ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿ ಕೊನೆಯ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಲೀಗ್ ಹಂತದ ಪಂದ್ಯಗಳು ಮುಕ್ತಾಯಕಂಡಿದ್ದು ಇನ್ನು ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಮೊದಲ ಕ್ವಾಲಿಫೈಯರ್ ಪಂದ್ಯ ನಾಳೆ(ಮಂಗಳವಾರ) ಅಹಮದಾಬಾದ್ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಕೆಕೆಆರ್ ಮತ್ತು ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿವೆ. ಆದರೆ, ಪ್ಲೇ ಆಫ್ ಪಂದ್ಯಗಳಿಗೂ ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಈಗಾಗಲೇ ಲೀಗ್ ಅಹಮದಾಬಾದ್ ಸೇರಿ ಕೆಲವು ಕಡೆ ನಿಗದಿಯಾಗಿದ್ದ ಲೀಗ್ ಪಂದ್ಯಗಳು ಮಳೆಯಿಂದ ರದ್ದಾದ ನಿದರ್ಶನವೂ ನಮ್ಮ ಕಣ್ಣ ಮುಂದಿದೆ. ಇದೀಗ ಪ್ಲೇ ಆಫ್ ಪಂದ್ಯಗಳಿಗೆ(ipl playoffs rain rules) ಮಳೆ ನಿಯಮ ಹೇಗಿದೆ ಎಂಬ ಮಾಹಿತಿ ಇಂತಿದೆ.
ಮಳೆ ಬಂದರೆ?
ಐಪಿಎಲ್ ಆಡಳಿತ ಮಂಡಳಿ ಮತ್ತು ಬಿಸಿಸಿಐ ಟೂರ್ನಿ ಆರಂಭಕ್ಕೂ ಮುನ್ನವೇ ಲೀಗ್ ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ಅದರಂತೆ ಮಳೆಯಿಂದ ಪಂದ್ಯ ರದ್ದುಗೊಂಡರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನಿಗದಿಪಡಿಸಿತ್ತು. ಆದರೆ, ನಾಕೌಟ್ ಹಂತಕ್ಕೆ ಮೀಸಲು ದಿನವನ್ನು (Reserve day) ಇರಿಸಿದೆ. ಪೂರ್ಣ ಪಂದ್ಯ ನಡೆಸಲು ಹೆಚ್ಚುವರಿ 120 ನಿಮಿಷಗಳನ್ನು ನೀಡಲಾಗಿದೆ. ಈ ಸಮಯದಲ್ಲಿಯೂ ಪಂದ್ಯ ನಡೆಯದೇ ಹೋದರೆ ಆಗ ಡಕ್ವರ್ತ್ ನಿಯದ ಅನುಸಾರ ಓವರ್ ಕಡಿತಗೊಳಿಸಿ ಪಂದ್ಯ ನಡೆಸುವ ನಿರ್ಣಾಯಕ್ಕೆ ಬರಲಾಗುತ್ತದೆ. ಈ ವೇಳೆಯೂ ಪಂದ್ಯ ನಡೆಯದೇ ಇದ್ದರೆ ಪಂದ್ಯವನ್ನು ಮೀಸಲ ದಿನಕ್ಕೆ ಮುಂದೂಡಲಾಗುತ್ತದೆ. ಒಂದೊಮ್ಮೆ ಮೀಸಲು ದಿನದ ಮೊದಲಿನ ದಿನ ಪಂದ್ಯ ಅರ್ಧಕ್ಕೆ ನಿಂತಿದ್ದರೆ, ಅಲ್ಲಿಂದಲೇ ಮರುದಿನ ಪಂದ್ಯ ಆರಂಭಿಸಲಾಗುತ್ತದೆ.
ಇದನ್ನೂ ಓದಿ IPL 2024 Eliminator: ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ಆರ್ಸಿಬಿಗೆ ಆಘಾತ; ಇಬ್ಬರು ಸ್ಟಾರ್ ಆಟಗಾರರು ಅಲಭ್ಯ!
ಮೀಸಲು ದಿನಕ್ಕೂ ಮಳೆ ಬಂದರೆ?
ಮೀಸಲು ದಿನವೂ ಮಳೆ ಬಂದರೆ ಫಲಿತಾಂಶ ಹೇಗೆ ನಿರ್ಧರಿಸಲಾಗುತ್ತದೆ ಎನ್ನುವ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಿಗೆ ಕಾಡುವುದು ಸಹಜ. ಇದಕ್ಕೂ ಬಿಸಿಸಿಐ ಉತ್ತರ ನೀಡಿದೆ. ಒಂದು ವೇಳೆ ಮೀಸಲು ದಿನದಂದೂ ಕೂಡ ಮಳೆ ಅಡ್ಡಿ ಪಡಿಸಿದರೆ ಸೂಪರ್ ಓವರ್ಗೆ ಅವಕಾಶವಿದೆ. ಇದಕ್ಕೂ ಕೂಡ ಮಳೆ ಅನುವು ಮಾಡಿಕೊಡದೇ ಇದ್ದಾಗ ಅಂತಿಮವಾಗಿ ಲೀಗ್ ಹಂತದ ಅಂಕಪಟ್ಟಿಯಲ್ಲಿ ಯಾರು ಮುಂದಿರುತ್ತಾರೋ ಆ ತಂಡವನ್ನು ವಿಜಯೀ ಎಂದು ಘೋಷಿಸಲಾಗುತ್ತದೆ. ಈ ನಿಯಮ ಫೈನಲ್ ಪಂದ್ಯಕ್ಕೂ ಅನ್ವಯವಾಗುತ್ತದೆ. ಒಂದೊಮ್ಮೆ ಮಳೆಯಿಂದ ಎಲ್ಲ ಪಂದ್ಯಗಳು ರದ್ದಾದದರೆ ಆಗ ಅಗ್ರಸ್ಥಾನಿ ಕೆಕೆಆರ್ ಈ ಬಾರಿಯ ಚಾಂಪಿಯನ್ ಪಟ್ಟ ಅಲಂಕರಿಸಲಿದೆ. ಏಕೆಂದರೆ ಕೆಕೆಆರ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ.