Site icon Vistara News

IPL 2024: ಮುಂಬೈಗೆ ಮತ್ತೆ ರೋಹಿತ್​ ನಾಯಕ; ಸುಳಿವು ನೀಡಿದ ಸಭೆಯ ಫೋಟೊ

Nita Ambani

ಮುಂಬಯಿ: ಮುಂಬೈ ಇಂಡಿಯನ್ಸ್(Mumbai Indians) ತಂಡದ ನಾಯಕತ್ವವನ್ನು ಮತ್ತೊಮ್ಮೆ ರೋಹಿತ್ ಶರ್ಮಾಗೆ(Rohit Sharma) ನೀಡುವ ಕುರಿತು ಮಾತುಕತೆ ನಡೆಯುತ್ತಿದೆ. ರೋಹಿತ್ ಅವರನ್ನು ಮನವೊಲಿಸಲು ಮ್ಯಾನೇಜ್‌ಮೆಂಟ್‌ ಸಭೆ ನಡೆಸಿದೆ ಎನ್ನಲಾಗಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವೈರಲ್​ ಆಗಿರುವ ಫೋಟೊದಲ್ಲಿ ಮುಂಬೈ ಫ್ರಾಂಚೈಸಿಯ ಮಾಲೀಕರಾದ ನೀತು ಅಂಬಾನಿ (Nita Ambani) ಮತ್ತು ಅವರ ಪುತ್ರ ಆಕಾಶ್ ಅಂಬಾನಿ (Akash Ambani) ಹಾಗೂ ಫ್ರಾಂಚೈಸ್‌ನ ಜಾಗತಿಕ ಪ್ರದರ್ಶನದ ಮುಖ್ಯಸ್ಥ ಮಹೇಲಾ ಜಯವರ್ಧನೆ (Mahela Jayawardene) ಮಹತ್ವದ ಸಭೆ ನಡೆಸುತ್ತಿರುವುದು ಕಂಡು ಬಂದಿದೆ. ರೋಹಿತ್​ಗೆ ಮತ್ತೆ ನಾಯಕತ್ವ ನೀಡುವ ಕುರಿತು ನಡೆದ ಸಭೆಯ ಫೋಟೊ ಎಂದು ಹೇಳಲಾಗಿದೆ.

ಹಾರ್ದಿಕ್​ ಪಾಂಡ್ಯಗೆ ನಾಯಕತ್ವ ನೀಡಿದ ವೇಳೆಯೇ ಮುಂಬೈ ಮತ್ತು ರೋಹಿತ್​ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಮುಂಬೈ ಆಡಿದ 2 ಪಂದ್ಯಗಳಲ್ಲಿ ಅತ್ಯಂತ ಹೀನಾಯ ಸೋಲು ಕಂಡಿದೆ. ಪಾಂಡ್ಯ ಬಗ್ಗೆ ಕೋಚ್​ಗಳಿಗೂ ಅಸಮಾಧಾನ ಇದೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದೆ. ಕಳೆದ ಸನ್​ರೈಸರ್ಸ್ ಹೈದರಾಬಾದ್​ ವಿರುದ್ಧ ಸೋಲು ಕಂಡ ಬಳಿಕ ಆಕಾಶ್ ಅಂಬಾನಿ ಮತ್ತು ಟೀಮ್​ ಮ್ಯಾನೇಜ್‌ಮೆಂಟ್‌​ ರೋಹಿತ್​ ಬಳಿ ಚರ್ಚೆ ನಡೆಸುತ್ತಿರುವ ವಿಡಿಯೊ ಮತ್ತು ಫೋಟೊ ವೈರಲ್​ ಆಗಿತ್ತು. ಇನ್ನೊಂದು ಮೂಲಗಳ ಪ್ರಕಾರ ರೋಹಿತ್ ಮತ್ತೆ ತಂಡದ ನಾಯಕತ್ವ ವಹಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ IPL 2024: ಮುಂಬೈ ತಂಡಕ್ಕೆ ಮತ್ತಷ್ಟು ಚಿಂತೆ ಹೆಚ್ಚಿಸಿದ ಸೂರ್ಯಕುಮಾರ್ ಫಿಟ್‌ನೆಸ್‌

ಹಾರ್ದಿಕ್‌ ಅವರ ನಾಯಕತ್ವದ ಬಗ್ಗೆ ತಂಡದ ಕೋಚ್‌ಗಳಿಗೂ ಮತ್ತು ಆಟಗಾರರಿಗೂ ಅಸಮಾಧಾನವಿದೆ ಎನ್ನಲಾಗಿದೆ. ಪ್ರಮುಖವಾಗಿ ಬೌಲರ್‌ಗಳ ನಿರ್ವಹಣೆಯಲ್ಲಿ ಹಾರ್ದಿಕ್‌ ಪಾಂಡ್ಯ ಪದೇಪದೇ ಎಡವಟ್ಟು ಮಾಡುತ್ತಿರುವುದಕ್ಕೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತವಾಗುತ್ತಿದೆ. ತಂಡದ ಪ್ರಧಾನ ವೇಗಿ ಜಸ್​ಪ್ರೀತ್​ ಬುಮ್ರಾ ಅವರಿಗೆ ಇನಿಂಗ್ಸ್​ನ ಮೊದಲ ಓವರ್​ ನೀಡುವ ಬದಲು 5 ಓವರ್​ ಬಳಿಕ ಬೌಲಿಂಗ್​ ನೀಡುತ್ತಿದ್ದಾರೆ. ಇದೇ ವಿಚಾರದಲ್ಲಿ ಹಾರ್ದಿಕ್‌ರ ಮೇಲೆ ಬೌಲಿಂಗ್‌ ಕೋಚ್‌ ಲಸಿತ್‌ ಮಾಲಿಂಗ ಸಿಟ್ಟು ಮಾಡಿಕೊಂಡು ಎದ್ದು ಹೋಗುವಂತೆ ಕಾಣುವ ವಿಡಿಯೋವೊಂದು ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿತ್ತು. ಅಲ್ಲದೆ ಪಂದ್ಯದ ಮುಕ್ತಾಯದ ವೇಳೆಯೂ ಮಾಲಿಂಗ ಅವರು ಪಾಂಡ್ಯ ಜತೆ ಸರಿಯಾಗಿ ಮಾತನಾಡಲು ಕೂಡ ನಿರಾಕರಿಸಿದ್ದರು.

ತಂಡದೊಳಗೆ ಎರಡು ಬಣಗಳಾಗಿವೆ ಎಂದು ಕೂಡ ಹೇಳಲಾಗಿದೆ. ರೋಹಿತ್‌ ಶರ್ಮಾ ಬಣದಲ್ಲಿ ಜಸ್‌ಪ್ರೀತ್‌ ಬುಮ್ರಾ, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ ಸೇರಿ ಇನ್ನೂ ಹಲವರಿದ್ದರೆ, ಹಾರ್ದಿಕ್‌ ಪಾಂಡ್ಯ ಬಣದಲ್ಲಿ ಇಶಾನ್‌ ಕಿಶನ್‌ ಸೇರಿ ಕೆಲವು ಆಟಗಾರರಿದ್ದಾರೆ ಎನ್ನಲಾಗಿದೆ. ಪಾಂಡ್ಯ ಅವರ ಕೆಲ ವರ್ತನೆ ಬಗ್ಗೆ ಸ್ವತಃ ಫ್ರಾಂಚೈಸಿಗೂ ಅಸಮಾಧಾನ ಇದೆ ಎಂದು ವರದಿಯಾಗಿದ್ದು ಮತ್ತೆ ರೋಹಿತ್​ಗೆ ನಾಯಕತ್ವ ನೀಡುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬಂದಿವೆ.

Exit mobile version