ನವದೆಹಲಿ: ಮುಂದಿನ ವರ್ಷ ನಡೆಯುವ 18ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ(IPL 2025 Mega Auction) ಇದೇ ವರ್ಷಾಂತ್ಯದಲ್ಲಿ ಆಟಗಾರರ ಮಿನಿ ಹರಾಜು ನಡೆಯಲಿದೆ. ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಎಲ್ಲ 10 ತಂಡಗಳಿಗೆ ಗರಿಷ್ಠ 3 ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ಕಲ್ಪಿಸಲಿದೆ ಎಂದು ವರದಿಯಾಗಿದೆ. ಜತೆಗೆ ಹರಾಜಿನಲ್ಲಿ ಒಂದು ರೈಟ್ ಟು ಮ್ಯಾಚ್ (ಆರ್ಟಿಎಂ) ಕಾರ್ಡ್ ಬಳಸಲು ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ.
ಈ ಆವೃತ್ತಿಯ ಐಪಿಎಲ್(IPL) ಟೂರ್ನಿ ನಡೆಯುತ್ತಿದ್ದ ವೇಳೆ ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ 3 ರಿಂದ 4 ಆಟಗಾರರನ್ನು ಮಾತ್ರ ರಿಟೇನ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದರು. ಆದರೆ ಕೆಲ ಫ್ರಾಂಚೈಸಿಗಳು 6-8 ಆಟಗಾರರನ್ನೂ ರಿಟೇನ್ ಮಾಡಿಕೊಳ್ಳಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿತ್ತು. ಇನ್ನು ಕೆಲ ಫ್ರಾಂಚೈಸಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಹೆಚ್ಚಿನ ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದರೆ ಇದು ನಿರುಪಯುಕ್ತ ಎನಿಸಲಿದೆ ಎಂದು ಫ್ರಾಂಚೈಸಿ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದರು. ಸದ್ಯ ಮಾಹಿತಿ ಪ್ರಕಾರ ಬಿಸಿಸಿಐ ಗರಿಷ್ಠ 3 ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಮತ್ತು ಒಂದು ರೈಟ್ ಟು ಮ್ಯಾಚ್ (ಆರ್ಟಿಎಂ) ಕಾರ್ಡ್ ಬಳಸುವ ಅವಕಾಶ ಮಾತ್ರ ನೀಡಲಿದೆ ಎನ್ನಲಾಗಿದೆ.
ಇದನ್ನೂ ಓದಿ T20 World Cup 2024 : ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?
ಏನಿದು ಆರ್ಟಿಎಂ ಕಾರ್ಡ್?
ಆರ್ಟಿಎಂ ಅನ್ವಯ ಫ್ರಾಂಚೈಸಿಯೊಂದು ತನ್ನ ತಂಡದ ಆಟಗಾರನೊಬ್ಬ ಬೇರೆ ತಂಡಕ್ಕೆ ಹೆಚ್ಚಿನ ಮೊತ್ತಕ್ಕೆ ಮಾರಾಟವಾದಾಗ ಅದೇ ಮೊತ್ತಕ್ಕೆ ಆತನನ್ನು ತನ್ನ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಇದನ್ನು ಆರ್ಟಿಎಂ ಎನ್ನಲಾಗುತ್ತದೆ. ಈ ಬಾರಿ ಒಂದೇ ಕಾರ್ಡ್ ಬಳಕೆಗೆ ಅವಕಾಶ ನೀಡುವುದಾಗಿ ಹೇಳಲಾಗಿದೆ. ಹೆಚ್ಚಿನ ಆರ್ಟಿಎಂ ಬಳಸಲು ಅವಕಾಶ ನೀಡಿದರೆ ಹರಾಜು ಪ್ರಕ್ರಿಯೆ ಮಹತ್ವ ಕಳೆದುಕೊಳ್ಳುತ್ತದೆ ಎಂದು ಬಿಸಿಸಿಐ ಅಧಿಕಾರಿಗಳ ಅಭಿಪ್ರಾಯ. ಐಪಿಎಲ್ನಲ್ಲಿ ಇದುವರೆಗೆ ವಿರಾಟ್ ಕೊಹ್ಲಿ (ಆರ್ಸಿಬಿ), ಜಸ್ಪ್ರೀತ್ ಬುಮ್ರಾ(ಮುಂಬೈ) ಮಾತ್ರ ಒಂದೇ ತಂಡದ ಪರ ಆಡಿದ್ದಾರೆ. ಉಳಿದ ಆಟಗಾರರು ಬೇರೆ ಬೇರೆ ಫ್ರಾಂಚೈಸಿ ಪರ ಕನಿಷ್ಠ ಒಂದೆರಡು ವರ್ಷಗಳ ಕಾಲ ಆಡಿದ್ದಾರೆ.
ಇಂಪ್ಯಾಕ್ಟ್ ನಿಯಮ ಕೈಬಿಡುವ ಸಾಧ್ಯತೆ!
ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಸೇರಿ ಹಲವು ಅನುಭವಿ ಆಟಗಾರರಿಂದ ಇಂಪ್ಯಾಕ್ಟ್ ನಿಯಮದ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಬಿಸಿಸಿಐ ಕೂಡ ಮುಂದಿನ ಬಾರಿ ಈ ನಿಯಮದ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿತ್ತು. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಇಂಪ್ಯಾಕ್ಟ್ ನಿಯಮ ಕೈ ಬಿಟ್ಟರೂ ಅಚ್ಚರಿಯಿಲ್ಲ. ಧೋನಿ ಅವರು ಇಂಪ್ಯಾಕ್ಟ್ ನಿಯಮ ಇಲ್ಲವಾದರೆ ಮುಂದಿನ ಆವೃತ್ತಿ ಆಡುವುದು ಅನುಮಾನ ಎಂದು ಫ್ರಾಂಚೈಸಿ ಅಧಿಕಾರಿಯೊಬ್ಬರು ಹೇಳಿದ್ದರು. ಒಂದೊಮ್ಮೆ ಈ ನಿಯಮ ಕೈಬಿಟ್ಟರೆ ಆಗ ಧೋನಿ ಆಡುತ್ತಾರಾ ಎನ್ನುವ ಪ್ರಶ್ನೆಯೊಂದು ಮೂಡುವುದು ಸಹಜ.