Site icon Vistara News

IPL 2024: ಸಿಕ್ಸರ್​ನಿಂದ ಗಾಯಗೊಂಡ ಕ್ಯಾಮೆರಮನ್​ಗೆ ವಿಡಿಯೊ ಮೂಲಕ ಕ್ಷಮೆ ಕೇಳಿದ ರಿಷಭ್​ ಪಂತ್​​

IPL 2024

ನವದೆಹಲಿ: ಗುಜರಾತ್​ ಟೈಟಾನ್ಸ್(DC vS GT)​ ವಿರುದ್ಧ ವಿಸ್ಫೋಟಕ ಬ್ಯಾಟಿಂಗ್​ ನಡೆಸಿ ಸಿಕ್ಸರ್​ಗಳ ಸುರಿಮಳೆ ಸುರಿಸಿದ್ದ ರಿಷಭ್​ ಪಂತ್(Rishabh Pant)​ ಅವರ ಒಂದು ಸಿಕ್ಸರ್​ ಕ್ಯಾಮೆರಮನ್​ಗೆ ತಲುಲಿದೆ. ಈ ಚೆಂಡಿನೇಡಿಗೆ ಗಾಯಗೊಂಡಿರುವ ಕ್ಯಾಮೆರಮನ್​ಗೆ ಪಂತ್​ ಅವರು ಪಂದ್ಯದ ಬಳಿಕ ಕ್ಷಮೆ ಕೇಳಿ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ. ಈ ವಿಡಿಯೊವನ್ನು ಐಪಿಎಲ್​(IPL 2024) ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ.

ಪಂದ್ಯದ ಮುಕ್ತಾಯದ ಬಳಿಕ ರಿಷಭ್​ ಪಂತ್​ ಮತ್ತು ತಂಡದ ಹೆಡ್​ ಕೋಚ್​ ರಿಕಿ ಪಾಂಟಿಂಗ್​ ಈ ಘಟನೆಯ ಬಗ್ಗೆ ಮಾತನಾಡಿ, ಪಂತ್ ಅವರು ನಾನು ಉದ್ದೇಶ ಪೂರ್ವಕವಾಗಿ ಇದನ್ನು ಮಾಡಿಲ್ಲ. ಕ್ಷಮಿಸು ಸಹೋದರ, ಆದಷ್ಟು ಶೀಘ್ರವಾಗಿ ಚೇತರಿಕೆ ಕಾಣುವಂತಾಗಲಿ ಎಂದು ಕ್ಯಾಮೆರಮೆನ್​ಗೆ ಕ್ಷಮೆ ಕೇಳಿದ್ದಾರೆ.

44 ರನ್​ಗೆ ಮೂರು ವಿಕೆಟ್​ ಕಳೆದುಕೊಂಡ ವೇಳೆ ಕ್ರೀಸ್​ಗಿಳಿದ ಎಡಗೈ ಬ್ಯಾಟರ್​ಗಳಾದ ರಿಷಭ್​ ಪಂತ್​ ಮತ್ತು ಅಕ್ಷರ್​ ಪಟೇಲ್​ ಆರಂಭದಲ್ಲಿ ತಾಳ್ಮೆಯುತ ಬ್ಯಾಟಿಂಗ್​ ನಡೆಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅರ್ಧಶತಕ ಪೂರ್ತಿಗೊಂಡ ತಕ್ಷಣ ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿ ಗುಜರಾತ್​ ಬೌಲರ್​ಗಳ ಮೇಲೆ ಸವಾರಿ ಮಾಡಿದರು. 17ನೇ ಓವರ್​ ತನಕ ಕ್ರೀಸ್​ನಲ್ಲಿದ್ದ ಅಕ್ಷರ್​ ಪಟೇಲ್ 5 ಬೌಂಡರಿ ಮತ್ತು 4 ಸಿಕ್ಸರ್​ ನೆರವಿನಿಂದ 66 ರನ್​ ಚಚ್ಚಿದರು. ಈ ಜೋಡಿ 4ನೇ ವಿಕೆಟ್​ಗೆ 113 ರನ್​ ಒಟ್ಟುಗೂಡಿಸಿತು.

ಮೋಹಿತ್​ ಶರ್ಮ ಎಸೆತ ಅಂತಿಮ ಓವರ್​ನಲ್ಲಿ ಪಂತ್​ 4 ಸಿಕ್ಸರ್​ ಮತ್ತು ಒಂದು ಬೌಂಡರಿ ಸಿಡಿಸಿ 31 ರನ್ ದೋಚಿದರು. ಹೀಗಾಗಿ ಅಂತಿಮ 18 ಎಸೆತಗಳಲ್ಲಿ ಡೆಲ್ಲಿಗೆ ಬರೋಬ್ಬರಿ 67 ರನ್​ ಹರಿದು ಬಂತು. ಕೇವಲ 43 ಎಸೆತ ಎದುರಿಸಿದ ಪಂತ್​ ಬರೋಬ್ಬರಿ 8 ಸಿಕ್ಸರ್​ ಮತ್ತು 5 ಬೌಂಡರಿ ಸಿಡಿಸಿ ಅಜೇಯ 88 ರನ್​ ಬಾರಿಸಿದರು.

4 ರನ್​ ಅಂತರದಿಂದ ಗೆದ್ದ ಡೆಲ್ಲಿ

ಇಲ್ಲಿನ ಅರುಣ್​ ಜೇಟ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್​ ರಿಷಭ್​ ಪಂತ್​(88*) ಮತ್ತು ಅಕ್ಷರ್​ ಪಟೇಲ್​(66) ಅವರ ಸಮಯೋಚಿತ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 224 ರನ್​ ಪೇರಿಸಿತು. ಜವಾಬಿತ್ತ ಗುಜರಾತ್ ದಿಟ್ಟ ಹೋರಾಟ ನಡೆಸಿದರೂ 8 ವಿಕೆಟ್​ಗೆ 220 ರನ್​ ಬಾರಿಸಿ ಸಣ್ಣ ಅಂತರದಿಂದ ​ಸೋಲೊಪ್ಪಿಕೊಂಡಿತು. ಡೆಲ್ಲಿ ಈ ಗೆಲುವಿನ ಮೂಲಕ ಪ್ಲೇ ಆಫ್​ ರೇಸ್​ ಜೀವಂತವಾಗಿದೆ.

Exit mobile version