ಬೆಂಗಳೂರು: ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯಿಂದ ವೈಯಕ್ತಿಕ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದಿದ್ದ ವಿರಾಟ್ ಕೊಹ್ಲಿ(Virat Kohli), ತಮ್ಮ ಪತ್ನಿ ಅನುಷ್ಕಾ ಶರ್ಮ ಅವರ ಹೆರಿಗೆಯ ಕಾರಣದಿಂದ ಲಂಡನ್ಗೆ ತೆರೆಳಿದ್ದರು. ಜನವರಿ 15ರಂದು ಕೊಹ್ಲಿ ಪತ್ನಿ ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸದ್ಯ ಲಂಡನ್ನಲ್ಲಿಯೇ ಇರುವ ಕೊಹ್ಲಿ ಐಪಿಎಲ್ ಆಡಲು ಭಾರತಕ್ಕೆ ಬರುವ ದಿನಾಂಕ ರಿವೀಲ್ ಆಗಿದೆ.
ಈಗಾಗಲೇ ನಾಯಕ ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್, ಅಲ್ಜಾರಿ ಜೋಸೆಫ್ ಸೇರಿ ತಂಡದ ಬಹುತೇಕ ಎಲ್ಲ ಆಟಗಾರರು ಕೂಡ ಆರ್ಸಿಬಿ ಕ್ಯಾಂಪ್ ಸೇರಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಮಾತ್ರ ತಂಡದ ಕ್ಯಾಂಪ್ ಸೇರಿಲ್ಲ. ಕೊಹ್ಲಿ ಮಾರ್ಚ್ 17ರಂದು ಆರ್ಸಿಬಿ ಕ್ಯಾಂಪ್ ಸೇರಲಿದ್ದಾರೆ ಎಂದು ಫ್ರಾಂಚೈಸಿ ಮೂಲಗಳು ಮಾಹಿತಿ ನೀಡಿದೆ. ಮಾರ್ಚ್ 19ರಂದು ನಡೆಯುವ ‘ಆರ್ಸಿಬಿ ಅನ್ಬಾಕ್ಸ್’ ಕಾರ್ಯಕ್ರಮದಲ್ಲಿಯೂ ಕೊಹ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಈ ಕಾರ್ಯಕ್ರಮ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆರ್ಸಿಬಿ ಮೊದಲ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಈ ಪಂದ್ಯ ಈ ಬಾರಿಯ ಟೂರ್ನಿಯ ಉದ್ಘಾಟನ ಪಂದ್ಯವಾಗಿದೆ. ಪಂದ್ಯಕ್ಕೆ ಎಂ.ಎ. ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ.
ಇದನ್ನೂ ಓದಿ IPL 2024: ಐಪಿಎಲ್ನ 17 ಆವೃತ್ತಿಗಳನ್ನು ಆಡುವ ಆಟಗಾರರಿವರು!
ಆರ್ಸಿಬಿ ಹೆಸರಿನಲ್ಲಿ ಬದಲಾವಣೆ ಸಾಧ್ಯತೆ?
ಆರ್ಸಿಬಿ ಈ ಬಾರಿ ತನ್ನ ಹೆಸರಿನಲ್ಲಿ ಬದಲಾವಣೆ ತರುವ ಸೂಚನೆಯೊಂದು ಲಭಿಸಿದೆ. ಇದಕ್ಕೆ ಪೂರಕವಾದ ಪ್ರೋಮೊವೊಂದನ್ನು ಕೂಡ ಬುಧವಾರ ತನ್ನ ಅಧಿಕೃತ ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದೆ. ಕಾಂತಾರ ಸಿನೆಮಾದಲ್ಲಿ ಶಿವನಾಗಿ ಕಾಣಿಸಿಕೊಂಡಿರುವ ರಿಷಬ್ ಶೆಟ್ಟಿ, ಅವರು ಬಾರು ಕೋಲು ಹಿಡಿದು ಕಂಬಳದ ಕೋಣಗಳನ್ನು ಓಡಿಸಲೆಂದು ಬರುತ್ತಾರೆ. ಈ ವೇಳೆ ಮೂರು ಕೋಣಗಳು ನಿಂತಿರುತ್ತದೆ. ಮೂರು ಕೋಣಗಳ ಮೇಲೆ ರಾಯಲ್ ಚಾಲೆಂಜರ್ಸ್ ಬ್ಯಾಂಗಳೂರು (BANGALORE) ಎಂದು ಕೆಂಪು ವಸ್ತ್ರದ ಮೇಲೆ ಇಂಗ್ಲಿಷ್ನಲ್ಲಿ ಬರೆದಿರುತ್ತದೆ. ಈ ವೇಳೆ ರಿಷಬ್ ಅವರು ಬ್ಯಾಂಗಳೂರು ಎಂದು ಬರೆದ ಕೋಣದ ಮೇಲೆ ಕೈ ಇಟ್ಟು ಅರೆ ಇದು ಬೇಡ ಭಟ್ರೆ.. ತೆಗೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಬಳಿಕ ಅರ್ಥ ಆಯ್ತಾ ಎಂದು ಹೇಳುತ್ತಾರೆ. ಆರ್ಸಿಬಿ ಕೂಡ ಈ ವಿಡಿಯೊಗೆ ‘ರಿಷಬ್ ಶೆಟ್ಟಿ ಎನ್ ಹೇಳ್ತಿದ್ದಾರೆ ಅರ್ಥ ಆಯ್ತಾ?’ ಎಂದು ಕ್ಯಾಪ್ಷನ್ ನೀಡಿದೆ. ಇದನ್ನು ಗಮನಿಸುವಾಗ ಈ ಬಾರಿ ಬ್ಯಾಂಗಳೂರು ಬದಲು ಬೆಂಗಳೂರು ಎಂದು ಹೆಸರು ಬದಲಿಸಲು ಫ್ರಾಂಚೈಸಿ ಮುಂದಾಗಿದೆ ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿದೆ. ಅಭಿಮಾನಿಗಳ ಬಹು ದಿನದ ಆಗ್ರಹವೂ ಕೂಡ ಇದಾಗಿತ್ತು.
ರಿಷಬ್ ಶೆಟ್ಟಿ ಎನ್ ಹೇಳ್ತಿದ್ದಾರೆ ಅರ್ಥ ಆಯ್ತಾ?
— Royal Challengers Bangalore (@RCBTweets) March 13, 2024
Understood what Rishabh Shetty is trying to say?
You’ll find out at RCB Unbox. Buy your tickets now. 🎟️@shetty_rishab #RCBUnbox #PlayBold #ArthaAytha #ನಮ್ಮRCB pic.twitter.com/sSrbf5HFmd
ಆರ್ಸಿಬಿ ತನ್ನ ಅಭಿಯಾನ ಆರಂಭಿಸುವ ಮುನ್ನ ಪೂರ್ವಭಾವಿಯಾಗಿ ಅಭಿಮಾನಿಗಳಿಗಾಗಿ ಈ ಸಲವೂ ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಕಳೆದೆರಡು ವರ್ಷಗಳಿಂದ ಆರ್ಸಿಬಿ ಅನ್ಬಾಕ್ಸ್(RCB’s Unbox Event) ಹೆಸರಿನಲ್ಲಿ ನಡೆಯುತ್ತ ಬಂದಿದೆ. ಅಭಿಮಾನಿಗಳಿಗಾಗಿ ನಡೆಸುವ ಈ ಕಾರ್ಯಕ್ರಮದಲ್ಲಿ ತಂಡದ ಹೊಸ ಜೆರ್ಸಿ ಅನಾವರಣ ಸೇರಿ ಹಲವು ಅಚ್ಚರಿಯನ್ನು ಘೋಷಣೆ ಮಾಡುವುದು ಈ ಕಾರ್ಯಕ್ರಮದ ವಿಶೇಷತೆ. ಈ ಬಾರಿ ಹೆಸರಿನ ಬದಲಾವಣೆ ಮಾಡುವ ಸಾಧ್ಯತೆ ಇದೆ.