Site icon Vistara News

IPL 2024: ಡೆಲ್ಲಿ ಕ್ಯಾಂಪ್​ ಸೇರಿ ಚೊಚ್ಚಲ ಟೂರ್ನಿ ಆಡುವಂತೆ ಭಾಸವಾಗುತ್ತಿದೆ ಎಂದ ಪಂತ್​

Rishabh Pant

ವಿಶಾಖಪಟ್ಟಣಂ: ಇಂದು (ಮಾರ್ಚ್ 13) ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ 2024(IPL 2024)ರ ಪೂರ್ವ ಋತುವಿನ ಶಿಬಿರವನ್ನು ಆರಂಭಿಸಿದೆ. ಕಾರು ಅಪಘಾತದಿಂದ ಗಾಯಗೊಂಡು 14 ತಿಂಗಳು ಕ್ರಿಕೆಟ್​ನಿಂದ ದೂರ ಉಳಿದಿದ್ದ ರಿಷಭ್​ ಪಂತ್(Rishabh Pant)​ ಫಿಟ್​ನೆಸ್​ ಪಾಸ್​ ಆಗಿ ಇದೀಗ ತಂಡ ಸೇರಿದ್ದಾರೆ. ಡೆಲ್ಲಿ ಕ್ಯಾಂಪ್​(Rishabh Pant joins Delhi Capitals) ಸೇರಿದ ಪಂತ್​ಗೆ ಭರ್ಜರಿ ಸ್ವಾಗತ ಕೋರಲಾಗಿದೆ. ಈ ವಿಡಿಯೊ ವೈರಲ್​ ಆಗಿದೆ.

ಬುಧವಾರ ವಿಶಾಖಪಟ್ಟಣಂ ತಲುಪಿ ಡೆಲ್ಲಿ ಕ್ಯಾಂಪ್​ ಸೇರಿದ ಪಂತ್​, ಮತ್ತೊಮ್ಮೆ ಐಪಿಎಲ್​ಗೆ ಚೊಚ್ಚಲ ಪ್ರವೇಶ ಮಾಡುತ್ತಿರುವಂತೆ ಭಾಸವಾಗುತ್ತಿದೆ ಎಂದು ಹೇಳಿದ್ದಾರೆ. “ನಾನು ಉತ್ಸುಕನಾಗಿದ್ದೇನೆ ಮತ್ತು ಆತಂಕಗೊಂಡಿದ್ದೇನೆ. ಏಕೆಂದರೆ ನಾನು ಮತ್ತೆ ನನ್ನ ಚೊಚ್ಚಲ ಪಂದ್ಯವನ್ನಾಡಲಿದ್ದೇನೆ ಎಂದು ಭಾಸವಾಗುತ್ತಿದೆ. ಮತ್ತೆ ಕ್ರಿಕೆಟ್ ಆಡುವುದು ಪವಾಡದಂತೆ ಭಾಸವಾಗುತ್ತಿದೆ. ಚೇತರಿಸಿಕೊಳ್ಳುವ ಸಮಯದಲ್ಲಿ ಸಹಾಯ ಮಾಡಿದ ಅಭಿಮಾನಿಗಳು, ಬಿಸಿಸಿಐ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸಿಬ್ಬಂದಿಗೆ ಧನ್ಯವಾದ’ ಎಂದು ಹೇಳಿದರು.

ಪಂತ್​ ಅವರನ್ನು ಸಣ್ಣ ಹುಡುಗನೊಬ್ಬ ಡೆಲ್ಲಿ ತಂಡದ ಜೆರ್ಸಿ ನೀಡಿ ಸ್ವಾಗತಿಸಿದ ವಿಡಿಯೊವನ್ನು ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ತನ್ನ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದೆ. ಜತೆಗೆ ಟೈಗರ್​ ಈಸ್​ ಬ್ಯಾಕ್​ ಎಂದು ಬರೆದುಕೊಂಡಿದೆ. ಇದು ಮಾತ್ರವಲ್ಲದೆ ವೈಜಾಗ್​​ ಜನರು ಪಂತ್​ಗೆ ಶುಭಕೋರಿರುವ ವಿಡಿಯೊ ಕೂಡ ಫ್ರಾಂಚೈಸಿ ಹಂಚಿಕೊಂಡಿದೆ. ಈ ವಿಡಿಯೊದಲ್ಲಿ ಪಂತ್​ ಅವರು ಸಲಾರ್​ ಚಿತ್ರದ ಬಿಜಿಎಂನಲ್ಲಿ ಬಂದು ಕೊನೆಗೆ ‘ಡೆಲ್ಲಿ ಅಭಿಮಾನಿಗಳೇ ನಾನು ಮತ್ತೆ ಬಂದಿರುವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ IPL 2024: ಈ ದಿನದಂದು ಆರ್​ಸಿಬಿ ಕ್ಯಾಂಪ್​ ಸೇರಲಿದ್ದಾರೆ ವಿರಾಟ್​ ಕೊಹ್ಲಿ

ಮಾರ್ಚ್ 23 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಮೊಹಾಲಿಯಲ್ಲಿ ಪಂದ್ಯವನ್ನಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್​ ಐಪಿಎಲ್​ 2024ರ ಅಭಿಯಾನವನ್ನು ಪ್ರಾರಂಭಿಸಲಿದೆ. ನಾಯಕನಾಗಿರು ಪಂತ್​ ಅವರು ಬ್ಯಾಟಿಂಗ್​ ಜತೆಗೆ ವಿಕೆಟ್​ ಕೀಪಿಂಗ್ ಕೂಡ ಮಾಡಲಿದ್ದಾರೆ. ಈ ವಿಚಾರವನ್ನು ಬಿಸಿಸಿಐ ಫಿಟ್​ನೆಸ್​ ವರದಿ ಪ್ರಕಟಿಸುವ ವೇಳೆ ತಿಳಿಸಿತ್ತು.

ಕಳೆದ ವಾರ ಪಂತ್​ ಅವರು ಎನ್​ಸಿಎಯಲ್ಲಿ ಐಪಿಎಲ್​ಗಾಗಿ ಸಿದ್ಧತೆ ನಡೆಸುವ ವೇಳೆ ತಮ್ಮ ಸಿಗ್ನೇಚರ್‌ ಶೈಲಿಯಾದ ಒಂದೇ ಕೈಯಲ್ಲಿ ಸಿಕ್ಸರ್​ ಬಾರಿಸಿ ಗಮನಸೆಳೆದಿದ್ದರು. ಇದೀಗ 14 ತಿಂಗಳ ಬಳಿಕ ಆಡಲಿರುವ ಅವರು ತಮ್ಮ ಮೊದಲ ಪಂದ್ಯದಲ್ಲೇ ಅಬ್ಬರದ ಬ್ಯಾಟಿಂಗ್​ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.

2022ರ ಡಿಸೆಂಬರ್​ 30ರಂದು(rishabh pant accident date) ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಪಂತ್​ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರು.

Exit mobile version