Site icon Vistara News

IPL 2024: ರಿಂಕು ಸಿಂಗ್​​ ಸಿಕ್ಸರ್‌ ಸುರಿಮಳೆಗೆ 1ನೇ ವರ್ಷದ ಸಂಭ್ರಮ; ಹೇಗಿತ್ತು ಅಂದಿನ ಸಿಕ್ಸರ್​?

IPL 2024

ಬೆಂಗಳೂರು: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್(GT) ವಿರುದ್ಧದ ಐಪಿಎಲ್ 2023ರಲ್ಲಿ ಕೋಲ್ಕತಾ ನೈಟ್ ರೈಡರ್ಸ್(KKR) ತಂಡ ಅಂತಿಮ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸಿತ್ತು. ಈ ಗೆಲುವಿನ ರುವಾರಿ ರಿಂಕು ಸಿಂಗ್(Rinku Singh). ಅಸಾಮಾನ್ಯ ಬ್ಯಾಟಿಂಗ್​ ಮೂಲಕ ರಿಂಕು 5 ಸಿಕ್ಸರ್​ ಸಿಡಿಸಿ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟಿದ್ದರು. ರಿಂಕು ಅವರ ಈ ಸಿಕ್ಸರ್ ಸಂಭ್ರಮಕ್ಕೆ ಇದೀಗ ಒಂದು ವರ್ಷ ತುಂಬಿದೆ.

ಏಪ್ರಿಲ್​ 9, 2023ರಂದು ನಡೆದಿದ್ದ ಈ ರೋಚಕ ಪಂದ್ಯದಲ್ಲಿ ಕೆಕೆಆರ್​ ಗೆಲುವಿಗೆ ಅಂತಿಮ ಓವರ್​ನಲ್ಲಿ 29 ರನ್ ಗಳ ಅಗತ್ಯವಿತ್ತು. ಇದು ಅಸಾಧ್ಯವೆಂದು ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರು ಹೊರ ನಡೆಯಲು ಆರಂಭಿಸಿದರು. ಆದರೆ, ಆತ್ಮವಿಶ್ವಾಸ ಕಳೆದುಕೊಳ್ಳದೆ ಯಶ್ ದಯಾಳ್ ಎಸೆದ ಅಂತಿಮ ಓವರ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ರಿಂಕು ಸಿಂಗ್​ 5 ಸಿಕ್ಸರ್ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದು ಕೊಟ್ಟರು. ರಿಂಕು ಅವರ ಈ ಬ್ಯಾಟಿಂಗ್​ ಪರಾಕ್ರಮವನ್ನು ದಿಗ್ಗಜ ಕ್ರಿಕೆಟಿಗರು ಕೂಡ ಕೊಂಡಾಡಿದ್ದರು. ಇದೇ ಇನಿಂಗ್ಸ್​ನಿಂದ ರಿಂಕು ಅವರ ಖ್ಯಾತಿ ಕೂಡ ಎಲ್ಲಡೆ ಪಸರಿಸಿತು. ಜತೆಗೆ ಅವರಿಗೆ ಟೀಮ್​ ಇಂಡಿಯಾದಲ್ಲಿ ಅವಕಾಶ ಪಡೆಯುವಂತೆ ಮಾಡಿತು. ಅಂದಿನ ಪಂದ್ಯದಲ್ಲಿ ರಿಂಕು 21 ಎಸೆತಗಳಲ್ಲಿ ಅಜೇಯ 48 ರನ್ ಚಚ್ಚಿದ್ದರು.

ಈ ಬಾರಿಯ ಟೂರ್ನಿಯಲ್ಲಿಯೂ(IPL 2024) ರಿಂಕು ಅವರು ಪ್ರತಿ ಪಂದ್ಯದಲ್ಲಿಯೂ ಸ್ಫೋಟಕ ಬ್ಯಾಟಿಂಗ್​ ಮೂಲಕ ಗಮನಸೆಳೆಯುತ್ತಿದ್ದಾರೆ. ರಿಂಕು ಸದ್ಯ ಭಾರತ ಪರ 15 ಟಿ20 ಪಂದ್ಯಗಳಲ್ಲಿ 11 ಇನಿಂಗ್ಸ್​ ಆಡಿ 356 ರನ್​ ಬಾರಿಸಿದ್ದಾರೆ. 2 ಅರ್ಧಶತಕ ಕೂಡ ಇದರಲ್ಲಿ ದಾಖಲಾಗಿದೆ. 2 ಏಕದಿನ ಪಂದ್ಯಗಳಿಂದ 55 ರನ್​ ಕಲೆಹಾಕಿದ್ದಾರೆ. ರಿಂಕು ಪ್ರದರ್ಶನ ಕಾಣುವಾಗ ಇದೇ ವರ್ಷ ಜೂನ್​ನಲ್ಲಿ ನಡೆಯುವ ಟಿ20 ವಿಶ್ವಕಪ್​ ಭಾರತ ತಂಡದಲ್ಲಿ ಅವರಿಗೆ ಸ್ಥಾನ ಖಚಿತ ಎನ್ನಬಹುದು.

ಇದನ್ನೂ ಓದಿ IPL 2024: ಬಾಸ್​ಗೆ ಸುಳ್ಳು ಹೇಳಿ ಪಂದ್ಯ ವೀಕ್ಷಿಸುವಾಗ ಟಿವಿಯಲ್ಲಿ ಸಿಕ್ಕಿಬಿದ್ದ ಆರ್​ಸಿಬಿ ಅಭಿಮಾನಿ!

ಬಡ ಕ್ರಿಕೆಟ್​ ಆಟಗಾರರಿಗೆ ಹಾಸ್ಟೆಲ್ ನಿರ್ಮಾಣ

ರಿಂಕು ಸಿಂಗ್​ ಅವರು ತಮ್ಮ ಊರು ಅಲಿಘರ್​​ನಲ್ಲಿ ಬಡ ಕ್ರಿಕೆಟ್​ ಆಟಗಾರರಿಗೆ​ 50 ಲಕ್ಷ ಮೌಲ್ಯದಲ್ಲಿ ಮೂಲಭೂತ ಸೌಕರ್ಯವುಳ್ಳ ಹಾಸ್ಟೆಲ್​ ನಿರ್ಮಾಣ ಮಾಡುತ್ತಿದ್ದಾರೆ. ಕಷ್ಟ ಏನೆಂಬುದನ್ನು ಹತ್ತಿರದಿಂದ ಕಂಡ ಅವರು ಬಡ ಕ್ರಿಕೆಟ್​ ಪ್ರತಿಭೆಗಳಿಗೆ ನೆರವು ನೀಡುವ ಮೂಲಕ ಅವರ ಕನಸನ್ನು ನನಸು ಮಾಡುವ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಹಾಸ್ಟೆಲ್ ನಿರ್ಮಾಣ ಬಹುತೇಕ ಕೊನೆಯ ಹಂತವನ್ನ ತಲುಪಿದೆ. ಇದೇ ವರ್ಷದ ಮಾರ್ಚ್​ ವೇಳೆಗೆ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ರಿಂಕು ಅವರ ಈ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಹಾಸ್ಟೆಲ್​ ನಿರ್ಮಾಣದ ವಿಚಾರವನ್ನು ರಿಂಕು ಅವರು ಕಳೆದ ಬಾರಿಯ ಐಪಿಎಲ್​ ಟೂರ್ನಿಯ ವೇಳೆ ಘೋಷಿಸಿದ್ದರು.

Exit mobile version