Site icon Vistara News

IPL 2024: ಬೆಂಗಳೂರಿನ ಐಪಿಎಲ್‌ ಪಂದ್ಯಗಳಿಗೆ ನೀರಿನ ಅಭಾವ ಇಲ್ಲ; ಕೆಎಸ್​ಸಿಎ

M. Chinnaswamy Stadium

ಬೆಂಗಳೂರು: ಬೆಂಗಳೂರಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿರುವ(bangalore water crisis) ಹಿನ್ನೆಲೆ ಚಿನ್ನಸ್ವಾಮಿ(m chinnaswamy) ಕ್ರೀಡಾಂಗಣದಲ್ಲಿ ನಡೆಯುವ 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿಯ​ ಪಂದ್ಯಾವಳಿಗಳನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡಬೇಕು ಎಂದು ಸಾರ್ವಜನಿಕ ವಲಯದಿಂದ ಸರ್ಕಾರಕ್ಕೆ ಮನವಿ ಬಂದಿತ್ತು. ಇದೀಗ ನಗರದಲ್ಲಿ ತಲೆದೋರಿರುವ ನೀರಿನ ಕೊರತೆಯ ಸಮಸ್ಯೆಯು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ 17ನೇ ಆವೃತ್ತಿಯ ಐಪಿಎಲ್​ ಲೀಗ್ ಪಂದ್ಯಗಳಿಗೆ ಬಾಧಿಸುವುದಿಲ್ಲ ಎಂದು ಕೆಎಸ್​ಸಿಎ ಆಡಳಿತ ಮಂಡಳಿ ಮೂಲಗಳು ಹೇಳಿವೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದು ಪಂದ್ಯ ನಡೆಸಲು ಸುಮಾರು 60 ಸಾವಿರದಿಂದ 70 ಸಾವಿರ ಲೀಟರ್‌ ನೀರು ಬೇಕಾಗುತ್ತದೆ. ಪ್ರತಿ ನಿತ್ಯ ನಿರ್ವಹಣೆಗೂ ಸಾವಿರಾರು ಲೀಟರ್‌ ನೀರು ಬೇಕೇ ಬೇಕು. ಮತ್ತೊಂದೆಡೆ ನಗರದಲ್ಲಿ ನೀರಿನ ಅಭಾವವಾಗಿ ಸರಬರಾಜು ವ್ಯತ್ಯಯವಾಗುತ್ತಿದೆ. ಜನರು ನೀರಿಲ್ಲದೇ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ಹೆಚ್ಚು ನೀರು ಬಳಸುವ ಐಪಿಎಲ್‌ ಪಂದ್ಯಗಳನ್ನು ನಡೆಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು.

ಇದನ್ನೂ ಓದಿ IPL 2024: ಪ್ರತಿ ಸೀಸನ್​ನ ಐಪಿಎಲ್​ನಲ್ಲಿ ಅತಿ ಹೆಚ್ಚು ಹಣ ಪಡೆದ ಆಟಗಾರರು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಹುಕಾಲದಿಂದ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಮತ್ತು ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ನಿರ್ವಹಣೆ ಮಾಡಲಾಗುತ್ತಿದೆ. ಹೀಗಾಗಿ ಪಂದ್ಯಗಳ ಸಂದರ್ಭದಲ್ಲಿ ನೀರಿನ ಸಮಸ್ಯೆಯ ‘ಬಿಸಿ’ ತಟ್ಟುವ ಸಾಧ್ಯತೆ ತೀರಾ ಕಡಿಮೆ ಎಂದು ಮೂಲಗಳು ತಿಳಿಸಿವೆ.

‘ನೀರಿಗೆ ಸಂಬಂಧಿಸಿದಂತೆ ನಮಗೆ ಯಾವುದೇ ಸಮಸ್ಯೆ ಇಲ್ಲ. ರಾಜ್ಯ ಸರ್ಕಾರವು ಹೊರಡಿಸಿರುವ ನೀರು ಬಳಕೆ ಮಾರ್ಗಸೂಚಿಯನ್ನು ನಾವು ಪಾಲಿಸುತ್ತೇವೆ. ಈ ಕುರಿತು ಪದಾಧಿಕಾರಿಗಳೊಂದಿಗೆ ಚರ್ಚೆ ಸಡೆಸಲಾಗುತ್ತಿದೆ’ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶುಭೇಂದು ಘೋಷ್ ತಿಳಿಸಿದ್ದಾರೆ.

‘ಪಿಚ್ ಮತ್ತು ಹೊರಾಂಗಣಕ್ಕಾಗಿ ನಾವು ಯೋಗ್ಯವಾದ ನೀರನ್ನು ಬಳಸುವುದಿಲ್ಲ. ನೀರಿನ ಮೌಲ್ಯ ಏನೆಂಬುವುದು ನಮಗೆ ತಿಳಿದಿದೆ. ಎಸ್‌ಟಿಪಿ ಘಟಕದ ನೀರನ್ನು ನಾವು ಬಳಸುತ್ತಿದ್ದೇವೆ. ಕ್ರೀಡಾಂಗಣದಲ್ಲಿ ಕೆಲವು ಕಾರ್ಯಗಳಿಗಾಗಿ ಬಳಸಲು ಕೂಡ ಇದೇ ಸಂಸ್ಕರಿತ ನೀರು ಬಳಕೆ ಮಾಡುತ್ತಿದ್ದೇವೆ. ಪಂದ್ಯದ ಆಯೋಜನೆಯಾದಾಗ 10 ರಿಂದ 15 ಸಾವಿರ ಲೀಟರ್‌ಗಳಷ್ಟು ನೀರು ಬೇಕಾಗಬಹುದು. ಇದು ಎಸ್‌ಟಿಪಿ ಘಟಕದಿಂದ ಪೂರೈಕೆಯಾಗುವ ಸಾಮರ್ಥ್ಯ ಇದೆ’ ಎಂದು ಘೋಷ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2016ರಲ್ಲಿ ಮಹಾರಾಷ್ಟ್ರದಲ್ಲಿ ಬೀಕರ ಬರಗಾಲ ಬಂದ ಪರಿಣಾಮ ಇಲ್ಲಿ ಆಯೋಜನೆಗೊಂಡಿದ್ದ ಐಪಿಎಲ್​ ಪಂದ್ಯಗಳನ್ನು ಮಹಾರಾಷ್ಟ್ರ ಹೈಕೋರ್ಟ್ ಬೇರೆಡೆಗೆ ಶಿಫ್ಟ್​ ಮಾಡುವಂತೆ ಆದೇಶ ಹೊರಡಿಸಿತ್ತು. ಹೀಗಾಗಿ 7 ಪಂದ್ಯಗಳು ಬೆಂಗಳೂರಿಗೆ ಶಿಫ್ಟ್ ಆಗಿತ್ತು. ಇದೀಗ ಎಸ್‌ಟಿಪಿ ಘಟಕದ ನೀರು ಬಳಕೆ ಮಾಡುವುದಾಗಿ ಶುಭೇಂದು ಘೋಷ್ ಹೇಳಿದ್ದರೂ ಕೂಡ ಸರ್ಕಾರ ಕೈಗೊಳ್ಳುವ ನಿರ್ಧಾರದ ಮೇಲೆ ಪಂದ್ಯಗಳ ಆತಿಥ್ಯದ ಭವಿಷ್ಯ ನಿಂತಿದೆ. ಇನ್ನೊಂದು ವಾರದಲ್ಲಿ ಈ ವಿಚಾರವಾಗಿ ಸ್ಪಷ್ಟ ಉತ್ತರ ಸಿಗಲಿದೆ. ಪಂದ್ಯಗಳು ಬೇರೆ ರಾಜ್ಯಕ್ಕೆ ಶಿಫ್ಟ್​ ಆದರೂ ಅಚ್ಚರಿ ಪಡಬೇಕಿಲ್ಲ.

Exit mobile version