ಮುಂಬಯಿ: 17ನೇ ಆವೃತ್ತಿಯ ಐಪಿಎಲ್ ಟೂರ್ನಿ(IPL 2024) ಮಾರ್ಚ್ 22ರಿಂದ ಆರಂಭಗೊಳ್ಳಿದೆ ಎಂದು ಈಗಾಗಲೇ ವರದಿಯಾಗಿದೆ. ಆದರೆ, ಮಾಜಿ ಚಾಂಪಿಯನ್ ಹಾಗೂ ಹಾಲಿ ರನ್ನರ್ ಅಪ್ ಗುಜರಾತ್ ಟೈಟಾನ್ಸ್(Gujarat Titans) ತಂಡಕ್ಕೆ ಆತಂಕವೊಂದು ಎದುರಾಗಿದೆ. ತಂಡದ ಸ್ಟಾರ್ ಸ್ಪಿನ್ ಆಲ್ರೌಂಡರ್ ಅಫಘಾನಿಸ್ತಾನದ ರಶೀದ್ ಖಾನ್(Rashid Khan) ಅವರು ಟೂರ್ನಿಗೆ ಅಲಭ್ಯರಾಗುವ ಸಾಧ್ಯತೆಯೊಂದು ಕಂಡುಬಂದಿದೆ.
ಗಾಯಕ್ಕೆ ತುತ್ತಾಗಿ ಚೇತರಿಕೆ ಕಾಣುತ್ತಿರುವ ರಶೀದ್ ಖಾನ್ ಅವರು ಪಾಕಿಸ್ತಾನ್ ಸೂಪರ್ ಲೀಗ್‌ನ ಮುಂಬರುವ ಆವೃತ್ತಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಅವರು ಐಪಿಎಲ್ ಟೂರ್ನಿಗೂ ಅಲಭ್ಯರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದು ಟೈಟಾನ್ಸ್ ತಂಡಕ್ಕೆ ಆತಂಕ ಉಂಟುಮಾಡಿದೆ. ಅವರು ಅಲಭ್ಯರಾದರೆ ತಂಡಕ್ಕೆ ಭಾರೀ ಹಿನ್ನಡೆಯಾಗಲಿದೆ. ಏಕೆಂದರೆ ಈಗಾಗಲೇ ತಂಡದ ನಾಯಕನಾಗಿದ್ದ ಹಾರ್ದಿಕ್ ಪಾಮಡ್ಯ ಅವರು ತಂಡ ತೊರೆದು ಮುಂಬೈ ಸೇರಿದ್ದಾರೆ. ರಶೀದ್ ಕೂಡ ಹೊರಗುಳಿದರೆ ಇಬ್ಬರು ಸ್ಟಾರ್ ಆಟಗಾರರನ್ನು ಕಳೆದುಕೊಂಡ ಸಂಕಟಕ್ಕೆ ಗುಜರಾತ್ ತಂಡ ಸಿಲುಕಲಿದೆ.
Thank you everyone for your well wishes 🙏
— Rashid Khan (@rashidkhan_19) November 23, 2023
The surgery went well, now on the road to recovery 💪
Can’t wait to be back on the field 💙 pic.twitter.com/zxLYKFaoYE
ಸದ್ಯ ರಶೀದ್ ಖಾನ್ ಶಸ್ತ್ರಚಿಕಿತ್ಸೆಯ ನಂತರ ಪುನರ್ವಸತಿಗೆ ಒಳಗಾಗುತ್ತಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ರಶೀದ್ ಖಾನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಭಾರತ ವಿರುದ್ಧ ಇತ್ತೀಗೆಗೆ ನಡೆದಿದ್ದ 3 ಪಂದ್ಯಗಳ ಟಿ20 ಸರಣಿಗೆ ರಶೀದ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಸರಣಿ ಆರಂಭಕ್ಕೂ ಮುನ್ನವೇ ಅವರು ಫಿಟ್ ಆಗಿಲ್ಲ ಎಂದು ಅವರನ್ನು ಸರಣಿಯಿಂದ ಕೈ ಬಿಡಲಾಗಿತ್ತು. ಇದೀಗ ಅವರು ಪಾಕ್ ಪ್ರೀಮಿಯರ್ ಲೀಗ್ನಿಂದಲೂ ಹಿಂದೆ ಸರಿದಿರುವುದನ್ನು ಗಮನಿಸುವಾಗ ಐಪಿಎಲ್ನಿಂದಲೂ ಹಿಂದೆ ಸರಿಯಲಿದ್ದಾರಾ ಎನ್ನುವ ಪ್ರಶ್ನೆಯೊಂದು ಮೂಡಿದೆ.
ಇದನ್ನೂ ಓದಿ IPL 2024: ಮೇ 26 ರಂದು ನಡೆಯಲಿದೆ ಐಪಿಎಲ್ ಫೈನಲ್ ಪಂದ್ಯ!
ರಶೀದ್ ಖಾನ್ 2017ರಲ್ಲಿ ಐಪಿಎಲ್ ಪದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ ರಶೀದ್ ಒಟ್ಟು 109 ಪಂದ್ಯಗಳನ್ನು ಆಡಿದ್ದು 139 ವಿಕೆಟ್ ಕಬಳಿಸಿದ್ದಾರೆ. ಕಳೆದ ಎರಡು ಆವೃತ್ತಿಯಲ್ಲಿ ಸ್ಥಿರ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಗುಜರಾತ್ಗೆ ಹಲವು ಪಂದ್ಯಗಳಲ್ಲಿ ಗೆಲುವು ತಂದು ಕೊಟ್ಟಿದ್ದರು.
ಗುಜರಾತ್ ಟೈಟಾನ್ಸ್ ಖರೀದಿಸಿದ ಆಟಗಾರರು: ಅಜ್ಮತುಲ್ಲಾ ಒಮರ್ಜೈ (0.5 ಕೋಟಿ), ಉಮೇಶ್ ಯಾದವ್ (5.8 ಕೋಟಿ), ಶಾರುಖ್ ಖಾನ್ (7.4 ಕೋಟಿ), ಸುಶಾಂತ್ ಮಿಶ್ರಾ (2.2 ಕೋಟಿ), ಕಾರ್ತಿಕ್ ತ್ಯಾಗಿ (0.6 ಕೋಟಿ), ಸ್ಪೆನ್ಸರ್ ಜಾನ್ಸನ್ (10 ಕೋಟಿ), ರಾಬಿನ್ ಮಿಂಜ್ (3.6 ಕೋಟಿ), ಮಾನವ್ ಸುತಾರ್ (0.2 ಕೋಟಿ).
ಗುಜರಾತ್ ಟೈಟಾನ್ಸ್ ತಂಡ: ಶುಬ್ಮನ್ ಗಿಲ್ (ನಾಯಕ), ಡೇವಿಡ್ ಮಿಲ್ಲರ್, ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ, ಕೇನ್ ವಿಲಿಯಮ್ಸನ್, ಅಭಿನವ್ ಮನೋಹರ್, ಬಿ ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್, ಜಯಂತ್ ಯಾದವ್, ರಾಹುಲ್ ತೆವಾಟಿಯಾ, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಸಾಯಿ ಕಿಶೋರ್, ರಶೀದ್ ಖಾನ್, ಜೋಶುವಾ ಲಿಟಲ್, ಮೋಹಿತ್ ಶರ್ಮಾ, ಅಜ್ಮತುಲ್ಲಾ ಒಮರ್ಜೈ, ಉಮೇಶ್ ಯಾದವ್, ಶಾರುಖ್ ಖಾನ್, ಸುಶಾಂತ್ ಮಿಶ್ರಾ, ಕಾರ್ತಿಕ್ ತ್ಯಾಗಿ, ಸ್ಪೆನ್ಸರ್ ಜಾನ್ಸನ್, ರಾಬಿನ್ ಮಿಂಜ್, ಮಾನವ್ ಸುತಾರ್.