ಮುಂಬಯಿ: ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಜನಪ್ರಿಯ ಕ್ರಿಕೆಟ್ ಟೂರ್ನಿಯಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಪಾಲ್ಗೊಳ್ಳುವ ವಿದೇಶಿ ಆಟಗಾರರಿಗೆ ಬಿಸಿಸಿಐ ಮತ್ತು ಐಪಿಎಲ್(IPL 2025) ಆಡಳಿತ ಮಂಡಳಿ ಕಠಿಣ ನಿಯವೊಂದನ್ನು ಜಾರಿಗೆ ತರಲು ಮುಂದಾಗಿದೆ.
18ನೇ ಆವೃತ್ತಿಯ ಮೆಗಾ ಹರಾಜಿನ ಕುರಿತು ನಡೆದ ಸಭೆಯಲ್ಲಿ ಕೆಲವು ಫ್ರಾಂಚೇಸಿಗಳು(IPL franchises) ಬಿಸಿಸಿಐಗೆ(BCCI) ವಿಶೇಷ ಬೇಡಿಕೆಗಳನ್ನು ಮುಂದಿರಿಸಿತ್ತು. ಇದೇ ವೇಳೆ ಹರಾಜಿನಲ್ಲಿ ಖರೀದಿಸಿದ ವಿದೇಶಿ ಆಟಗಾರ ಅನಗತ್ಯ ಕಾರಣ ನೀಡಿ ತಂಡದ ಪರ ಆಡದೇ ಅರ್ಧದಲ್ಲೇ ಕೈಕೊಟ್ಟರೆ ಇಂತಹ ವಿದೇಶೀ ಆಟಗಾರರಿಗೆ 2 ವರ್ಷ ನಿಷೇಧ ವಿಧಿಸುವಂತೆ ಬಿಸಿಸಿಐಗೆ ಒತ್ತಡ ಹೇರಿವೆ ಎಂದು ವರದಿಯಾಗಿದೆ. ಬಿಸಿಸಿಐ ಕೂಡ ಇದಕ್ಕೆ ಸಮ್ಮತಿ ಸೂಚಿಸಿದೆ ಎಂದು ತಿಳಿದುಬಂದಿದೆ. ಸದ್ಯ ಈ ನಿಯಮ ಅಧಿಕೃತವಾಗಿ ಇನ್ನೂ ಜಾರಿಗೆ ಬಂದಿಲ್ಲ.
ಹರಾಜಿನಲ್ಲಿ ಖರೀದಿಸಿದ ನಂತರ ವಿದೇಶಿ ಆಟಗಾರರು ವೈಯಕ್ತಿಕ ಕಾರಣವೊಡ್ಡಿ ಕೊನೆಯ ಗಳಿಗೆಯಲ್ಲಿ ಟೂರ್ನಿಯಿಂದ ಹಿಂದೆ ಸರಿದ ಹಲವು ನಿದರ್ಶನಗಳಿಗೆ. ದೊಡ್ಡ ಮೊತ್ತ ಪಡೆದ ಆಟಗಾರರೇ ಹೆಚ್ಚಾಗಿ ಈ ರೀತಿ ಕೈಕೊಡುವುದರಿಂದ ಖರೀದಿ ಮಾಡಿದ ತಂಡಕ್ಕೆ ಇದು ಭಾರೀ ಹಿನ್ನಡೆ ಉಂಟು ಮಾಡುತ್ತದೆ. ಈ ಆಟಗಾರಿಗೆ ವ್ಯಯಿಸಿದ ಹಣದಲ್ಲಿ ಕನಿಷ್ಠ 3 ಆಟಗಾರರನ್ನು ಖರೀದಿಸುವ ಅವಕಾಶ ತಂಡಕ್ಕೆ ಲಭಿಸುತ್ತದೆ. ವಿದೇಶಿ ಆಟಗಾರರ ನಿಷೇಧ ಕುರಿತ ವಾದಕ್ಕೆ ಎಲ್ಲಾ 10 ತಂಡಗಳು ಸಹಮತ ವ್ಯಕ್ತಪಡಿಸಿವೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ IPL 2025: ಇಂದು ಐಪಿಎಲ್ ಮೆಗಾ ಹರಾಜು ಕುರಿತು ಸಭೆ; ಫ್ರಾಂಚೈಸಿಗಳಿಂದ ಹಲವು ಬೇಡಿಕೆ!
ಗಾಯದ ಸಮಸ್ಯೆ ಅಥವಾ ಗಂಭೀರವಾದ ಕೆಲ ವೈಯಕ್ತಿಕ ಕಾರಣಗಳು ಇದ್ದ ವೇಳೆ ಈ ನಿಷೇಧ ಶಿಕ್ಷೆ ಅನ್ವಯ ಮಾಡಬಾರದು ಎಂದು ಫ್ರಾಂಚೈಸಿಗಳು ಒಪ್ಪಿಕೊಂಡಿದೆ. ಆದರೆ, ಕುಂಟು ನೆಪವೊಡ್ಡಿ ಟೂರ್ನಿಯಿಂದ ಕೊನೆ ಗಳಿಗೆಯಲ್ಲಿ ಹಿಂದೆ ಸರಿಯುವ ಆಟಗಾರರಿಗೆ ಈ ಶಿಕ್ಷೆ ವಿಧಿಸಬೇಕು ಎನ್ನುವುದು ಫ್ರಾಂಚೈಸಿಗಳ ವಾದ.
ಸಭೆಯಲ್ಲಿ ಸನ್ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್, ಹಾಲಿ ಚಾಂಪಿಯನ್ ಕೆಕೆಆರ್ ಫ್ರಾಂಚೈಸಿ ಮಾಲಿಕರು ಕನಿಷ್ಠ 7 ಆಟಗಾರರನ್ನಾದರೂ ತಂಡದಲ್ಲಿ ಉಳಿಸಿಕೊಳ್ಳುವ ಅವಕಾಶ ನೀಡಬೇಕೆಂದು ಬೇಡಿಕೆ ಇರಿಸಿವೆ ಎಂದು ವರದಿಯಾಗಿದೆ. ಇದು ಮಾತ್ರವಲ್ಲದೆ ಮೆಗಾ ಹರಾಜಿನಲ್ಲಿ ಮತ್ತೊಮ್ಮೆ RTM(ರೈಟ್ ಟು ಮ್ಯಾಚ್ ಕಾರ್ಡ್ ಬಳಕೆ) ಕಾರ್ಡ್ ಬಳಸುವ ಬಗ್ಗೆಯೂ ಫ್ರಾಂಚೈಸಿ ಡಿಮ್ಯಾಂಡ್ ಮಾಡಲಿದೆ. 2018ರ ಮೆಗಾ ಹರಾಜಿನಲ್ಲಿ RTMಗೆ ಅವಕಾಶವಿತ್ತು. ಆದರೆ 2022ರಲ್ಲಿ ನಡೆದ ಮೆಗಾ ಹರಾಜಿನಲ್ಲಿ ಇದನ್ನು ಕೈಬಿಡಲಾಗಿತ್ತು, ಇದೀಗ ಮತ್ತೆ ಈ ನಿಯವನ್ನು ಜಾರಿಗೆ ತರಲು ಫ್ರಾಂಚೈಸಿಗಳು ಒಳವು ತೋರಿದೆ ಎನ್ನಲಾಗಿದೆ.
5 ವರ್ಷಗಳಿಗೊಮ್ಮೆ ಮೆಗಾ ಹರಾಜು?
ಐಪಿಎಲ್ ಮೆಗಾ ಹರಾಜನ್ನು ಇನ್ನು ಮುಂದೆ ಐದು ವರ್ಷಗಳಿಗೊಮ್ಮೆ ನಡೆಸುವಂತೆಯೂ ಕೆಲವು ಫ್ರಾಂಚೈಸಿಗಳು ಮನವಿ ಮಾಡಿದೆ ಎನ್ನಲಾಗಿದೆ. ಈ ಹಿಂದೆ ಪ್ರತಿ ಮೂರು ವರ್ಷಗಳಿಗೊಮ್ಮೆ ಮೆಗಾ ಹರಾಜು ಆಯೋಜಿಸಲಾಗುತ್ತಿತ್ತು. ಒಂದೊಮ್ಮೆ ಈ ಬೇಡಿಕೆಗೆ ಬಿಸಿಸಿಐ ಸಮ್ಮತಿಸಿದರೆ. ಮುಂದಿನ ಮೆಗಾ ಹರಾಜು 2029ರಲ್ಲಿ ನಡೆಯಲಿದೆ. ಇದರ ನಡುವೆ ಮಿನಿ ಹರಾಜು ಮಾತ್ರ ನಡೆಯಲಿದೆ. ಈ ತಿಂಗಳಾಂತ್ಯದಲ್ಲಿ ಐಪಿಎಲ್ ಮಾಲೀಕರೊಂದಿಗೆ ಬಿಸಿಸಿಐ ಸಭೆ ನಡೆಸಿ ಮೆಗಾ ಹರಾಜಿನ ಅಂತಿಮ ರೂಪುರೇಷೆಗಳ ಬಗ್ಗೆ ಚರ್ಚಿಸಲಿದೆ ಎಂದು ವರದಿಯಾಗಿದೆ