ಬೆಂಗಳೂರು: ಮುಂದಿನ ಆವೃತ್ತಿಯ ಐಪಿಎಲ್(IPL 2025) ಆರಂಭಕ್ಕೂ ಮುನ್ನ ಆಟಗಾರರ ಮೆಗಾ ಹರಾಜು(IPL Mega Auction 2025) ನಡೆಯಲಿದೆ. ಡಿಸೆಂಬರ್ನಲ್ಲಿ ಈ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಎಲ್ಲ ಫ್ರಾಂಚೈಸಿಗಳು ಬಿಸಿಸಿಐ ಜತೆ ನಾಳೆ(ಬುಧವಾರ) ಸಭೆ ನಡೆಸಲಿದ್ದು ಎಷ್ಟು ಆಟಗಾರರನ್ನು ರೀಟೈನ್ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಿದೆ ಎನ್ನಲಾಗಿದೆ. ಈಗಾಗಲೇ ಆರ್ಸಿಬಿ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಂಡು ಉಳಿದೆಲ್ಲ ಆಟಗಾರರನ್ನು ತಂಡದಿಂದ ಕೈ ಬಿಡಲಿದೆ ಎಂದು ವರದಿಯಾದೆ. ಇದರ ಬೆನ್ನಲ್ಲೇ ಆರ್ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್(Glenn Maxwell) ಅವರು ಆರ್ಸಿಬಿ(RCB) ಇನ್ಸ್ಟಾಗ್ರಾಮ್(RCB On Instagram) ಖಾತೆಯನ್ನು ಅನ್ಫಾಲೋ ಮಾಡಿದ್ದಾರೆ.
ಮೂಲಗಳ ಪ್ರಕಾರ ಆರ್ಸಿಬಿ ವಿರಾಟ್ ಕೊಹ್ಲಿ, ಇಂಗ್ಲೆಂಡ್ನ ವಿಲ್ ಜಾಕ್ಸ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ. ನಾಯಕ ಫಾಫ್ ಡು ಪ್ಲೆಸಿಸ್, ಕ್ಯಾಮರೂನ್ ಗ್ರೀನ್ ಸೇರಿ ಉಳಿದೆಲ್ಲ ಆಟಗಾರರನ್ನು ಕೂಡ ಕೈಬಿಡಲಿದೆ ಎಂದು ಮೂಲಗಳು 2 ದಿನಗಳ ಹಿಂದೆ ಮಾಹಿತಿ ನೀಡಿತ್ತು. ಈ ಬೆಳವಣಿಗೆ ಕಂಡು ಬಂದ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್ವೆಲ್ ಆರ್ಸಿಬಿಯ ಅಧಿಕೃತ ಸ್ಟಾಗ್ರಾಮ್ ಖಾತೆಯನ್ನು ಅನ್ಫಾಲೋ ಮಾಡಿದ್ದಾರೆ. ಇದನ್ನು ನೋಡುವಾಗ ಮ್ಯಾಕ್ಸ್ವೆಲ್ಗೆ ಆರ್ಸಿಬಿಯಿಂದ ಗೇಟ್ ಪಾಸ್ ಸಿಕ್ಕಿರುವುದು ಬಹುತೇಕ ಖಚಿತ ಎನ್ನುವಂತಿದೆ.
ಈ ಬಾರಿಯ ಆವೃತ್ತಿಯಲ್ಲಿ ಮ್ಯಾಕ್ಸ್ವೆಲ್ ಆರ್ಸಿಬಿ ಪರ ಅತ್ಯಂತ ಕಳಪೆ ಮಟ್ಟದ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಆಡಿದ 10 ಪಂದ್ಯಗಳಲ್ಲಿ ಗಳಿಸಿದ್ದು ಕೇಲವ 52 ರನ್ ಮಾತ್ರ. ಹೀಗಾಗಿ ಈ ಬಾರಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಅಸಾಧ್ಯ.
ಆರ್ಸಿಬಿ ಸೇರಲಿದ್ದಾರಾ ರಾಹುಲ್?
ಲಕ್ನೋ ತಂಡದ ಮಾಲಿಕ ಗೋಯೆಂಕಾ ತೋರಿದ್ದ ವರ್ತನೆನಿಂದ ಬೇಸರಗೊಂಡಿರುವ ಕೆ.ಎಲ್ ರಾಹುಲ್ ಈ ಬಾರಿ ಲಕ್ನೋ ತಂನಡ ತೊರೆಯುವುದು ಖಚಿತವಾಗಿದೆ. ಮೂಲಗಳ ಪ್ರಕಾರ ಅವರು ಆರ್ಸಿಬಿ ತಂಡ ಸೇರಲಿದ್ದಾರೆ ಎನ್ನಲಾಗಿದೆ. ಆರ್ಸಿಬಿ ಪರ ಆಡುವುದು ಕೂಡ ಅವರ ಬಯಕೆಯಾಗಿದೆ. ಇದೇ ವರ್ಷ ನಡೆದಿದ್ದ ಐಪಿಎಲ್ ವೇಳೆ ಆರ್.ಅಶ್ವಿನ್ ಜತೆಗಿನ ಕುಟ್ಟಿ ಸ್ಟೋರೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೆ.ಎಲ್ ರಾಹುಲ್, 2013ರಲ್ಲಿ ವಿರಾಟ್ ಕೊಹ್ಲಿ ಅವರು ತನ್ನನ್ನು ಆರ್ಸಿಬಿ ತಂಡಕ್ಕೆ ಸೇರಿಸಿಕೊಂಡರು. ನಾನು ಬೆಂಗಳೂರು ತಂಡದಲ್ಲಿ ಆಡಲು ಇಷ್ಟಪಡುತ್ತೇನೆ. ನಾನು ಅಲ್ಲಿದಂದಲೇ ಈ ಪಯಣ ಆರಂಭಿಸಿದೆ. ಅಲ್ಲಿಯೇ ಇದನ್ನು ಅಂತ್ಯಗೊಳಿಸಲು ಬಯುಸುತ್ತೇನೆ. ಅದು ತನ್ನ ತಲೆಯಲ್ಲಿದೆ ಎಂದು ಹೇಳಿದ್ದರು.
ಇದನ್ನೂ ಓದಿ IPL 2025: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಪ್ರಮುಖ ಬೇಡಿಕೆ ಮುಂದಿಟ್ಟ ಫ್ರಾಂಚೈಸಿಗಳು
ಕಳೆದ ಮೂರು ಸೀಸನ್ನಲ್ಲಿ ಡುಪ್ಲೆಸಿಸ್ ಆರ್ಸಿಬಿ ತಂಡವನ್ನು ಮುನ್ನಡೆಸಿದರೂ ತಂಡದ ಭವಿಷ್ಯ ಮಾತ್ರ ಬದಲಾಗಲಿಲ್ಲ. ಕಳೆದ ಬಾರಿಯಂತೂ ಲೀಗ್ನಿಂದಲೇ ಹೊರಬಿದ್ದಿತ್ತು. ಇದೀಗ ಟಿ20ಗೆ ನಿವೃತ್ತಿ ಹೇಳಿ ಎಲ್ಲ ಒತ್ತಡ ಕಡಿಮೆ ಮಾಡಿರುವ ಕೊಹ್ಲಿ ಮತ್ತೆ ನಾಯಕನಾದರೂ ಅಚ್ಚರಿಯಿಲ್ಲ. ಸದ್ಯದ ಮಾಹಿತಿ ಪ್ರಕಾರ ಕೊಹ್ಲಿ ನಾಯಕನಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದರೂ ಕೂಡ ಕೊಹ್ಲಿ ಇದಕ್ಕೆ ಒಪ್ಪಲಿದ್ದಾರಾ ಎನ್ನುವುದು ಕುತೂಹಲ. ಈ ಐಪಿಎಲ್ನಲ್ಲಿ ಕೊಹ್ಲಿ ಪ್ರಚಂಡ ಬ್ಯಾಟಿಂಗ್ ಮೂಲಕ 700ಕ್ಕೂ ಅಧಿಕ ರನ್ ಕಲೆ ಹಾಕಿ ಟೂರ್ನಿಯ ಅತ್ಯಧಿಕ ಸ್ಕೋರ್ ಎನಿಸಿಕೊಂಡಿದ್ದರು.