ನವದೆಹಲಿ: ಮಂಗಳವಾರ ರಾತ್ರಿ ನಡೆದ ಐಪಿಎಲ್‌ನ 56ನೇ ಪಂದ್ಯದಲ್ಲಿ(IPL 2024) ರಾಜಸ್ಥಾನ್ ರಾಯಲ್ಸ್(Rajasthan Royals) ಮತ್ತು ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್(Sanju Samson) ತಮ್ಮ ವಿವಾದಾತ್ಮಕ ಕ್ಯಾಚ್ಗೆ ಔಟ್ ನೀಡಿದ್ದಕ್ಕಾಗಿ ಅಂಪೈರ್ ಜತೆ ವಾಗ್ವಾದ ನಡೆಸಿದ್ದರು. ಈ ತಪ್ಪಿಗಾಗಿ ಸಂಜುಗೆ ಪಂದ್ಯ ಶುಲ್ಕದ ಶೇ.30 ರಷ್ಟು ದಂಡ ವಿಧಿಸಲಾಗಿದೆ.
ಐಪಿಎಲ್ನಲ್ಲಿ 14 ಕೋಟಿ ರೂ. ಸಂಭಾವನೆ ಪಡೆಯುತ್ತಿರುವ ಸಂಜು ಸ್ಯಾಮ್ಸನ್ ಶೇ.30ರ ಅನ್ವಯದಲ್ಲಿ 30 ಲಕ್ಷ ರೂ. ದಂಡ ಪಾವತಿಸಬೇಕಿದೆ. ಜತೆಗೆ ಇಂತಹ ತಪ್ಪುಗಳನ್ನು ಪುನರಾವರ್ತಿಸದಂತೆ ಮ್ಯಾಚ್ ರೆಫ್ರಿ ಎಚ್ಚರಿಕೆ ನೀಡಿದ್ದಾರೆ. ಒಂದೊಮ್ಮೆ ಮತ್ತೆ ಸಂಜು ಈ ರೀತಿಯ ತಪ್ಪು ಮಾಡಿದರೆ ಒಂದು ಪಂದ್ಯದ ನಿಷೇಧಕ್ಕೆ ಗುರಿಯಾಗಬೇಕಾಗುತ್ತದೆ.
ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಸ್ಯಾಮ್ಸನ್ 16ನೇ ಓವರ್ನ 4ನೇ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ್ದರು. ಬೌಂಡರಿ ಲೈನ್ನಲ್ಲಿದ್ದ ಶಾಯ್ ಹೋಪ್ ಅವರು ಈ ಕ್ಯಾಚ್ ಪಡೆದರು. ಹೋಪ್ ಕಾಲು ಬೌಂಡರಿ ಲೈನ್ಗೆ ತಗುಲಿದಂತೆ ಕಂಡು ಬಂದ ಕಾರಣ ಮೂರನೇ ಅಂಪೈರ್ ಇದನ್ನು ಪರೀಕ್ಷಿಸಿದ ಬಳಿಕ ಔಟ್ ಎಂದು ತೀರ್ಪು ನೀಡಿದರು. ಈ ವೇಳೆ ಸಂಜು ಮರು ತೀರ್ಪನ್ನು ಮರು ಪರಿಶೀಲಿಸುವಂತೆ ಫೀಲ್ಡ್ ಅಂಪೈರ್ ಜತೆ ವಾಗ್ವಾದ ನಡೆಸಿದರು. ಅಂಪೈರ್ ತಮ್ಮ ನಿರ್ಧಾರದ ಬಗ್ಗೆ ಮಾಹಿತಿ ನೀಡಿದರೂ ಕೂಡ ಸಂಜು ಇದಕ್ಕೆ ಒಪ್ಪದೆ ಅಂಪೈರ್ ಜತೆ ವಾಗ್ವಾದ ನಡೆಸಿದರು. ಇದು ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ಮೊದಲ ಹಂತದ ಅಪರಾಧವಾಗಿದೆ. ಹೀಗಾಗಿ ಅವರಿಗೆ ಪಂದ್ಯ ಶುಲ್ಕದ ಶೇ.30 ರಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ IPL 2024 Points Table: ಡೆಲ್ಲಿಗೆ ಗೆಲುವು ಅಂಕಪಟ್ಟಿಯಲ್ಲಿ ಕುಸಿತ ಕಂಡ ಲಕ್ನೋ
ಸಂಜು ಸ್ಯಾಮ್ಸನ್ ಕ್ರೀಸ್ನಲ್ಲಿರುವ ತನಕ ಪಂದ್ಯ ರಾಜಸ್ಥಾನ್ ಪರವಾಗಿತ್ತು. ಆದರೆ, ಸಂಜು ವಿಕೆಟ್ ಪತನದ ಬಳಿಕ ಏಕಾಏಕಿ ಕುಸಿತ ಕಂಡ ರಾಜಸ್ತಾನ್ ಸೋಲಿಗೆ ಸಿಲುಕಿತು. ಕುಲ್ದೀಪ್ ಯಾದವ್ 25 ರನ್ಗಳಗೆ ಪ್ರಮುಖ 2 ವಿಕೆಟ್ ಉರುಳಿಸುವ ಮೂಲಕ ಕೊನೇ ಹಂತದಲ್ಲಿ ಪಂದ್ಯಕ್ಕೆ ತಿರುವು ತಂದುಕೊಟ್ಟರು. ಸಂಜು 46 ಎಸೆತಕ್ಕೆ 86 ರನ್ ಬಾರಿಸಿ ಹೋಪ್ ಹಿಡಿದ ಸೂಪರ್ ಕ್ಯಾಚ್ಗೆ ವಿಕೆಟ್ ಕೈಚೆಲ್ಲಿದರು.
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 221 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 8 ವಿಕೆಟ್ಗೆ 201 ರನ್ ಬಾರಿಸಿ ಸೋಲೊಪ್ಪಿಕೊಂಡಿತು.