ದುಬೈ: ಬಹುನಿರೀಕ್ಷಿತ ಐಪಿಎಲ್ 17ನೇ ಆವೃತ್ತಿಯ ಆಟಗಾರರ ಹರಾಜು ದುಬೈನಲ್ಲಿ ನಡೆಯುತ್ತಿದ್ದು, ಒಟ್ಟು 333 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. 10 ತಂಡಗಳಲ್ಲಿ 77 ಸ್ಥಾನ ಮಾತ್ರ ಖಾಲಿ ಉಳಿದಿದೆ. ಈ ಹರಾಜಿನಲ್ಲಿ(IPL Auction 2024 Live) ಯಾವ ಆಟಗಾರ ಯಾವ ತಂಡಕ್ಕೆ ಹಾಗೂ ಎಷ್ಟು ಮೊತ್ತಕ್ಕೆ ಸೇಲ್ ಆಗಬಹುದೆಂಬುದು ಸದ್ಯದ ಕುತೂಹಲ. ಹರಾಜಿನ ಎಲ್ಲ ಲೈವ್ ಮಾಹಿತಿಗಳು ಇಲ್ಲಿ ಲಭ್ಯ.
ಹಿಂದಿನ ಕೆಲ ಆವೃತ್ತಿಯಲ್ಲಿ ಬಹುಬೇಡಿಕೆಯ ಆಟಗಾರನಾಗಿದ್ದ ಅಫಘಾನಿಸ್ತಾನ ಸ್ಪಿನ್ನ್ ಆಲ್ರೌಂಡರ್ ಮುಜೀಬ್ ಉರ್ ರೆಹಮಾನ್ ಅವರು ಈ ಬಾರಿಯ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ನಂ.1 ಬೌಲರ್ ಕೂಡ ಆಗಿದ್ದರು.
ಶ್ರೀಲಂಕಾದ ಯುವ ಬೌಲರ್ ದಿಲ್ಶನ್ ಮಧುಶಂಕ ಅವರನ್ನು ನಿರೀಕ್ಷೆ ಮಾಡಿದಂತೆ ಮುಂಬೈ ಇಂಡಿಯನ್ಸ್ ತಂಡ ಖರೀದಿ ಮಾಡಿದೆ. 50 ಲಕ್ಷ ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಅವರು ಬರೋಬ್ಬರಿ 4.60 ಕೋಟಿ ಮೊತ್ತ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಇವರ ಚೊಚ್ಚಲ ಐಪಿಎಲ್ ಟೂರ್ನಿಯಾಗಿದೆ. ಇತ್ತೀಚೆಗೆ ಮುಕ್ತಾಯ ಕಂಡಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದರು.
ಕಮಿನ್ಸ್ ದಾಖಲೆ ಪತನ
ಆರಂಭದಲ್ಲಿ 20.50 ಕೋಟಿಗೆ ಸೇಲ್ ಆಗುವ ಮೂಲಕ ಐಪಿಎಲ್ನಲ್ಲಿ ದಾಖಲೆ ಬರೆದಿದ್ದ ಕಮಿನ್ಸ್ ಅವರ ದಾಖಲೆಯನ್ನು ಕ್ಷಣ ಮಾತ್ರದಲ್ಲೇ ತನ್ನದೇ ದೇಶದ ಬೌಲರ್ ಮಿಚೆಲ್ ಸ್ಟಾರ್ಕ್ ಅವರು ಬರೋಬ್ಬರಿ 24.75 ಕೋಟಿ ಪಡೆದು ಮುರಿದರು. ಇದು ಸದ್ಯ ಐಪಿಎಲ್ ಇತಿಹಾಸದ ಸಾರ್ವಕಾಲಿಕ ದಾಖಲೆಯಾಗಿದೆ.
MITCHELL STARC SOLD KKR AT 24.75CR…!!! 🔥🔥🔥 pic.twitter.com/jZN6ngHBVU
— Mufaddal Vohra (@mufaddal_vohra) December 19, 2023
ಕೆಲ ಕಾಲ ಐಪಿಎಲ್ ಆಡಿ ಆ ಬಳಿಕ ಗಾಯದ ಸಮಸ್ಯೆ ಮತ್ತು ಕೊರೊನಾ ಜೈವಿಕ ಸುರಕ್ಷತಾ ವಲಯದಲ್ಲಿ ಆಡಲು ನಿರಾಕರಿಸಿ ಐಪಿಎಲ್ನಿಂದ ದೂರ ಉಳಿದಿದ್ದ ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾಕ್ ಅವರು ಈ ಬಾರಿಯ ಆಟಗಾರರ ಹಾರಾಜಿಗೆ ಹೆಸರು ಸಲ್ಲಿಸಿದ್ದರು. ಅವರ ಖರೀದಿಗೆ ಎಲ್ಲ ಫ್ರಾಂಚೈಸಿಗಳು ಜಿದ್ದಾಜಿದ್ದಿನ ಬಿಡ್ ಮಾಡಿದವು. ಆದರೆ ಅಂತಿಮವಾಗಿ ದಾಖಲೆಯ 24.75 ಕೋಟಿಗೆ ಬಿಡ್ ಸಲ್ಲಿಸಿ ಕೆಕೆಆರ್ ತಂಡ ಖರೀದಿ ಮಾಡಿದೆ. ಮಿಚೆಲ್ ಸ್ಟಾರ್ಕ್ 2015ರಲ್ಲಿ ಕೊನೆಯ ಬಾರಿ ಐಪಿಎಲ್ ಟೂರ್ನಿ ಆಡಿದ್ದರು. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ.
32 ಐಪಿಎಲ್ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ 25 ವರ್ಷದ ಯುವ ವೇಗಿ ಶಿವಂ ಮಾವಿ ಅವರು 6.40 ಕೋಟಿ ಮೊತ್ತಕ್ಕೆ ಹರಾಜಾಗಿದ್ದಾರೆ. ಅವರನ್ನು ಕನ್ನಡಿಗ ಕೆ.ಎಲ್ ರಾಹುಲ್ ಸಾರಥ್ಯದ ಲಕ್ನೋ ಸೂಪರ್ಜೈಂಟ್ಸ್ ತಂಡ ಖರೀದಿ ಮಾಡಿದೆ. ಮಾವಿ ಐಪಿಎಲ್ನಲ್ಲಿ 30 ವಿಕೆಟ್ ಉರುಳಿಸಿದ್ದಾರೆ.