ಮುಂಬಯಿ: 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್(Mumbai Indians) ಮುಂಬರುವ ಐಪಿಎಲ್ ಆವೃತ್ತಿಗೂ ಮುನ್ನ ಮಹತ್ವದ ಘೋಷಣೆಯೊಂದನ್ನು ಮಾಡಲು ಮುಂದಾಗಿದೆ. ಇದರ ಸುಳಿವನ್ನು ಸ್ವತಃ ಫ್ರಾಂಚೈಸಿಯೇ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟುಕೊಟ್ಟಿದೆ. ಹೌದು, ಪ್ರಧಾನ ವೇಗಿ ಜಸ್ಪ್ರೀತ್ ಬುಮ್ರಾ(Jasprit Bumrah) ಅವರನ್ನು ನೂತನ ನಾಯಕನನ್ನಾಗಿ ಮಾಡಲು ನಿರ್ಧರಿಸಿದಂತಿದೆ. ಬುಮ್ರಾ ಅವರು ಜನಗಳ ಮಧ್ಯೆ ಕೈಬೀಸುತ್ತಾ ರ‍್ಯಾಂಪ್ ವಾಕ್ ಮಾಡುತ್ತಿರುವ ಫೋಟೊವನ್ನು ಹಂಚಿಕೊಂಡಿದೆ. ಹೀಗಾಗಿ ಬುಮ್ರಾ ನಾಯಕನಾಗುವುದು ಖಚಿತ ಎನ್ನುವಂತಿದೆ. ಇದಕ್ಕೆ ಅಧಿಕೃತ ಮುದ್ರೆಯೊಂದು ಬೀಳಲು ಮಾತ್ರ ಬಾಕಿ ಇದೆ.
ಕಳೆದ ಬಾರಿ ರೋಹಿತ್ ಶರ್ಮ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ(Hardik Pandya)ಗೆ ನಾಯಕತ್ ಪಟ್ಟ ನೀಡಲಾಗಿತ್ತು. ಆದರೆ, ಪಾಂಡ್ಯ ನಾಯಕತ್ವದಲ್ಲಿ ಮುಂಬೈ ತಂಡ ಎಂದೂ ಕಾಣದ ವೈಫಲ್ಯ ಕಂಡಿತ್ತು. ಪಾಂಡ್ಯ ನಾಯಕನಾಗುವ ಬಗ್ಗೆ ಬುಮ್ರಾ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಬಳಿಕ ಫ್ರಾಂಚೈಸಿಯೇ ಅವರನ್ನು ಸಮಾಧಾನಪಡಿಸಿತ್ತು. ಇದೀಗ ಬುಮ್ರಾ ಅವರನ್ನೇ ನಾಯಕನನ್ನಾಗಿ ಮಾಡಲು ಮುಂದಾಗಿದೆ. ಬುಮ್ರಾ ಕಾರ್ಯವೈಖರಿ ಬಗ್ಗೆಯೂ ಸಹ ಆಟಗಾರರಿಗೆ ಸಮಧಾನವಿದೆ. ಬುಮ್ರಾ ರೋಹಿತ್ಗೆ ಬಹಳ ಆತ್ಮಿಯರಾಗಿರುವ ಕಾರಣ ಬುಮ್ರಾ ನಾಯಕನಾದರೆ ರೋಹಿತ್ ಕೂಡ ಮುಂಬೈ ತೊರೆಯಲು ಹಿಂದೇಟು ಹಾಕಬಹುದು ಎನ್ನುವುದು ಫ್ರಾಂಚೈಸಿಯ ಯೋಜನೆ.
ಜಸ್ಪ್ರೀತ್ ಬುಮ್ರಾ ಅವರು ಇದುವರೆಗೆ 133 ಐಪಿಎಲ್ ಆಡಿದ್ದು 165 ವಿಕೆಟ್ ಕೆಡವಿದ್ದಾರೆ. 2013ರಲ್ಲಿ ಮುಂಬೈ ತಂಡದ ಪರ ಐಪಿಎಲ್ ಪದಾರ್ಪಣೆ ಮಾಡಿದ್ದ ಬುಮ್ರಾ ಇದುವರೆಗೂ ಮುಂಬೈ ಪರವೇ ಆಡುತ್ತಿದ್ದಾರೆ.
ಇದನ್ನೂ ಓದಿ IPL 2025: ಮುಂಬೈ ಇಂಡಿಯನ್ಸ್ಗೆ ಶ್ರೇಯಸ್ ಅಯ್ಯರ್, ಕೆಕೆಆರ್ಗೆ ಸೂರ್ಯಕುಮಾರ್ ನಾಯಕ!
ಸೂರ್ಯಕುಮಾರ್ ಯಾದವ್ಗೆ ಹಾಲಿ ಚಾಂಪಿಯನ್ ಕೆಕೆಆರ್(KKR) ತಂಡದಿಂದ ನಾಯಕತ್ವದ ಆಫರ್ ಬಂದಿದೆ ಎಂದು ವರದಿಯಾಗಿದೆ. ಸೂರ್ಯಕುಮಾರ್ ಯಾದವ್ ಅವರು ಮುಂಬೈ ತಂಡ ಸೇರುವ ಮುನ್ನ ಕೆಕೆಆರ್ ಪರ ಆಡುತ್ತಿದ್ದರು. 2014 ರ ಐಪಿಎಲ್ ಹರಾಜಿನಲ್ಲಿ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಖರೀದಿಸಿತ್ತು. ಇದೇ ಆವೃತ್ತಿಯಲ್ಲಿ ಕೆಕೆಆರ್ ಚಾಂಪಿಯನ್ ಕೂಡ ಆಗಿತ್ತು. ಗೌತಮ್ ಗಂಭೀರ್ ತಂಡದ ನಾಯಕನಾಗಿದ್ದರು. ಸೂರ್ಯಕುಮಾರ್ ಕೆಕೆಆರ್ ಪರ ನಾಲ್ಕು ಋತುಗಳಲ್ಲಿ 54 ಪಂದ್ಯಗಳನ್ನಾಡಿ 608 ರನ್ ಬಾರಿಸಿದ್ದರು. 2018ರಲ್ಲಿ ಸೂರ್ಯ ಮುಂಬೈ ತಂಡ ಸೇರಿದ್ದರು.
ಸೂರ್ಯಕುಮಾರ್ ಇದುವರೆಗೆ 150 ಐಪಿಎಲ್ ಪಂದ್ಯಗಳಿಂದ 3594 ರನ್ ಬಾರಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 24 ಅರ್ಧಶತಕ ಒಳಗೊಂಡಿದೆ. ರೋಹಿತ್ ಶರ್ಮ ಅವರು ಟಿ20 ಕ್ರಿಕೆಟ್ಗೆ ನಿವೃತ್ತಿ ಹೇಳಿದ ಕಾರಣ ಭಾರತ ತಂಡದ ಟಿ20 ನಾಯಕತ್ವ ಸೂರ್ಯಕುಮಾರ್ ಹೆಗಲೇರಿದೆ. ಅವರ ಪೂರ್ಣ ಪ್ರಮಾಣದ ನಾಯಕತ್ವದಲ್ಲಿ ಆಡಿದ್ದ ಕಳೆದ ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 3-0 ಅಂತರದಿಂದ ಗೆದ್ದು ಬೀಗಿತ್ತು.