ಮುಂಬಯಿ: ಮುಂದಿನ ವರ್ಷದ ಐಪಿಎಲ್(IPL 2025) 18ನೇ ಆವೃತ್ತಿಗೆ ನಡೆಯುವ ಆಟಗಾರರ ಮೆಗಾ ಹರಾಜು(IPL 2025 Mega Auction) ಪ್ರಕ್ರಿಯೆ ಕುರಿತು ಇಂದು ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿ ಎಲ್ಲ 10 ಫ್ರಾಂಚೈಸಿಗಳ ಜತೆ ಮುಂಬಯಿಯಲ್ಲಿ ಸಭೆ ನಡೆಸಲಿ ಎನ್ನಲಾಗಿದೆ. ಈ ಸಭೆಯಲ್ಲಿ ಹಲವು ಫ್ರಾಂಚೈಸಿಗಳು 8 ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಅನುಮತಿ ನೀಡುವಂತೆ ಪಟ್ಟು ಹಿಡಿಯಲಿದೆ ಎಂದು ತಿಳಿದುಬಂದಿದೆ.
ಸನ್ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್, ಹಾಲಿ ಚಾಂಪಿಯನ್ ಕೆಕೆಆರ್ ಫ್ರಾಂಚೈಸಿ ಮಾಲಿಕರು ಕನಿಷ್ಠ 7 ಆಟಗಾರರನ್ನಾದರೂ ತಂಡದಲ್ಲಿ ಉಳಿಸಿಕೊಳ್ಳುವ ಅವಕಾಶ ನೀಡಬೇಕೆಂದು ಬೇಡಿಕೆ ಇರಿಸಿವೆ ಎಂದು ವರದಿಯಾಗಿದೆ. ಈ ಕುರಿತು ಕೆಲ ಟ್ವೀಟ್ಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್(Arun Dhumal) ಈ ಹಿಂದೆ ಹೇಳಿದ ಪ್ರಕಾರ ಈ ಬಾರಿ ಪ್ರತಿ ತಂಡಕ್ಕೆ 3-4 ಆಟಗಾರರನ್ನು ಮಾತ್ರ ರಿಟೇನ್ ಮಾಡಿಕೊಳ್ಳಲು ಮಾತ್ರ ಅವಕಾಶ ಸಿಗಲಿದೆ ಎನ್ನಲಾಗಿದೆ. ಆದರೆ ಇದಕ್ಕೆ ಫ್ರಾಂಚೈಗಳು ಭಾರೀ ವಿರೋಧ ವ್ಯಕ್ತಪಡಿಸಿವೆ. ಇದು ಮಾತ್ರವಲ್ಲದೆ ಮೆಗಾ ಹರಾಜಿನಲ್ಲಿ ಮತ್ತೊಮ್ಮೆ RTM(ರೈಟ್ ಟು ಮ್ಯಾಚ್ ಕಾರ್ಡ್ ಬಳಕೆ) ಕಾರ್ಡ್ ಬಳಸುವ ಬಗ್ಗೆಯೂ ಫ್ರಾಂಚೈಸಿ ಡಿಮ್ಯಾಂಡ್ ಮಾಡಲಿದೆ. 2018ರ ಮೆಗಾ ಹರಾಜಿನಲ್ಲಿ RTMಗೆ ಅವಕಾಶವಿತ್ತು. ಆದರೆ 2022ರಲ್ಲಿ ನಡೆದ ಮೆಗಾ ಹರಾಜಿನಲ್ಲಿ ಇದನ್ನು ಕೈಬಿಡಲಾಗಿತ್ತು, ಇದೀಗ ಮತ್ತೆ ಈ ನಿಯವನ್ನು ಜಾರಿಗೆ ತರಲು ಫ್ರಾಂಚೈಸಿಗಳು ಒಳವು ತೋರಿದೆ ಎನ್ನಲಾಗಿದೆ.
ಇದನ್ನೂ ಓದಿ IPL 2025: ಬಿಸಿಸಿಐ ಈ ನಿಯಮ ಜಾರಿಗೆ ತಂದರೆ ಧೋನಿ ಮುಂದಿನ ಐಪಿಎಲ್ ಆಡುವುದು ಅನುಮಾನ!
ಏನಿದು ಆರ್ಟಿಎಂ ಕಾರ್ಡ್?
ಆರ್ಟಿಎಂ ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಇದನ್ನು ಆರ್ಟಿಎಂ ಎನ್ನಲಾಗುತ್ತದೆ. ಈ ಬಾರಿ ಒಂದೇ ಕಾರ್ಡ್ ಬಳಕೆಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಹೆಚ್ಚಿನ ಆರ್ಟಿಎಂ ಬಳಸಲು ಅವಕಾಶ ನೀಡಿದರೆ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ಬಿಸಿಸಿಐ ಅಧಿಕಾರಿಗಳ ಅಭಿಪ್ರಾಯ. ಐಪಿಎಲ್ನಲ್ಲಿ ಇದುವರೆಗೆ ವಿರಾಟ್ ಕೊಹ್ಲಿ (ಆರ್ಸಿಬಿ), ಜಸ್ಪ್ರೀತ್ ಬುಮ್ರಾ(ಮುಂಬೈ) ಮಾತ್ರ ಒಂದೇ ತಂಡದ ಪರ ಆಡಿದ್ದಾರೆ. ಉಳಿದ ಆಟಗಾರರು ಬೇರೆ ಬೇರೆ ಫ್ರಾಂಚೈಸಿ ಪರ ಕನಿಷ್ಠ ಒಂದೆರಡು ವರ್ಷಗಳ ಕಾಲ ಆಡಿದ್ದಾರೆ.
5 ವರ್ಷಗಳಿಗೊಮ್ಮೆ ಮೆಗಾ ಹರಾಜು?
ಐಪಿಎಲ್ ಮೆಗಾ ಹರಾಜನ್ನು ಇನ್ನು ಮುಂದೆ ಐದು ವರ್ಷಗಳಿಗೊಮ್ಮೆ ನಡೆಸುವಂತೆಯೂ ಕೆಲವು ಫ್ರಾಂಚೈಸಿಗಳು ಮನವಿ ಮಾಡಿದೆ ಎನ್ನಲಾಗಿದೆ. ಈ ಹಿಂದೆ ಪ್ರತಿ ಮೂರು ವರ್ಷಗಳಿಗೊಮ್ಮೆ ಮೆಗಾ ಹರಾಜು ಆಯೋಜಿಸಲಾಗುತ್ತಿತ್ತು. ಒಂದೊಮ್ಮೆ ಈ ಬೇಡಿಕೆಗೆ ಬಿಸಿಸಿಐ ಸಮ್ಮತಿಸಿದರೆ. ಮುಂದಿನ ಮೆಗಾ ಹರಾಜು 2029ರಲ್ಲಿ ನಡೆಯಲಿದೆ. ಇದರ ನಡುವೆ ಮಿನಿ ಹರಾಜು ಮಾತ್ರ ನಡೆಯಲಿದೆ. ಈ ತಿಂಗಳಾಂತ್ಯದಲ್ಲಿ ಐಪಿಎಲ್ ಮಾಲೀಕರೊಂದಿಗೆ ಬಿಸಿಸಿಐ ಸಭೆ ನಡೆಸಿ ಮೆಗಾ ಹರಾಜಿನ ಅಂತಿಮ ರೂಪುರೇಷೆಗಳ ಬಗ್ಗೆ ಚರ್ಚಿಸಲಿದೆ ಎಂದು ವರದಿಯಾಗಿದೆ