Site icon Vistara News

IPL 2024: ಭಾರತದಲ್ಲೇ ಐಪಿಎಲ್​; ಖಚಿತಪಡಿಸಿದ ಅಧ್ಯಕ್ಷ ಅರುಣ್ ಧುಮಾಲ್

Indian Premier League

ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌(IPL 2024) ಭಾರತದಲ್ಲಿಯೇ ಆಯೋಜನೆಗೊಳ್ಳಲಿದೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್(Chairman Arun Singh Dhumal) ಖಚಿತಪಡಿಸಿದ್ದಾರೆ. ಈ ಹಿಂದೆ, ಲೋಕಸಭೆ ಚುನಾವಣೆಯ ಕಾರಣ ಈ ಬಾರಿಯ ಟೂರ್ನಿ(Indian Premier League) ವಿದೇಶದಲ್ಲಿ ನಡೆಯಲಿದೆ ಎಂದು ಊಹಾಪೋಹಗಳು ಇದ್ದವು. ಇದೀಗ ಅರುಣ್ ಧುಮಾಲ್ ಭಾರತದಲ್ಲಿಯೇ ಟೂರ್ನಿ ನಡೆಯಲಿದೆ ಎನ್ನುವ ಮೂಲಕ ಕ್ರಿಕೆಟ್​ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.​

ಸದ್ಯ ಟೂರ್ನಿಯ ದಿನಾಂಕ ಮತ್ತು ವೇಳಾಪಟ್ಟಿ ಇನ್ನಷ್ಟೇ ಅಧಿಕೃತಗೊಳ್ಳಬೇಕಿದೆ. ಮೂಲಗಳ ಪ್ರಕಾರ ಮಾರ್ಚ್ 22ರಿಂದ ಆರಂಭಗೊಂಡು ಮೇ 26ರಂದು ಫೈನಲ್​ ಏರ್ಪಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸುದ್ದಿ ಸಂಸ್ಥೆ ಐಎಎನ್‌ಎಸ್‌ನೊಂದಿಗೆ ಮಾತನಾಡಿದ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್, 17ನೇ ಆವೃತ್ತಿಯ ಐಪಿಎಲ್​ ಭಾರತದಲ್ಲಿ ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.

“ಐಪಿಎಲ್ 17ನೇ ಆವೃತ್ತಿಯ ದಿನಾಂಕವನ್ನ ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸಲಿದೆ. ಲೋಕಸಭೆ ಚುನಾವಣೆಯ ದಿನಾಂಕಗಳಿಗಾಗಿ ನಾವು ಕಾಯುತ್ತಿದ್ದೇವೆ. ಲೋಕಸಭೆ ಚುನಾವಣೆ ಘೋಷಣೆಯಾದ ತಕ್ಷಣ ಐಪಿಎಲ್ 17ನೇ ಸೀಸನ್ ವೇಳಾಪಟ್ಟಿಯನ್ನ ಬಿಡುಗಡೆ ಮಾಡುತ್ತೇವೆ” ಎಂದು ಧುಮಾಲ್ ಹೇಳಿದರು.

2009ರಲ್ಲಿ ಮಹಾಚುನಾವಣೆಯ ಕಾರಣದಿಂದ ಇಡೀ ಕೂಟವನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. ಹಾಗೆಯೇ 2014ರಲ್ಲಿಯೂ ಒಂದು ಹಂತದ ಪಂದ್ಯಗಳು ಯುಎಇಯಲ್ಲಿ ನಡೆದಿದ್ದವು. ಇದೇ ಕಾರಣದಿಂದ ಈ ಬಾರಿಯ ಆವೃತ್ತಿಯೂ ಕೂಡ ಭಾರತದ ಬದಲಾಗಿ ವಿದೇಶಕ್ಕೆ ಸ್ಥಳಾಂತರವಾಗಲಿದೆ ಎಂಬ ಊಹಾಪೋಹಗಳು ಹಬ್ಬಿದ್ದವು ಇದೀಗ ಐಪಿಎಲ್​ ಅಧ್ಯಕ್ಷರು ಭಾರತದಲ್ಲಿಯೇ ಟೂರ್ನಿ ನಡೆಯಲಿದೆ ಎಂದು ಹೇಳುವ ಮೂಲಕ ಎಲ್ಲ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಎಷ್ಟು ಆಟಗಾರರ ಹರಾಜು?

30 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 72 ಆಟಗಾರರನ್ನು ಒಟ್ಟು 230.45 ಕೋಟಿ ರೂ.ಗೆ 10 ಫ್ರಾಂಚೈಸಿಗಳು ತಮ್ಮ ತಮ್ಮ ತೆಕ್ಕೆಗೆ ತೆಗೆದುಕಂಡಿದ್ದವು. ಮಿನಿ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆದಿತ್ತು.

ಈ ಬಾರಿಯ ವಿಶೇಷತೆ ಏನು?

ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದ ಇಬ್ಬರು ವೇಗಿಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ 20 ಕೋಟಿ ರೂ.ಗಳ ಗಡಿ ದಾಟಿದ್ದಾರೆ. ಕಮಿನ್ಸ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ 20.50 ಕೋಟಿ ರೂ.ಗೆ ಖರೀದಿಸಿತು, ಈ ದಾಖಲೆಯು ಕೇವಲ 30 ನಿಮಿಷಗಳ ಕಾಲ ಉಳಿಯಿತು, ಕೋಲ್ಕತಾ ನೈಟ್ ರೈಡರ್ಸ್ ಮಿಚೆಲ್ ಸ್ಟಾರ್ಕ್​ಗೆ 24.75 ಕೋಟಿ ರೂ.ಗಳನ್ನು ಪಾವತಿಸಿತು. ಇದೇ ವೇಳೆ ಅನ್​ಕ್ಯಾಪ್ಡ್​ ಭಾರತೀಯರಾದ ಶುಭಂ ದುಬೆ ಮತ್ತು ಸಮೀರ್ ರಿಜ್ವಿ ಕೂಡ ಗಮನ ಸೆಳೆದರು.

Exit mobile version