ಬೆಂಗಳೂರು: ಕಳೆದ 17 ವರ್ಷಗಳಿಂದ ಆರ್ಸಿಬಿ(RCB) ಪರ ನಿಷ್ಠೆಯಿಂದ ಆಡುತ್ತಿರುವ ವಿರಾಟ್ ಕೊಹ್ಲಿ(Virat Kohli) ಮುಂದಿನ ಆವೃತ್ತಿಗೆ ತಂಡ ತೊರೆದು ಬೇರೆ ಫ್ರಾಂಚೈಸಿ ಪರ ಆಡಬೇಕೆಂದು ಆರ್ಸಿಬಿಯ ಮಾಜಿ ನಾಯಕ ಕೆವಿನ್ ಪೀಟರ್ಸನ್ ಸಲಹೆ ನೀಡಿದ್ದಾರೆ.
ರಾಜಸ್ಥಾನ್ ರಾಯಲ್ಸ್(Rajasthan Royals) ವಿರುದ್ಧ ಬುಧವಾರ ನಡೆದಿದ್ದ ಎಲಿಮಿನೇಟರ್ ಪಂದ್ಯದಲ್ಲಿ(IPL 2024) ಆರ್ಸಿಬಿ 4 ವಿಕೆಟ್ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು. ಈ ಸೋಲಿನ ಹತಾಶೆಯಲ್ಲಿ ವಿರಾಟ್ ಕೊಹ್ಲಿ ಕಣ್ಣೀರು ಕೂಡ ಸುರಿಸಿದರು. ಅಲ್ಲದೆ ಅತ್ಯಂತ ಭಾವುಕರಾಗಿ ಕಂಡುಬಂದರು. ಇದನ್ನು ನೋಡಿದ ಅವರ ಅಭಿಮಾನಿಗಳು ಕೂಡ ಅತ್ಯಂತ ಬೇಸರಗೊಂಡಿದ್ದರು. ಇದೇ ವಿಚಾರವಾಗಿ ಮಾತನಾಡಿದ ಪೀಟರ್ಸನ್, ಮುಂದಿನ ಆವೃತ್ತಿಯಲ್ಲಿ ಕೊಹ್ಲಿ ತಮ್ಮ ತವರಾದ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಬೇಕು ಎಂದು ಹೇಳಿದ್ದಾರೆ.
ಸ್ಟಾರ್ ಸ್ಟೋರ್ಟ್ಸ್ ಸಂದರ್ಶನದಲ್ಲಿ ಮಾತನಾಡಿದ ಪೀಟರ್ಸನ್, ಮುಂದಿನ ಆವೃತ್ತಿಗೆ ಮೆಗಾ ಹರಾಜು ನಡೆಯಲಿದೆ. ಈಗಾಗಲೇ ಹಲವು ಆಟಗಾರರು ತಮ್ಮ ತವರು ತಂಡದ ಪೊರ ಆಟಲು ಕಾತರಗೊಂಡಿದ್ದಾರೆ. ಕನ್ನಡಿಗ ಕೆ.ಎಲ್ ರಾಹುಲ್ ಕೂಡ ಆರ್ಸಿಬಿ ಪರ ಆಡಬೇಕು, ಬೆಂಗಳೂರು ನನ್ನ ತವರು ಎಂದು ಹೇಳಿದ್ದರು. ಕೊಹ್ಲಿ ಕೂಡ ಆರ್ಸಿಬಿ ತೊರೆದು ಡೆಲ್ಲಿ ಪರ ಆಡಿದರೆ ಉತ್ತಮ ಎಂದು ಪೀಟರ್ಸನ್ ಹೇಳಿದ್ದಾರೆ.
“ಕ್ರೀಡೆಯಲ್ಲಿ ಶ್ರೇಷ್ಠ ಆಟಗಾರರು ಇತರ ಫ್ರಾಂಚೈಸಿಗಳಿಗೆ ಹೋಗಿ ಗೆಲುವು ಸಾಧಿಸಿದ್ದಾರೆ. ಆದರೆ, ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್ಸಿಬಿ ಗೆಲುವಿಗೆ ಪ್ರಯತ್ನಿಸುದಕ್ಕಿಂತ ಡೆಲ್ಲಿ ಪರ ಆಡಿದರೆ ಉತ್ತಮ. ಅವರಿಗೆ ದೆಹಲಿಯಲ್ಲಿ ಮನೆ ಇದೆ. ಕೊಹ್ಲಿಗೆ ಕುಟುಂಬವಿದೆ. ದೆಹಲಿಯಲ್ಲಿ ಆಡಿದರೆ, ಅವರಿಗೆ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಬಹುದು. ವಿರಾಟ್ ಅವರು ದೆಹಲಿಗೆ ಏಕೆ ಆಡಬಾರದು? ರೊನಾಲ್ಡೊ, ಮೆಸ್ಸಿ, ಹ್ಯಾರಿ ಕೇನ್ ಅವರಂತಹ ದಿಗ್ಗಜ ಫುಟ್ಬಾಲ್ ಆಟಗಾರರು ತಮ್ಮ ನೆಚ್ಚಿನ ಫ್ರಾಂಚೈಸಿ ತೊರೆದ ಉದಾಹರಣೆ ಇದೆ” ಎಂದು ಹೇಳುವ ಮೂಲಕ ಕೊಹ್ಲಿ ಡೆಲ್ಲಿ ಪರ ಆಡುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ IPL 2024 : 17 ವರ್ಷ ಕಾದರೂ ಟ್ರೋಫಿ ಇಲ್ಲ: ಆರ್ಸಿಬಿ ಅಭಿಮಾನಿಗಳ ಕಾಯುವಿಕೆ ನಿರಂತರ
ವಿರಾಟ್ ಕೊಹ್ಲಿ ಮಾತ್ರ ಚೊಚ್ಚಲ ಆವೃತ್ತಿಯ ಐಪಿಎಲ್ನಿಂದ ಇದುವರೆಗಿನ ಐಪಿಎಲ್ ತನಕ ಒಂದೇ ತಂಡದ ಪರ ಆಡಿದ ಏಕೈಕ ಆಟಗಾರನಾಗಿದ್ದಾರೆ. ಚೆನ್ನೈ ತಂಡ 2 ವರ್ಷ ಬ್ಯಾನ್ ಆಗದಿದ್ದರೆ ಧೋನಿ ಕೂಡ ಈ ಹಿರಿಮೆಗೆ ಪಾತ್ರರಾಗುತ್ತಿದ್ದರು. ವಿರಾಟ್ ಕೊಹ್ಲಿ 252 ಐಪಿಎಲ್ ಪಂದ್ಯಗಳನ್ನಾಡಿ 8,004 ರನ್ ಬಾರಿಸಿದ್ದಾರೆ. ಇದರಲ್ಲಿ 8 ಶತಕ ಮತ್ತು 55 ಅರ್ಧಶತಕ ಗಳಿಸಿದ್ದಾರೆ.
ಈ ಆವೃತ್ತಿಯಲ್ಲಿ ಕೊಹ್ಲಿ 15 ಪಂದ್ಯಗಳಿಂದ 741 ರನ್ ಬಾರಿಸಿ ಸದ್ಯ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. 38 ಸಿಕ್ಸರ್ ಮತ್ತು 62 ಬೌಂಡರಿ ಬಾರಿಸಿದ್ದಾರೆ. ಎಮಿನೇಟರ್ ಪಂದ್ಯದಲ್ಲಿಯೂ ಕೊಹ್ಲಿ ತಂಡದ ಗೆಲುವಿಗಾಗಿ ಮೈದಾನದ ಮೂಲೆ ಮೂಲೆಗೂ ಚಿರತೆ ವೇಗದಲ್ಲಿ ಓಡಿ ಬೌಂಡರಿ ತಡೆಯುವ ಕಾರ್ಯ ಮಾಡಿದ್ದರು. ಆದದೆ ಅದೃಷ್ಟ ನೆಟ್ಟಗಿರದ ಕಾರಣ ಅಂತಿಮವಾಗಿ ಸೋಲು ಕಾಣಬೇಕಾಯಿತು.