Site icon Vistara News

IPL Auction 2024: ಬೌಲಿಂಗ್‌ ಆಯ್ಕೆಯೇ ಆರ್‌ಸಿಬಿ ಆದ್ಯತೆ; ಮಾಹಿತಿ ನೀಡಿದ ನಿರ್ದೇಶಕ

RCB

ದುಬೈ: ಇನ್ನೇನು ಕೆಲವೇ ಗಂಟೆಯಲ್ಲಿ ಬಹುನಿರೀಕ್ಷಿತ 2024ರ ಆಟಗಾರ ಮಿನಿ ಹರಾಜು ಪ್ರಕ್ರಿಯೆ(IPL Auction 2024) ನಡೆಯಲಿದೆ. ಇದಕ್ಕೂ ಮುನ್ನ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(royal challengers bangalore) ಫ್ರಾಂಚೈಸಿ ಬೌಲರ್​ಗಳ ಖರೀದಿಗೆ ನಮ್ಮ ಮೊದಲ ಆದ್ಯತೆ ಎಂದು ಹೇಳಿದೆ.

“ತಂಡದಲ್ಲಿರುವ ವೇಗಿ ಮೊಹಮ್ಮದ್ ಸಿರಾಜ್ ಅವರಿಗೆ ಬೆಂಬಲವಾಗಿ ಹೆಚ್ಚಿನ ಬೌಲಿಂಗ್ ಆಯ್ಕೆ ಮಾಡುವುದು ನಮ್ಮ ಗುರಿ” ಹೀಗಾಗಿ ಬೌಲರ್​ಗಳ ಮೇಲೆ ನಾವು ಕಣ್ಣಿಟ್ಟಿರುವುದಾಗಿ ಆರ್​ಸಿಬಿಯ ಕ್ರಿಕೆಟ್‌ ನಿರ್ದೇಶಕ ಮೊ ಬೊಬಾಟ್ ತಿಳಿಸಿದ್ದಾರೆ.

ಆರ್‌ಸಿಬಿ ತಂಡದಲ್ಲಿ ವಿರಾಟ್‌ ಕೊಹ್ಲಿ, ನಾಯಕ ಫಾಫ್​​ ಡುಪ್ಲೆಸಿಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಮೊಹಮ್ಮದ್​ ಸಿರಾಜ್ ಉಳಿಸಿಕೊಂಡ ಪ್ರಮುಖ ಆಟಗಾರರು. 11 ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದೆ. ದುಬಾರಿಯಾಗಿದ್ದ ಹರ್ಷಲ್ ಪಟೇಲ್, ಶ್ರೀಲಂಕಾದ ಲೆಗ್‌ ಸ್ಪಿನ್ನರ್‌ ವನಿಂದು ಹಸರಂಗ ಮತ್ತು ಆಸ್ಟ್ರೇಲಿಯಾದ ವೇಗಿ ಜೋಶ್‌ ಹ್ಯಾಜಲ್‌ವುಡ್‌ ಅವರನ್ನು ಬಿಟ್ಟಿರುವುದರಿಂದ ಬೌಲಿಂಗ್ ವಿಭಾಗ ಬಡವಾಗಿದೆ. ಕ್ಯಾಮರೂನ್​ ಗ್ರೀನ್​ ಅವರನ್ನು ಟ್ರೇಡ್​ ಮೂಲಕ ಖರೀದಿಸಿದ್ದರೂ ಅವರು ಪೂರ್ಣ ಪ್ರಮಾಣದ ಬೌಲರ್​ ಅಲ್ಲ. ಹೀಗಾಗಿ ಸಿರಾಜ್​ಗೆ ಉತ್ತಮ ಸಾಥ್​ ನೀಡಬಲ್ಲ ಬೌಲರ್ ಖರೀದಿ ಮಾಡಲು ಫ್ರಾಂಚೈಸಿ ಮುಂದಾಗಿದೆ.

ಇದನ್ನೂ ಓದಿ Mallika Sagar: ಐಪಿಎಲ್‌ನ ಮೊದಲ ಮಹಿಳಾ ಹರಾಜುಗಾರ್ತಿ ಮಲ್ಲಿಕಾ ಸಾಗರ್ ಯಾರು?

‘ಸಿರಾಜ್ ನಮ್ಮ ತಂಡದ ಪ್ರಮುಖ ಬೌಲರ್​ ಆಗಿದ್ದಾರೆ. ತಂಡದ ಮುನ್ನಡೆಗೆ ಅವರಿಗೆ ಬೆಂಬಲವಾಗಿ, ಹೊರದೇಶದ ವೇಗದ ಬೌಲರ್ ಸೇರಿದಂತೆ ಹೆಚ್ಚಿನ ಬೌಲರ್‌ಗಳ ಆಯ್ಕೆಯಾಗಬೇಕಿದೆ’ ಎಂದು ಬೊಬಾಟ್‌ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಸ್ಟಾರ್ಕ್​-ಕಮಿನ್ಸ್​ ಮೇಲೆ ಕಣ್ಣು

ಆಸ್ಟ್ರೇಲಿಯಾದ ಆಟಗಾರರಾದ ಮಿಚೆಲ್​ ಸ್ಟಾರ್ಕ್​ ಮತ್ತು ಪ್ಯಾಟ್​ ಕಮಿನ್ಸ್​ ಇಬ್ಬರಲ್ಲಿ ಒಬ್ಬರನ್ನು ಖರೀದಿ ಮಾಡಲು ಆರ್​ಸಿಬಿ ಪಣ ತೊಟ್ಟಿದೆ. ಮಿಚೆಲ್​ ಸ್ಟಾರ್ಕ್​ ಅವರು ಈ ಹಿಂದ ಆರ್​ಸಿಬಿ ಪರ ಕೆಲ ವರ್ಷ ಆಡಿದ್ದರು. ಹೀಗಾಗಿ ಅವರನ್ನು ಮತ್ತೆ ತಂಡಕ್ಕೆ ಸೆಳೆಯುವುದು ಆರ್​ಸಿಬಿ ಪ್ಲ್ಯಾನ್​. ವಿಶ್ವ ಟೆಸ್ಟ್​ ಮತ್ತು ಏಕದಿನ ವಿಶ್ವಕಪ್ ವಿಜೇತ ನಾಯಕ ಪ್ಯಾಟ್​ ಕಮಿನ್ಸ್​ ಅವರ ಮೇಲೆಯೂ ಆರ್​ಸಿಬಿ ಕಣ್ಣಿಟ್ಟಿದೆ. ಬ್ಯಾಟರ್​ಗಳ ಖರೀದಿಗೆ ಆರ್​ಸಿಬಿ ಈ ಬಾರಿ ಮಣೆ ಹಾಕುದಿಲ್ಲ ಎನ್ನುವುದಂತು ನಿಜ.

ಕೆಲ ಕಾಲ ಐಪಿಎಲ್​ ಆಡಿ ಆ ಬಳಿಕ ಗಾಯದ ಸಮಸ್ಯೆ ಮತ್ತು ಕೊರೊನಾ ಜೈವಿಕ ಸುರಕ್ಷತಾ ವಲಯದಲ್ಲಿ ಆಡಲು ನಿರಾಕರಿಸಿ ಐಪಿಎಲ್​ನಿಂದ ದೂರ ಉಳಿದಿದ್ದ ಆಸ್ಟ್ರೇಲಿಯಾದ ಸ್ಟಾರ್​ ವೇಗಿ ಮಿಚೆಲ್​ ಸ್ಟಾಕ್​ ಅವರು ಈ ಬಾರಿಯ ಆಟಗಾರರ ಹಾರಜಿಗೆ ಹೆಸರು ನೊಂದಾಯಿಸಿದ್ದಾರೆ. ಎಂಟು ವರ್ಷಗಳ ಬಳಿಕ ಮತ್ತೆ ಐಪಿಎಲ್‌ ಟೂರ್ನಿಗೆ ಮರಳುವ ಕಾತರದಲ್ಲಿದ್ದಾರೆ. 2015ರಲ್ಲಿ ಕೊನೆಯ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಮಿಚೆಲ್‌ ಸ್ಟಾರ್ಕ್ ಆಡಿದ್ದರು. ಇವರಿಗೂ ಈ ಬಾರಿಯ ಹರಾಜಿನಲ್ಲಿ ದೊಡ್ಡ ಮೊತ್ತ ಸಿಗುವ ನಿರೀಕ್ಷೆ ಇದೆ.

Exit mobile version