ಮುಂಬಯಿ: ಸೋಮವಾರ ರಾತ್ರಿ ನಡೆದ ಐಪಿಎಲ್ನ(IPL 2024) 55ನೇ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್ ನಡೆಸಿದ ಹಾರ್ಡ್ ಹಿಟ್ಟರ್ ಸೂರ್ಯಕುಮಾರ್ ಯಾದವ್(Suryakumar Yadav) ಅವರು ಶತಕ ಬಾರಿಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಭಾರತೀಯ ಆಟಗಾರರ ಪೈಕಿ ಜಂಟಿ ಮೂರನೇ ಸ್ಥಾನ ಪಡೆದಿದ್ದಾರೆ. ಇದು ಸೂರ್ಯ ಅವರ 6ನೇ ಟಿ20 ಶತಕವಾಗಿದೆ.
ಟಿ20ಯಲ್ಲಿ ಅತ್ಯಧಿಕ ಶತಕ ಬಾರಿಸಿದ ಭಾರತೀಯ ಆಟಗಾರ ಎನ್ನುವ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿದೆ. ವಿರಾಟ್ 9 ಶತಕ ಬಾರಿಸಿದ್ದಾರೆ. ಇದರಲ್ಲಿ 7 ಶತಕ ಐಪಿಎಲ್ನಿಂದ ಮೂಡಿ ಬಂದಿದೆ. ಇನ್ನೆರಡು ಶತಕ ಭಾರತ ಪರ ದಾಖಲಾಗಿದೆ. 8 ಶತಕ ಬಾರಿಸಿದ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ ದ್ವಿತೀಯ ಸ್ಥಾನಿಯಾಗಿದ್ದಾರೆ. ಋತುರಾಜ್ ಗಾಯಕ್ವಾಡ್, ಕೆ.ಎಲ್ ರಾಹುಲ್ ಮತ್ತು ಸೂರ್ಯಕುಮಾರ್ ತಲಾ 6 ಶತಕ ಬಾರಿಸಿ ಜಂಟಿ ಮೂರನೇ ಸ್ಥಾನ ಪಡೆದಿದ್ದಾರೆ.
ಅತ್ಯಧಿಕ ಶತಕ ಬಾರಿಸಿದ ಭಾರತೀಯ ಬ್ಯಾಟರ್ಗಳು
ವಿರಾಟ್ ಕೊಹ್ಲಿ-9 ಶತಕ
ರೋಹಿತ್ ಶರ್ಮ-8 ಶತಕ
ಕೆ.ಎಲ್ ರಾಹುಲ್-6 ಶತಕ
ಋತುರಾಜ್ ಗಾಯಕ್ವಾಡ್-6 ಶತಕ
ಸೂರ್ಯಕುಮಾರ್ ಯಾದವ್-6 ಶತಕ
ಸೂರ್ಯಕುಮಾರ್ ಯಾದವ್ ಅವರು ಹೈದರಾಬಾದ್ ವಿರುದ್ಧ 51 ಎಸೆತ ಎದುರಿಸಿ 6 ಸಿಕ್ಸರ್ ಮತ್ತು 12 ಬೌಂಡರಿ ಬಾರಿಸಿ ಅಜೇಯ 102 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ವಾಂಖೆಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಮುಂಬಯಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ತಂಡ ತನ್ನ ಪಾಲಿನ 20 ಓವರ್ಗಳಲ್ಲಿ 8 ವಿಕೆಟ್ಗೆ 173 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬೈ ತಂಡ ಆರಂಭಿಕ ಹಿನ್ನಡೆ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಅವರ ಅದ್ಭುತ್ ಇನಿಂಗ್ಸ್ ನೆರವಿನಿಂದ ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು 174 ರನ್ ಬಾರಿಸಿ ಗೆಲುವು ಸಾಧಿಸಿತು.
ಇದನ್ನೂ ಓದಿ IPL 2024 Points Table: ಕೊನೆಯ ಸ್ಥಾನದಿಂದ ಮೇಲೆದ್ದ ಮುಂಬೈ ಇಂಡಿಯನ್ಸ್
ಮುಂಬೈ ಇಂಡಿಯನ್ಸ್(Mumbai Indians ) ಈ ಗೆಲುವಿನಿಂದ ಅಂಕಪಟ್ಟಿಯಲ್ಲಿ(IPL 2024 Points Table) ಕೊನೆಯ ಸ್ಥಾನದಿಂದ ಮೇಲೆದ್ದು 9ನೇ ಸ್ಥಾನಿಯಾಗಿದೆ. ಹಾಲಿ ರನ್ನರ್ ಅಪ್ ಗುಜರಾತ್ ಟೈಟಾನ್ಸ್ ಕೊನೆಯ ಸ್ಥಾನಕ್ಕೆ ಕುಸಿದಿದೆ. ಹೈದರಾಬಾದ್ ಸೋಲು ಕಂಡರೂ ಈ ಹಿಂದಿನಂತೆ ನಾಲ್ಕನೇ ಸ್ಥಾನದಲ್ಲೇ ಮುಂದುವರಿದಿದೆ. ಇಂದು ನಡೆಯುವ ಪಂದ್ಯಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದೆ. ಡೆಲ್ಲಿಗೆ ಪ್ಲೇ ಆಫ್ ರೇಸ್ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ರಾಜಸ್ಥಾನ್ ಗೆದ್ದರೆ ಮೊದಲ ತಂಡವಾಗಿ ಪ್ಲೇ ಆಫ್ಗೆ ಅಧಿಕೃತ ಎಂಟ್ರಿ ಕೊಡಲಿದೆ.