Site icon Vistara News

IPL 2024: ಕೆಕೆಆರ್​ ವಿರುದ್ಧ ಹಸಿರು ಜೆರ್ಸಿಯಲ್ಲಿ ಆಡಲಿದೆ ಆರ್​ಸಿಬಿ; ಈ ಬಾರಿಯ ಉದ್ದೇಶವೇನು?

IPL 2024

ಕೋಲ್ಕತ್ತಾ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB) ತಂಡ ಈ ಬಾರಿಯ ಐಪಿಎಲ್​ನಲ್ಲಿ(IPL 2024) ಆಡಿದ 7 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಸೋತು ಕೊನೆಯ ಸ್ಥಾನಿಯಾಗಿದೆ. ಮುಂದಿನ 7 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಪ್ಲೇ ಆಫ್​ ಪ್ರವೇಶ ಪಡೆಯಬಹುದು. ಮುಂದಿನ ಪಂದ್ಯವನ್ನು ಕೆಕೆಆರ್(KKR)​ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಆರ್​ಸಿಬಿ ಗೋ ಗ್ರೀನ್‌ ಅಭಿಯಾನದ ಭಾಗವಾಗಿ ಹಸಿರು(RCB Green Jersey) ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಎಂದು ಫ್ರಾಂಚೈಸಿ ಅಧಿಕೃತ ಮಾಹಿತಿ ನೀಡಿದೆ. ಈ ಮೂಲಕ ಈ ಐಪಿಎಲ್‌ನಲ್ಲೂ(IPL 2024) ಆರ್​ಸಿಬಿಯ ಗೋ ಗ್ರೀನ್‌ ಅಭಿಯಾನ ಮುಂದುವರಿಯಲಿದೆ. ಸ್ವಚ್ಛ ಹಾಗೂ ಹಸಿರು ಪರಿಸರವೇ ಈ ಬಾರಿಯ ಪ್ರಮುಖ ಉದ್ದೇಶ.

“ಬಣ್ಣಗಳ ಬದಲಾವಣೆಯು ಅದೃಷ್ಟದಲ್ಲಿ ಬದಲಾವಣೆಯನ್ನು ತರುತ್ತದೆ ಎಂದು ಭಾವಿಸುತ್ತೇವೆ!” ಎಂದು ಬರೆದಿಕೊಂಡು ಮುಂದಿನ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ತಂಡ ಕಣಕ್ಕಿಳಿಯಲಿದೆ ಎನ್ನುವ ವಿಚಾರವನ್ನು ಫ್ರಾಂಚೈಸಿ ತನ್ನ ಟ್ವಿಟರ್ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದೆ. ಕೆಕೆಆರ್​ ಮತ್ತು ಆರ್​ಸಿಬಿ ನಡುವಣ ಪಂದ್ಯ ಏಪ್ರಿಲ್​ 21ರಂದು ನಡೆಯಲಿದೆ. ಈಡನ್​ ಗಾರ್ಡನ್ಸ್​ನಲ್ಲಿ ಪಂದ್ಯ ನಡೆಯಲಿದೆ. ಇದು ಹಗಲು ಪಂದ್ಯವಾಗಿದೆ.

​2011 ರಿಂದ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆರ್​ಸಿಬಿ ತಮ್ಮ ‘ಗೋ ಗ್ರೀನ್’ ಅಭಿಯಾನದಲ್ಲಿ ತೊಡಗಿಕೊಂಡಿತ್ತು. ಇದೇ ಕಾರಣಕ್ಕೆ ಪ್ರತಿ ಆವೃತ್ತಿಯಲ್ಲಿಯೂ ಒಂದು ಪಂದ್ಯವನ್ನು ಹಸಿರು ಜೆರ್ಸಿಯಲ್ಲಿ ಆಡುತ್ತಿದೆ. ಆದರೆ 2021ರಲ್ಲಿ, ಹಸಿರು ಜರ್ಸಿಯಲ್ಲಿ ಆಡುವ ಬದಲು ತಂಡವು ಒಂದು ಪಂದ್ಯದಲ್ಲಿ ನೀಲಿ ಜರ್ಸಿಯಲ್ಲಿ ಆಡಿತ್ತು. ಇದಕ್ಕೆ ಕಾರಣ ಕೋವಿಡ್ ಸಂಕಷ್ಟದ ಸಮಯದಲ್ಲಿ ಮುಂಚೂಣಿಯಲ್ಲಿರುವ ಕಾರ್ಮಿಕರಿಗೆ ಅವರ ತ್ಯಾಗ ಮತ್ತು ಕಠಿಣ ಪರಿಶ್ರಮಕ್ಕೆ ಗೌರವ ಸಲ್ಲಿಸಲು ಈ ನೀಲಿ ಜೆರ್ಸಿ ಧರಿಸಿ ಆಡಿತ್ತು.

ಇದನ್ನೂ ಓದಿ IPL 2024 Points Table: 3ನೇ ಗೆಲುವು ಸಾಧಿಸಿದ ಬಳಿಕ ಮುಂಬೈಗೆ ಅಂಕಪಟ್ಟಿಯಲ್ಲಿ ಎಷ್ಟನೇ ಸ್ಥಾನ?

ಈ ಬಾರಿಯ ಗ್ರೀನ್‌ ಜೆರ್ಸಿಯ ವಿನ್ಯಾಸದಲ್ಲಿ ತುಸು ಬದಲಾವಣೆ ಮಾಡಲಾಗಿದೆ. ಹಸಿರಿನ ಜತೆಗೆ ಕಡು ನೀಲಿ ಬಣ್ಣವನ್ನು ಸೇರಿಸಿಲಾಗಿದೆ. ಹಿಂದಿನ ಆವೃತ್ತಿಯಲ್ಲಿ ಹಸಿರು ಮತ್ತು ಕಪ್ಪು ಬಣ್ಣ ವಿಶ್ರಿತ ಜೆರ್ಸಿಯನ್ನು ಬಳಸಲಾಗಿತ್ತು.

ಪ್ಲೇ ಆಫ್ ಆಸೆ ಜೀವಂತ

ಸದ್ಯದ ಪರಿಸ್ಥಿತಿಯಲ್ಲಿ ಆರ್‌ಸಿಬಿ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ತಂಡದ ಮೇಲಿದೆ. ಈಗಾಗಲೇ 7 ಪಂದ್ಯ ಆಡಿದ್ದು, 1 ಪಂದ್ಯ ಗೆದ್ದು, 6 ಪಂದ್ಯದಲ್ಲಿ ಸೋಲು ಕಂಡಿದೆ. 2 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ, ಲೀಗ್‌ ಹಂತದಲ್ಲಿ ಇನ್ನೂ 7 ಪಂದ್ಯಗಳ ಬಾಕಿ ಇದೆ. ಹೀಗಾಗಿ ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಪ್ಲೇ ಆಫ್ ಅವಕಾಶ ಇದೆ. ಜತೆಗೆ ಉಳಿದ ತಂಡಗಳ ಪ್ರದರ್ಶನವೂ ಆರ್‌ಸಿಬಿ ಪ್ಲೇಆಫ್ ಹಾದಿಯ ಮೇಲೆ ಪರಿಣಾಮ ಬೀರಲಿದೆ.

Exit mobile version