ಮುಂಬಯಿ: 18ನೇ ಆವೃತ್ತಿಯ ಐಪಿಎಲ್(IPL 2025) ಕುರಿತಾಗಿ ಪ್ರತಿ ದಿನ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ಸುದ್ದಿಗಳು ಭಾರೀ ಚರ್ಚೆಯಾಗುತ್ತಿದೆ. ಇದೀಗ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮ(Rohit Sharma) ಅವರು ಆರ್ಸಿಬಿ(RCB) ಸೇರಲಿದ್ದಾರೆ(rohit sharma join rcb team) ಎಂದು ವರದಿಯಾಗಿದೆ. ಇದೇ ವರ್ಷದ ಡಿಸೆಂಬರ್ನಲ್ಲಿ ಆಟಗಾರರ ಮೆಗಾ ಹರಾಜು ಕೂಡ ನಡೆಯಲಿದ್ದು ಹಲವು ಸ್ಟಾರ್ ಆಟಗಾರರು ತಮ್ಮ ಮೂಲ ತಂಡ ತೊರೆದು ಬೇರೆ ತಂಡದ ಪರ ಆಡಲು ಬಯಸಿರುವುದಾಗಿ ತಿಳಿದುಬಂದಿದೆ.
ಕಳೆದ 17ನೇ ಆವೃತ್ತಿಯಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ದಿಢೀರ್ ಆಗಿ ಮುಂಬೈ ಇಂಡಿಯನ್ಸ್ ತಂಡದ ನಾಯಕನನ್ನಾಗಿ ನೇಮಿಸಿ, 5 ಬಾರಿ ಕಪ್ ಗೆಲ್ಲಿಸಿದ ರೋಹಿತ್ ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದು ರೋಹಿತ್ ಅಭಿಮಾನಿಗಳು ಸೇರಿ ತಂಡದ ಸಹ ಆಟಗಾರರಿಗೂ ತೀವ್ರ ನೋವುಂಟು ಮಾಡಿತ್ತು. ಇದೇ ವಿಚಾರವಾಗಿ ಮುಂಬೈ ಫ್ರಾಂಚೈಸಿ ವಿರುದ್ಧ ತಮ್ಮದೇ ಅಭಿಮಾನಿಗಳು ಆಕ್ರೋಶ ಕೂಡ ವ್ಯಕ್ತಪಡಿಸಿದ್ದರು. ಅದಾಗಲೇ ರೋಹಿತ್ ಮುಂಬೈ ತಂಡ ತೊರೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು, ಆದರೂ ರೋಹಿತ್ ತಂಡದ ಪರ ಆಡಿದ್ದರು. ಆದರೆ ಈ ಬಾರಿ ಮಾತ್ರ ಮುಂಬೈ ಪರ ಆಡದಿರಲು ರೋಹಿತ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ರೋಹಿತ್ ಶರ್ಮಗೆ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ಪ್ರಾಂಚೈಸಿಯಿಂದ ನಾಯಕತ್ವದ ಆಫರ್‌ಗಳು ಬಂದಿದೆ ಎನ್ನಲಾಗಿದೆ. ಆದರೆ, ರೋಹಿತ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಆಸಕ್ತಿ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರೋಹಿತ್ ಆರ್ಸಿಬಿ ಸೇರುತ್ತಾರೆ ಎನ್ನುವ ಸುದ್ದಿ ಕೇಳಿದ್ದೇ ತಡ ಅಭಿಮಾನಿಗಳು ಆರ್ಸಿಬಿ ಜೆರ್ಸಿಯಲ್ಲಿ ರೋಹಿತ್ ಅವರ ಫೋಟೊವನ್ನು ಎಡಿಟ್ ಮಾಡಿ ಎಲ್ಲಡೆ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಒಂದೊಮ್ಮೆ ಅಭಿಮಾನಿಗಳ ಈ ಮಾತು ನಿಜವಾದರೂ ಅಚ್ಚರಿಯಿಲ್ಲ. ಆದರೆ ರೋಹಿತ್ ಹಾಗೂ ಆರ್ಸಿಬಿ ಫ್ರಾಂಚೈಸಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಇದನ್ನೂ ಓದಿ Mumbai Indians : ಮುಂದಿನ ಐಪಿಎಲ್ಗೆ ಮುಂಬೈ ತೊರೆಯಲಿದ್ದಾರೆ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್
ರೋಹಿತ್ ಶರ್ಮ ಅವರನ್ನು ನಾಯಕತ್ವ ಸ್ಥಾನದಿಂದ ಕೈಬಿಟ್ಟು ಪಾಂಡ್ಯ ಅವರಿಗೆ ಪಟ್ಟ ಕಟ್ಟಿದ ಕೆಲವೇ ಕ್ಷಣದಲ್ಲಿ ಮಂಬೈ ಇಂಡಿಯನ್ಸ್ ಫ್ರಾಂಚೈಸಿಯು ಟ್ವಿಟರ್‌ನಲ್ಲಿ (ಎಕ್ಸ್) ನಾಲ್ಕು ಲಕ್ಷಕ್ಕೂ ಹೆಚ್ಚು ಫಾಲೋವರ್ಗಳನ್ನು ಕಳೆದುಕೊಂಡಿತ್ತು. ಒಂದೊಮ್ಮೆ ರೋಹಿತ್ ಈ ಬಾರಿ ಮುಂಬೈ ತಂಡ ತೊರೆದರೆ ಮತ್ತಷ್ಟು ಫಾಲೋವರ್ಗಳ ಸಂಖ್ಯೆ ಕುಸಿತ ಕಾಣುವುದು ನಿಶ್ಚಿತ.
17 ಆವೃತ್ತಿಗಳಿಂದ ಈ ಸಲ ಕಪ್ ನಮ್ದೇ ಎಂದು ಹೇಳಿಕೊಂಡು ಬಂದರೂ ಒಮ್ಮೆಯೂ ಕಪ್ ಗೆಲ್ಲುವಲ್ಲಿ ಯಶಸ್ವಿಯಾಗದ ಆರ್ಸಿಬಿಗೆ ರೋಹಿತ್ ಬಂದು ಕಪ್ ಗೆಲ್ಲಿಸಬೇಕು ಎನ್ನುವುದು ಆರ್ಸಿಬಿ ಅಭಿಮಾನಿಗಳ ಬಯಕೆಯಾಗಿದೆ. ರೋಹಿತ್ ಗರಿಷ್ಠ 5 ಐಪಿಎಲ್ ಕಪ್ ಗೆದ್ದ ನಾಯಕನಾಗಿದ್ದಾರೆ. ರೋಹಿತ್ ಮಾತ್ರವಲ್ಲದೆ ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಕೂಡ ಮುಂಬೈ ತಂಡ ತೊರೆಯಲಿದ್ದಾರೆ ಎಂದು ವರದಿಯಾಗಿದೆ. ಬುಮ್ರಾ ತಮ್ಮ ತವರಾದ ಗುಜರಾತ್ ಟೈಟಾನ್ಸ್ ತಂಡದ ಪರ ಆಡಲಿದ್ದಾರೆ ಎನ್ನಲಾಗಿದೆ.