Site icon Vistara News

IPL 2024: 8.4 ಕೋಟಿಗೆ ಚೆನ್ನೈ ಸೇರಿದ ಸಮೀರ್ ರಿಜ್ವಿ ಯಾರು?, ಈತನ ಹಿನ್ನೆಲೆ ಏನು?

sameer rizvi

ಬೆಂಗಳೂರು: ಈ ಬಾರಿಯ ಐಪಿಎಲ್ ಹರಾಜಿನಲ್ಲಿ(IPL 2024) ಬರೋಬ್ಬರಿ 8.4 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸೇರಿ ಗಮನ ಸೆಳೆದ 20 ವರ್ಷದ ಸಮೀರ್ ರಿಜ್ವಿ(Sameer Rizvi) ಯಾರು?, ಈತನ ಹಿನ್ನೆಲೆ ಏನು? ಎನ್ನುವುದು ಸದ್ಯದ ಕ್ರಿಕೆಟ್​ ಅಭಿಮಾನಿಗಳ ಟಾಕ್​ ಆಗಿದೆ.

20 ವರ್ಷದ ಸಮೀರ್ ರಿಜ್ವಿ ಖರೀದಿಸಲು ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಗುಜರಾತ್ ಟೈಟಾನ್ಸ್​ ನಡುವೆ ಭಾರಿ ಫೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಪಟ್ಟು ಬಿಡದ ಚೆನ್ನೈ, ಈ ಆಟಗಾರನನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಯಿತು. ಹಾಗಾದರೆ ಯಾರು ಈ ಸಮೀರ್ ರಿಜ್ವಿ? ಈ ಯುವ ಆಟಗಾರನಿಗೆ ಯಾಕಿಷ್ಟು ಬೇಡಿಕೆ ಎನ್ನುವುದರ ಮಾಹಿತಿ ಇಲ್ಲಿದೆ.

ಮೀರತ್‌ನಲ್ಲಿ ಜನಿಸಿದ 20 ವರ್ಷದ ಸಮೀರ್ ರಿಜ್ವಿ ಉತ್ತರ ಪ್ರದೇಶದ ಪರ ದೇಶೀಯ ಕ್ರಿಕೆಟ್​ ಆಡುತ್ತಾರೆ. ಇದೇ ವರ್ಷ ನಡೆದ ಯುಪಿ ಟಿ20 ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ಸಮೀರ್ ರಿಜ್ವಿ ಅತ್ಯಂತ ವೇಗದ ಶತಕ ದಾಖಲಿಸಿದ್ದರು. ಇದೊಂದು ಶತಕ ಅವರ ಅದೃಷ್ಟ ಬದಲಿಸಿದೆ. ಅನ್​ಕ್ಯಾಪ್ಡ್​ ಆಟಗಾರನಾದರೂ ಬರೋಬ್ಬರಿ 8 ಕೋಟಿ ಜೇಬಿಗಿಳಿಸಿದ್ದಾರೆ.

ಇದನ್ನೂ ಓದಿ IPL 2024: ಚೆನ್ನೈ ಸೂಪರ್ ಕಿಂಗ್ಸ್​ಗೆ ಹೊಸ ನಾಮಕರಣ ಮಾಡಿದ ನೆಟ್ಟಿಗರು​

‘ಬಲಗೈ ರೈನಾ’

ಸಮೀರ್ ರಿಜ್ವಿಯನ್ನು ಟೀಮ್​ ಇಂಡಿಯಾದ ಮಾಜಿ ಆಟಗಾರ ಸುರೇಶ್​ ರೈನಾ ಶೈಲಿಯ ಆಟಗಾರ ಎಂದು ಕರೆಯುತ್ತಾರೆ. ಯುಪಿ ಟಿ20 ಲೀಗ್‌ನಲ್ಲಿ ಆಡುವಾಗ ರಿಜ್ವಿಯನ್ನು ಅನೇಕರು ಬಲಗೈ ರೈನಾ ಎಂದು ಕರೆದಿದ್ದರು. ರೈನಾ ಕೂಡ ಇದನ್ನು ಒಪ್ಪಿಕೊಂಡಿದ್ದರು. ಅಲ್ಲದೆ ಈತನಿಗೆ ಉತ್ತಮ ಕ್ರಿಕೆಟ್​ ಭವಿಷ್ಯವಿದೆ ಎಂದು ರೈನಾ ಹೇಳಿದ್ದರು. ಸದ್ಯ ಧೋನಿ ಗರಿಡಿ ಸೇರಿರುವ ರಿಜ್ವಿಯನ್ನು ಧೋನಿ ಪಳಗಿಸಿ ಓರ್ವ ಸಮರ್ಥ ಕ್ರಿಕೆಟ್​ ಆಟಗಾರನಾಗಿ ಮಾಡುವುದರಲ್ಲಿ ಯಾವುದೇ ಅನುಮಾನ ಬೇಡ. ಈ ಹಿಂದೆಯೂ ಹಲವು ದೇಶದ ಅನ್​ಕ್ಯಾಪ್ಡ್​ ಆಟಗಾರರು ಧೋನಿ ಅವರ ಮಾರ್ಗದರ್ಶನಲ್ಲಿ ಬೆಳೆದು ಇಂದು ಅಂತಾರಾಷ್ಟ್ರೀಯ ತಂಡದ ಪರ ಮಿಂಚುತ್ತಿದ್ದಾರೆ. ಇದಕ್ಕೆ ಉತ್ತಮ ನಿದರ್ಶನ ಲಂಕಾದ ಮಹೀಶ ತೀಕ್ಷಣ ಮತ್ತು ಪತಿರಣ.

ರಿಂಕು ಸಿಂಗ್​ ರೀತಿಯ ಫಿನಿಶರ್

ರಿಜ್ವಿ ದೇಶೀಯ ಟಿ20ಗಳಲ್ಲಿ 134.70 ಸ್ಟ್ರೈಕ್ ರೇಟ್‌ನಲ್ಲಿ 49.16 ಸರಾಸರಿ ಹೊಂದಿದ್ದಾರೆ. ಇದುವರೆಗೆ ಕೇವಲ 11 ಪ್ರಥಮ ದರ್ಜೆ ಪಂದ್ಯಗಳನ್ನು ಮತ್ತು ಅನೇಕ ಟಿ-20 ಪಂದ್ಯಗಳನ್ನು ಆಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 295 ರನ್ ಗಳಿಸಿದ್ದಾರೆ. ಈತ ಪಂದ್ಯವನ್ನು ರಿಂಕು ಸಿಂಗ್​ ಮಾದರಿಯಲ್ಲಿ ಫಿನಿಶಿಂಗ್​ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಚೆನ್ನೈ ತಂಡ

ಎಂ.ಎಸ್ ಧೋನಿ (ನಾಯಕ), ಡೆವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶೇಕ್ ರಶೀದ್, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಮೊಯೀನ್ ಅಲಿ, ಶಿವಂ ದುಬೆ, ನಿಶಾಂತ್ ಸಿಂಧು, ಅಜಯ್ ಮಂಡಲ್, ರಾಜವರ್ಧನ್ ಹಂಗರ್ಗೇಕರ್, ದೀಪಕ್ ಚಹರ್, ಮಹೇಶ್ ದೀಕ್ಷಾನಾ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ, ಮಥೀಶಾ ಪತಿರಾನಾ, ಶಾರ್ದೂಲ್ ಠಾಕೂರ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಸಮೀರ್ ರಿಜ್ವಿ.

Exit mobile version