ಕೋಲ್ಕತ್ತಾ: ಟೀಮ್ ಇಂಡಿಯಾ ಕೋಚ್ ಹುದ್ದೆಯಿಂದ ನಿವೃತ್ತಿಯಾಗಿರುವ ರಾಹುಲ್ ದ್ರಾವಿಡ್(Rahul Dravid) ಇನ್ನು ಮುಂದೆ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಕೋಲ್ಕತ್ತಾ ನೈಟ್ ರೇಡರ್ಸ್(KKR) ಫ್ರಾಂಚೈಸಿಯು ದ್ರಾವಿಡ್ ಅವರನ್ನು ಮೆಂಟರ್ ಆಗಿ ನೇಮಕ ಮಾಡಲು ಈಗಾಗಲೇ ಮಾತುಕತೆ ನಡೆಸಿದೆ ಎಂದು ನ್ಯೂಸ್18 ಬೆಂಗಾಲ್ ವರದಿ ಮಾಡಿದೆ.
“ರಾಹುಲ್ ದ್ರಾವಿಡ್ ಅವರು ಎರಡು ವರ್ಷಗಳ ಒಪ್ಪಂದಕ್ಕಾಗಿ ಐಪಿಎಲ್ ತಂಡದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ” ಎಂದುನ್ಯೂಸ್18 ಬೆಂಗಾಲ್ ವರದಿ ಮಾಡಿದೆ. ರಾಹುಲ್ ದ್ರಾವಿಡ್ ಅವರು ಈ ಹಿಂದೆ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಗೌತಮ್ ಗಂಭೀರ್ ಅವರು ಟೀಮ್ ಇಂಡಿಯಾದ ಕೋಚ್ ಆಗುವುದು ಖಚಿತವಾಗಿದೆ. ಈಗಾಗಲೇ ಅವರು ಕೆಕೆಆರ್ ತಂಡದ ಮೆಂಟರ್ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಗಂಭೀರ್ ಅವರಿಂದ ತೆರೆವಾದ ಸ್ಥಾನಕ್ಕೆ ಇದೀಗ ದ್ರಾವಿಡ್ ಅವರನ್ನು ಮೆಂಟರ್ ಮಾಡಲು ಕೆಕೆಆರ್ ಮುಂದಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಇದನ್ನೂ ಓದಿ Rahul Dravid: ದ್ರಾವಿಡ್ಗೆ ಗಾರ್ಡ್ ಆಫ್ ಹಾನರ್ ಸಲ್ಲಿಸಿದ ವಿದ್ಯಾರ್ಥಿಗಳು; ವಿಡಿಯೊ ವೈರಲ್
ಭಾರತಕ್ಕೆ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆಲ್ಲಿಸಿದ ಕೋಚ್ ದ್ರಾವಿಡ್ ಅವರನ್ನು ಕೆಕೆಆರ್ ಮಾತ್ರವಲ್ಲದೆ ಇದುವರೆಗೂ ಕಪ್ ಗೆಲ್ಲದ ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕೂಡ ಕೋಚ್ ಮಾಡಲು ರೇಸ್ನಲ್ಲಿವೆ ಎಂದು ಹೇಳಲಾಗಿದೆ. ಡೆಲ್ಲಿ ತಂಡದ ಮೆಂಟರ್ ಆಗಿರುವ ಸೌರವ್ ಗಂಗೂಲಿ ಅವರು ದ್ರಾವಿಡ್ ಮನವೊಲಿಸಿ ಕೋಚ್ ಆಗುವಂತೆ ಒಪ್ಪಿಸುವ ಸಾಧ್ಯತೆಯೂ ಇದೆ. ಏಕೆಂದರೆ ದ್ರಾವಿಡ್ ಅವರನ್ನು ಟೀಮ್ ಇಂಡಿಯಾದ ಕೋಚ್ ಆಗಿ ಮಾಡಿದ್ದು ಕೂಡ ಗಂಗೂಲಿ. ಬಿಸಿಸಿಐ ಅಧ್ಯಕ್ಷರಾಗಿದ್ದ ವೇಳೆ ಗಂಗೂಲಿ ಒತ್ತಾಯ ಪೂರ್ವಕವಾಗಿ ದ್ರಾವಿಡ್ ಅವರನ್ನು ಕೋಚ್ ಆಗುವಂತೆ ಒಪ್ಪಿಸಿದ್ದರು. ಕುಟುಂಬಕ್ಕೆ ಹೆಚ್ಚಿನ ಒತ್ತು ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣಕ್ಕೆ ಕೋಚಿಂಗ್ ಹುದ್ದೆಯಲ್ಲಿ ಮುಂದುವರಿಯಲು ಹಿಂದೇಟು ಹಾಕಿರುವ ದ್ರಾವಿಡ್ ಐಪಿಎಲ್ ಕೋಚಿಂಗ್ ನಡೆಸಲಿದ್ದಾರಾ ಎಂದು ಕಾದು ನೋಡಬೇಕಿದೆ.
ರಾಹುಲ್ ದ್ರಾವಿಡ್(Rahul Dravid) ಅವರಿಗೆ ಬೆಂಗಳೂರಿನ(Bengaluru) ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ವಿದ್ಯಾರ್ಥಿಗಳು ಗಾರ್ಡ್ ಆಫ್ ಹಾನರ್ (ಗೌರವ ವಂದನೆ) ಮೂಲಕ(guard of honour) ಅಭಿನಂದಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ರಾಹುಲ್ ದ್ರಾವಿಡ್ ಅವರು ಎನ್ಸಿಎ ಕ್ರಿಕೆಟ್ ಅಕಾಡೆಮಿಗೆ(cricket academy in Bengaluru) ಆಗಮಿಸುತ್ತಿದ್ದಂತೆ ಅಧಿಕಾರಿಗಳು ಮತ್ತು ಇಲ್ಲಿ ಕ್ರಿಕೆಟ್ ಅಭ್ಯಾಸ ನಡೆಸುತ್ತಿರುವ ವಿದ್ಯಾರ್ಥಿಗಳು ಬ್ಯಾಟ್ ಎತ್ತಿ ಗಾರ್ಡ್ ಆಫ್ ಹಾನರ್ ಮೂಲಕ ಗೌರವ ಸಲ್ಲಿಸಿದರು. ದ್ರಾವಿಡ್ ಕೂಡ ಸಂತಸದಿಂದಲೇ ಎಲ್ಲರ ಕೈ ಕುಲುಕಿ ಧನ್ಯವಾದ ತಿಳಿಸಿದರು. ಭಾರತ ಟಿ20 ವಿಶ್ವಕಪ್ ಗೆಲ್ಲುವಲ್ಲಿ ದ್ರಾವಿಡ್ ಅವರ ಮಾರ್ಗದರ್ಶನ ಅಮೋಘವಾಗಿತ್ತು.
ಪ್ರಧಾನ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರಿಗೆ “ಭಾರತ ರತ್ನ” ಪ್ರಶಸ್ತಿಯಿಂದ ಗೌರವಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುನೀಲ್ ಗವಾಸ್ಕರ್ ಒತ್ತಾಯಿಸಿದ್ದಾರೆ. “ಭಾರತ ಸರಕಾರವು ದ್ರಾವಿಡ್ಗೆ ಭಾರತ ರತ್ನ ಪ್ರಶಸ್ತಿಯಿಂದ ಗೌರವಿಸಿದರೆ ಅದು ಅವರಿಗೆ ಸಲ್ಲುವ ಸೂಕ್ತ ಗೌರವವಾಗುತ್ತದೆ. ಈ ಗೌರವಕ್ಕೆ ಅವರು ಸಂಪೂರ್ಣವಾಗಿ ಅರ್ಹರಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ದ್ರಾವಿಡ್ ಆಟಗಾರರಾಗಿ ಮತ್ತು ತಂಡದ ನಾಯಕರಾಗಿ ವಿದೇಶಗಳಲ್ಲಿ ಭಾರತಕ್ಕೆ ಗೆಲುವು ತಂದು ಕೊಟ್ಟಿದ್ದಾರೆ. ವೆಸ್ಟ್ ಇಂಡೀಸ್ನಲ್ಲಿ ಗೆಲ್ಲುವುದು ಅಸಾಧ್ಯ ಎಂಬ ಕಾಲದಲ್ಲಿ ಅವರು ಭಾರತಕ್ಕೆ ಸರಣಿ ಗೆಲುವನ್ನು ತಂದಿದ್ದಾರೆ. ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿಗಳನ್ನು ಗೆದ್ದಿರುವ ಕೇವಲ ಮೂರು ಭಾರತೀಯ ನಾಯಕರ ಪೈಕಿ ಅವರು ಕೂಡ ಒಬ್ಬರಾಗಿದ್ದಾರೆ. ಈ ಹಿಂದೆ, ಅವರು ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿ ಅತ್ಯುತ್ತಮ ಕ್ರಿಕೆಟ್ ಪ್ರತಿಭೆಗಳನ್ನು ಹೊರತಂದಿದ್ದಾರೆ. ಬಳಿಕ ಭಾರತೀಯ ಹಿರಿಯರ ಕ್ರಿಕೆಟ್ ತಂಡದ ಕೋಚ್ ಆಗಿ ಉತ್ತಮ ನಿರ್ವಹಣೆ ನೀಡಿದ್ದಾರೆ ಎಂದು ಗವಾಸ್ಕರ್ ಬರೆದುಕೊಂಡಿದ್ದಾರೆ.