Site icon Vistara News

IPL 2024: ಅಂದು ಹರಾಜಿನಲ್ಲಿ ಆದ ಪ್ರಮಾದ ಇಂದು ಪಂಜಾಬ್ ತಂಡಕ್ಕೆ ವರದಾನ

IPL 2024

ಅಹಮದಾಬಾದ್​​: ಕಳೆದ ಡಿಸೆಂಬರ್​ನಲ್ಲಿ ನಡೆದ ಐಪಿಎಲ್(IPL 2024)​ ಆಟಗಾರರ ಹರಾಜಿನಲ್ಲಿ ಪ್ರಮಾದದಿಂದ ಪಂಜಾಬ್‌ ಕಿಂಗ್ಸ್‌(Punjab Kings) ತಂಡ ಸೇರಿದ ಶಶಾಂಕ್ ಸಿಂಗ್‌(Shashank Singh) ಇದೀಗ ತಂಡದ ಆಪದ್ಬಾಂಧವ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಪಂಜಾಬ್​ ಪಾಲಿಗೆ ಗೆಲುವಿನ ಹೀರೊ ಎನಿಸಿಕೊಂಡಿದ್ದಾರೆ.

ಹೌದು, ತನಗೆ ಬೇಕಿಲ್ಲದ ಆಟಗಾರನೊಬ್ಬನನ್ನು ಪಂಜಾಬ್‌ ಕಿಂಗ್ಸ್‌ (PBKS, Punjab Kings) ಕಳೆದ ಹರಾಜಿನಲ್ಲಿ ಸಣ್ಣ ಎಡವಟ್ಟಿನಿಂದ ಆಲ್​ರೌಂಡರ್​ ಶಶಾಂಕ್​ ಸಿಂಗ್​ರನ್ನು ಖರೀದಿ ಮಾಡಿತ್ತು. ದೇಶೀಯ ಆಟಗಾರರ ಮಾರಾಟದ ಕೊನೇ ಸುತ್ತಿನಲ್ಲಿ ಶಶಾಂಕ್​ ಸಿಂಗ್​ ಎಂಬ ಆಟಗಾರ ಹರಾಜಿಗೆ ಬಂದಾಗ ಪಂಜಾಬ್​ ಕಿಂಗ್ಸ್​ ತಂಡದ ಸಹ-ಮಾಲಕಿ ಪ್ರೀತಿ ಝಿಂಟಾ ತಂಡದ ಇತರ ಸದಸ್ಯರೊಂದಿಗೆ ಸಂಕ್ಷಿಪ್ತ ಚರ್ಚೆಯ ನಂತರ ಪ್ಯಾಡಲ್ ಅನ್ನು ಎತ್ತಿದರು. ಆರಂಭಿಕ ಬಿಡ್ ಸ್ವೀಕರಿಸಿದ ನಂತರ, ಹರಾಜುದಾರರಾದ ಮಲ್ಲಿಕಾ ಸಾಗರ್ ಅವರು ವಾಡಿಕೆಯ ವಿಧಾನವನ್ನು ಅನುಸರಿಸಿದರು. ಶಶಾಂಕ್‌ಗಾಗಿ ಹರಾಜು ಮೊತ್ತ ಇನ್ನಷ್ಟು ಎತ್ತರಿಸಲು ಬೇರೆ ಯಾವುದೇ ತಂಡ ಮುಂದಾಗಲಿಲ್ಲ. ಹೀಗಾಗಿ ಕೊನೆಯ ಸೂಚನೆ ನೀಡಿ 20 ಲಕ್ಷ ರೂ. ಮೂಲಬೆಲೆಗೆ ಶಶಾಂಕ್‌ ಖರೀದಿಯನ್ನು ಪಂಜಾಬ್​ಗೆ​ ಹರಾಜುಗಾರ್ತಿ ಮಲ್ಲಿಕಾ ಸಾಗರ್‌ ಖಚಿತಪಡಿಸಿ ಸುತ್ತಿಗೆ ಬಡಿದರು.

ಇದಾಗಿ ನಂತರದ ಆಟಗಾರ ತನಯ್ ತ್ಯಾಗರಾಜನ್ ಕಡೆಗೆ ಹರಾಜುದಾರರು ಮುಂದುವರಿದರು. ಆ ಕ್ಷಣದಲ್ಲಿ ಗೊಂದಲಕ್ಕೊಳಗಾಗಿದ್ದ ಪಂಜಾಬ್​ ಸಹ-ಮಾಲೀಕ ನೆಸ್ ವಾಡಿಯಾ, ಮುಖ್ಯ ಕೋಚ್ ಟ್ರೆವರ್ ಬೇಲಿಸ್ ಮತ್ತಿತರರು ತಮ್ಮ ತಮ್ಮಲ್ಲೇ ವಾಗ್ವಾದ ನಡೆಸಿ ಶಶಾಂಕ್‌ ಸಿಂಗ್‌ ತಮಗೆ ಬೇಡವೆಂದು, ಇದು ಪ್ರಮಾದದಿಂದ ಆಗಿದೆ ಎಂದು ಸೂಚಿಸಿದರು. ಆದರೆ ಹರಾಜುಗಾರ್ತಿ ಮಲ್ಲಿಕಾ ಸಾಗರ್ ಬಿಡ್​ ವಾಪಸ್​ ಪಡೆಯಲು ಅಥವಾ ಶಶಾಂಕ್​ ಸಿಂಗ್​ರನ್ನು ಮರು ಹರಾಜಿಗೆ ಒಳಪಡಿಸಲು ನಿರಾಕರಿಸಿದರು.

ಇದನ್ನೂ ಓದಿ IPL 2024 Points Table: ರೋಚಕ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಪಂಜಾಬ್​

ನಿಯಮದ ಪ್ರಕಾರ ಹರಾಜು ಕೂಗುವಿಕೆ ಅಂತಿಮಗೊಂಡು ಸುತ್ತಿಗೆ ಇಳಿದ ಬಳಿಕ ಖರೀದಿಯನ್ನು ಮರಳಿಸುವಂತಿಲ್ಲ. ಹೀಗಾಗಿ ಶಶಾಂಕ್‌ ಸಿಂಗ್‌ ಪಂಜಾಬ್‌ ಕಿಂಗ್ಸ್‌ ತಂಡ ಸೇರಿದರು. ಪಂಜಾಬ್​ ಖರೀದಿಸಲು ಬಯಸಿದ್ದು ಬಂಗಾಳದ 20 ವರ್ಷದ ಬ್ಯಾಟರ್​ ಶಶಾಂಕ್​ ಸಿಂಗ್​ ಆಗಿತ್ತು. ಅವರೂ 20 ಲಕ್ಷ ರೂ. ಮೂಲಬೆಲೆ ಹೊಂದಿದ್ದರು. ಇದೀಗ ಅಂದು ತಪ್ಪಾಗಿ ತಂಡ ಸೇರಿದ ಆಟಗಾರನೇ ತಂಡದ ಪಾಲಿಗೆ ವರವಾಗಿದ್ದಾರೆ.

ಗುರುವಾರ ನಡೆದ ಗುಜರಾತ್​ ವಿರುದ್ಧದ ಬೃಹತ್​ ಮೊತ್ತದ ಪಂದ್ಯದಲ್ಲಿ ಪಂಜಾಬ್​ ತಂಡದ ನಂಬಿಕಸ್ತ ಆಟಗಾರರು ಅಲ್ಪ ಮೊತ್ತಕ್ಕೆ ವಿಕೆಟ್​ ಕಳೆದುಕೊಂಡು ಪೆವಿಲಿಯನ್​ ಸೇರಿದಾಗ ತಂಡದ ಗೆಲುವಿಗಾಗಿ ಟೊಂಕ ಕಟ್ಟಿ ನಿಂತ ಶಶಾಂಕ್​ ಸಿಂಗ್ ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟರು. 29 ಎಸೆತಗಳಿಂದ 6 ಬೌಂಡರಿ ಮತ್ತು 4 ಸಿಕ್ಸರ್​ ಸಿಡಿಸಿ ಅಜೇಯ 61 ರನ್​ಗಳಿಂದ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂದು ಈ ಆಟಗಾರ ತನಗೆ ಬೇಡ ಎಂದು ಹೇಳಿದ್ದ ಪಂಜಾಬ್​ ಕಿಂಗ್ಸ್​ ಇಂದು ಈ ಆಟಗಾರ ಪ್ರತಿ ಪಂದ್ಯದಲ್ಲಿಯೂ ಬೇಕು ಎಂದು ಹೇಳುತ್ತಿದೆ.

Exit mobile version