬರೋಬ್ಬರಿ 10 ಸಿಕ್ಸರ್​ ಮತ್ತು 5 ಬೌಂಡರಿ ಬಾರಿಸಿ ಭರ್ತಿ 100 ರನ್​ ಪೇರಿಸಿದರು. ಈ ಮೂಲಕ ಐಪಿಎಲ್​ನಲ್ಲಿ ಚೊಚ್ಚಲ ಶತಕ ಪೂರ್ತಿಗೊಳಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್​ ನೀಡಿದ ವಿರಾಟ್​ ಕೊಹ್ಲಿ ಕೇವಲ 32 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿ ಒಟ್ಟು 44 ಎಸೆತಗಳಿಂದ ಅಜೇಯ 70 ರನ್​ ಬಾರಿಸಿ ಮಿಂಚಿದರು.

ದಾಖಲೆ ಬರೆದ ಕೊಹ್ಲಿ


ವಿರಾಟ್​ ಕೊಹ್ಲಿ ಅವರು ಈ ಆವೃತ್ತಿಯಲ್ಲಿ 500 ರನ್​ಗಳ ಗಡಿ ದಾಟುವ ಮೂಲಕ ಐಪಿಎಲ್​ ಇತಿಹಾಸದಲ್ಲಿ ಅತ್ಯಧಿಕ ಬಾರಿ 500 ರನ್ ಗಡಿ ದಾಡಿದ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​ ಅವರ ದಾಖಲೆಯನ್ನು ಸರಿಗಟ್ಟಿದರು. ಉಭಯ ಆಟಗಾರರು ಕೂಡ 7 ಬಾರಿ ಈ ಸಾಧನೆ ಮಾಡಿದ್ದಾರೆ. ಗುಜರಾತ್​ ವಿರುದ್ಧ ಕೊಹ್ಲಿ ಬಾರಿಸಿದ ಮೂರನೇ ಅರ್ಧಶತಕ ಇದಾಗಿದೆ. ಒಂದು ಶತಕ ಕೂಡ ಒಳಗೊಂಡಿದೆ.

Exit mobile version