ಬೆಂಗಳೂರು: ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿರುವ ವಿರಾಟ್ ಕೊಹ್ಲಿ(Virat Kohli) ಅವರು ಮತ್ತೆ ಐಪಿಎಲ್ನಲ್ಲಿ ಆರ್ಸಿಬಿ ತಂಡದ ನಾಯಕನಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇದು ಆರ್ಸಿಬಿ ಮತ್ತು ಕೊಹ್ಲಿ ಅಭಿಮಾನಿಗಳಿಗೆ ಕುತೂಹಲ ಮೂಡಿಸುವಂತೆ ಮಾಡಿದೆ.
ಮುಂದಿನ ವರ್ಷ ಮೆಗಾ ಹರಾಜು ಕೂಡ ನಡೆಯಲಿದೆ. (IPL 2025) 18ನೇ ಆವೃತ್ತಿಯಲ್ಲಿ ಬೆಂಗಳೂರು ತಂಡದಲ್ಲಿ ಕೂಡ ದೊಡ್ಡ ಬದಲಾವಣೆಯೊಂದು ಸಂಭವಿಸುವ ಮುನ್ಸೂಚನೆಯೊಂದು ಲಭಿಸಿದೆ. ಈ ಹಿಂದೆ ತಂಡದ ನಾಯಕನಾಗಿದ್ದ ದಕ್ಷಿಣ ಆಫ್ರಿಕಾದ ಡುಪ್ಲೆಸಿಸ್ ಅವರನ್ನು ಕೈ ಬಿಟ್ಟು ಮಾಜಿ ನಾಯಕ ವಿರಾಟ್ ಕೊಹ್ಲಿ(Virat Kohli)ಗೆ ಮತ್ತೆ ನಾಯಕತ್ವ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿರಾಟ್ ಕೊಹ್ಲಿ ಅವರು ಭಾರತ ತಂಡದ ಮೂರು ಮಾದರಿಯ ನಾಯಕತ್ವ ವಹಿಸಿಕೊಂಡಿದ್ದ ವೇಳೆ ಐಪಿಎಲ್ನಲ್ಲಿಯೂ ತಂಡವನ್ನು ಮುನ್ನಡೆಸುವುದು ಕಷ್ಟವಾಗುತ್ತದೆ, ಕೆಲಸದ ಒತ್ತಡದಿಂದಾಗಿ ಆಟದ ಕಡೆ ಸರಿಯಾಗಿ ಗಮನ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಐಪಿಎಲ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಸೂಕ್ತ ನಾಯಕನ ಸ್ಥಾನಕ್ಕೆ ಚೆನ್ನೈ ತಂಡದಲ್ಲಿದ್ದ ಫಾಫ್ ಡುಪ್ಲೆಸಿಸ್ ಅವರನ್ನು ಖರೀದಿ ಮಾಡಿ ಅವರಿಗೆ ನಾಯಕತ್ವ ನೀಡಲಾಗಿತ್ತು.
ಕಳೆದ ಮೂರು ಸೀಸನ್ನಲ್ಲಿ ಡುಪ್ಲೆಸಿಸ್ ಆರ್ಸಿಬಿ ತಂಡವನ್ನು ಮುನ್ನಡೆಸಿದರೂ ತಂಡದ ಭವಿಷ್ಯ ಮಾತ್ರ ಬದಲಾಗಲಿಲ್ಲ. ಕಳೆದ ಬಾರಿಯಂತೂ ಲೀಗ್ನಿಂದಲೇ ಹೊರಬಿದ್ದಿತ್ತು. ಇದೀಗ ಟಿ20ಗೆ ನಿವೃತ್ತಿ ಹೇಳಿ ಎಲ್ಲ ಒತ್ತಡ ಕಡಿಮೆ ಮಾಡಿರುವ ಕೊಹ್ಲಿ ಮತ್ತೆ ನಾಯಕನಾದರೂ ಅಚ್ಚರಿಯಿಲ್ಲ. ಸದ್ಯದ ಮಾಹಿತಿ ಪ್ರಕಾರ ಕೊಹ್ಲಿ ನಾಯಕನಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದರೂ ಕೂಡ ಕೊಹ್ಲಿ ಇದಕ್ಕೆ ಒಪ್ಪಲಿದ್ದಾರಾ ಎನ್ನುವುದು ಕುತೂಹಲ. ಈ ಐಪಿಎಲ್ನಲ್ಲಿ ಕೊಹ್ಲಿ ಪ್ರಚಂಡ ಬ್ಯಾಟಿಂಗ್ ಮೂಲಕ 700ಕ್ಕೂ ಅಧಿಕ ರನ್ ಕಲೆ ಹಾಕಿ ಟೂರ್ನಿಯ ಅತ್ಯಧಿಕ ಸ್ಕೋರ್ ಎನಿಸಿಕೊಂಡಿದ್ದರು.
ಇದನ್ನೂ ಓದಿ Virat Kohli: ಬುರ್ಜ್ ಖಲೀಫಾದಲ್ಲಿ ಕಣ್ಮನ ಸೆಳೆದ ವಿರಾಟ್ ಕೊಹ್ಲಿಯ ಫೋಟೊ; ವಿಡಿಯೊ ವೈರಲ್
ಕನ್ನಡಿಗ ಕೆ.ಎಲ್ ರಾಹುಲ್ ಕೂಡ ಆರ್ಸಿಬಿ ತಂಡಕ್ಕೆ ಬರಲಿದ್ದಾರೆ ಎನ್ನುವ ಮಾತುಗಳು ಕೂಡ ಕೆಲ ತಿಂಗಳಿನಿಂದ ಕೇಳಿರುತ್ತಿದೆ. ಒಂದೊಮ್ಮೆ ಕೊಹ್ಲಿ ನಾಯಕನ ಸ್ಥಾನ ತಿರಸ್ಕರಿಸಿದರೆ, ರಾಹುಲ್ ಆರ್ಸಿಬಿ ಸೇರಿದರೆ ನಾಯಕತ್ವ ಅವರ ಪಾಲಾಗುವು ಸಾಧ್ಯತೆ ಇದೆ.
ಕೊಹ್ಲಿಯ ನಾಕಯತ್ವ ಸಾಧನೆ ಹೇಗಿದೆ?
ವಿರಾಟ್ ಕೊಹ್ಲಿ 2013ರಲ್ಲಿ ಆರ್ಸಿಬಿಯ ಪೂರ್ಣ ಪ್ರಮಾಣದ ನಾಯಕನಾಗಿ ನೇಮಕಗೊಂಡಿದ್ದರು. 2021ರ ತನಕ ಅವರು ಆರ್ಸಿಬಿಯನ್ನು ಮುನ್ನಡೆಸಿದ್ದರು. ಕೊಹ್ಲಿ ನಾಯಕತ್ವದಲ್ಲಿ ಒಟ್ಟು 140 ಪಂದ್ಯಗಳನ್ನು ಆಡಿದ್ದ ಆರ್ಸಿಬಿ 66 ಪಂದ್ಯಗಳನ್ನು ಜಯಿಸಿದೆ. 70 ಪಂದ್ಯಗಳಲ್ಲಿ ಸೋಲು ಕಂಡಿದೆ. ಐಪಿಎಲ್ ಇತಿಹಾಸದಲ್ಲಿ ವಿನ್ನಿಂಗ್ಸ್ ಸರಾಸರಿಯಲ್ಲಿ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಅವರ ನಾಯಕತ್ವದ ಸರಾಸರಿ ಗೆಲುವು ಶೇ. 46.15 ರಷ್ಟಿದೆ. ದಾಖಲೆ ಧೋನಿ ಹೆಸರಿನಲ್ಲಿದೆ. ಧೋನಿ ನಾಯಕತ್ವದ ಗೆಲುವಿನ ಸರಾಸರಿ 60.38 ರಷ್ಟಿದೆ.