Site icon Vistara News

IPL 2024: ಆರ್​ಸಿಬಿ ವಿರುದ್ಧ ಅಬ್ಬರಿಸಿ ಟಿ20 ಕ್ರಿಕೆಟ್​ನಲ್ಲಿ ದಾಖಲೆ ಬರೆದ ಸೂರ್ಯಕುಮಾರ್

IPL 2024

ಮುಂಬಯಿ: ಟೀಮ್​ ಇಂಡಿಯಾದ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್ ಯಾದವ್(Suryakumar Yadav) ಅವರು ಟಿ20 ಕ್ರಿಕೆಟ್​ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಆರ್​ಸಿಬಿ(RCB) ವಿರುದ್ಧದ ಪಂದ್ಯದಲ್ಲಿ(IPL 2024) ವಿಸ್ಫೋಟಕ ಬ್ಯಾಟಿಂಗ್​ ನಡೆಸುವ ಮೂಲಕ ಕೇವಲ 19 ಎಸೆತಗಳಲ್ಲಿ 52 ರನ್​ ಬಾರಿಸಿ ಮಿಂಚಿದ್ದರು. ಇದೇ ವೇಳೆ ಅವರು ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 7000 ರನ್‌ಗಳ ಮೈಲುಗಲ್ಲು ತಲುಪಿದ ನಾಲ್ಕನೇ ಭಾರತೀಯ ಆಟಗಾರ ಎನಿಸಿಕೊಂಡರು.

33 ವರ್ಷದ ಸೂರ್ಯಕುಮಾರ್​ ಗಾಯದಿಂದಾಗಿ ಆರಂಭಿಕ ಕೆಲ ಐಪಿಎಲ್​ ಪಂದ್ಯ ಆಡಿರಲಿಲ್ಲ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯವ ಮೂಲಕ ಈ ಬಾರಿಯ ಮೊದಲ ಐಪಿಎಲ್​ ಪಂದ್ಯ ಆಡಿದ್ದರು. ಆದರೆ, ಆ ಪಂದ್ಯದಲ್ಲಿ ಮೊದಲ ಎಸೆತಕ್ಕೆ ಕ್ಯಾಚ್​ ನೀಡಿ ಡಕೌಟ್​ ಆಗಿ ನಿರಾಸೆ ಅನುಭವಿಸಿದ್ದರು. ಗುರುವಾರ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಇಂಪ್ಯಾಕ್ಟ್​ ಆಟಗಾರನಾಗಿ ಆಡಿದ ಅವರು ಪ್ರಚಂಡ ಬ್ಯಾಟಿಂಗ್​ ಮೂಲಕ ಸಿಕ್ಸರ್​ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದರು.

ಸೂರ್ಯಕುಮಾರ್ ಟಿ20ಯಲ್ಲಿ 7 ಸಾವಿರ ರನ್​ಗಳನ್ನು 249ನೇ ಇನ್ನಿಂಗ್ಸ್‌ನಲ್ಲಿ ಪೂರ್ತಿಗೊಳಿಸಿದರು. ಭಾರತೀಯ ದಾಖಲೆ ಕೆ.ಎಲ್​ ರಾಹುಲ್​ ಹೆಸರಿನಲ್ಲಿದೆ. ರಾಹುಲ್​ 197 ಇನಿಂಗ್ಸ್​ನಲ್ಲಿ ಈ ಮೈಲುಗಲ್ಲು ತಲುಪಿದ್ದರು. ವಿರಾಟ್​ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 2017 ರಲ್ಲಿ ರಾಜ್‌ಕೋಟ್‌ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಯಲ್ಲಿ ತಮ್ಮ 212 ನೇ ಇನ್ನಿಂಗ್ಸ್‌ನಲ್ಲಿ ಈ ಹೆಗ್ಗುರುತನ್ನು ತಲುಪಿದ್ದರು. ಶಿಖರ್ ಧವನ್ ತಮ್ಮ 246ನೇ ಇನ್ನಿಂಗ್ಸ್‌ನಲ್ಲಿ ಈ ಮೈಲುಗಲ್ಲು ತಲುಪಿ ಮೂರನೇ ಸ್ಥಾನದಲ್ಲಿದ್ದಾರೆ. ಸೂರ್ಯಕುಮಾರ್​ಗೆ ನಾಲ್ಕನೇ ಸ್ಥಾನ.

ಇದನ್ನೂ ಓದಿ IPL 2024: ಮೈದಾನದಲ್ಲೇ ಕಾರ್ತಿಕ್​​ಗೆ ಬಿಗ್​ ಆಫರ್​ ನೀಡಿದ ರೋಹಿತ್​; ವಿಡಿಯೊ ವೈರಲ್​

ವಿಶ್ವ ಕ್ರಿಕೆಟ್​ನಲ್ಲಿ ಅತಿ ಕಡಿಮೆ ಇನಿಂಗ್ಸ್​ನಲ್ಲಿ ಈ ಸಾಧನೆ ಮಾಡಿದ ದಾಖಲೆ ಪಾಕಿಸ್ತಾನದ ನಾಯಕ ಬಾಬರ್​ ಅಜಂ ಹೆಸರಿನಲ್ಲಿದೆ. ಬಾಬರ್​ 187 ಇನಿಂಗ್ಸ್​ನಲ್ಲಿ ಈ ದಾಖಲೆ ಬರೆದಿದ್ದರು. ಕ್ರಿಸ್ ಗೇಲ್ (192) 2ನೇ ಮತ್ತು ರಾಹುಲ್ ಮೂರನೇ ಸ್ಥಾನದಲ್ಲಿದ್ದಾರೆ.

ಪಂದ್ಯ ಗೆದ್ದ ಮುಂಬೈ


ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಬೃಹತ್​ ಮೊತ್ತದ ಮೇಲಾಟದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ ತಂಡ, ದಿನೇಶ್​ ಕಾರ್ತಿಕ್​(53*), ರಜತ್​ ಪಾಟಿದಾರ್​(50) ಮತ್ತು ನಾಯಕ ಫಾಫ್​ ಡುಪ್ಲೆಸಿಸ್(61)​ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 196 ರನ್​ ಬಾರಿಸಿತು. ದೊಡ್ಡ ಮೊತ್ತವನ್ನು ಬಹಳ ಜೋಶ್​ನಿಂದಲೇ ಬೆನ್ನತ್ತಿದ ಮುಂಬೈ ಇಶಾನ್​ ಕಿಶನ್​ ಮತ್ತು ಸೂರ್ಯಕುಮಾರ್​ ಅವರ ಪ್ರಚಂಡ ಬ್ಯಾಟಿಂಗ್​ ನೆರವಿನಿಂದ 15.3 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 199 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

Exit mobile version