Site icon Vistara News

IPL 2024 Auction: ಹರಾಜಿನಲ್ಲಿ ಕಾಣಿಸಿಕೊಂಡ ಹಿರಿಯ-ಕಿರಿಯ ಆಟಗಾರ ಯಾರು?

Allah Ghazanfar

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್(IPL 2024 Auction)​ ಟೂರ್ನಿಯ ಆಗಾರರ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ. ಈಗಾಗಲೇ ಆಟಗಾರರ ಪಟ್ಟಿಯನ್ನು ಕೂಡ ಮಂಡಳಿ ಅಂತಿಮಗೊಳಿಸಿ ಪ್ರಕಟಿಸಿದೆ. ಇದೀಗ ಹರಾಜಿನಲ್ಲಿ ಇರುವ ಅತಿ ಕಿರಿಯ ಮತ್ತು ಹಿರಿಯ ಆಟಗಾರ ಯಾರೆಂದು ಅಭಿಮಾನಿಗಳಿಗೆ ಕೂತೂಹಲ ಕೆರಳಿದೆ. ಇದಕ್ಕೆ ಉತ್ತರ ಇಲ್ಲಿದೆ.

ಇದೇ ಮೊದಲ ಬಾರಿಗೆ ವಿದೇಶದಲ್ಲಿ ನಡೆಯುವ ಆಟಗಾರರ ಮಿನಿ ಹರಾಜಿನಲ್ಲಿ ಒಟ್ಟು 333 ಮಂದಿ ಆಟಗಾರರು ಹರಾಜಿನ ಭಾಗವಾಗಲಿದ್ದಾರೆ. ಇದರಲ್ಲಿ 214 ಭಾರತೀಯರು ಮತ್ತು 119 ಮಂದಿ ವಿದೇಶಿ ಆಟಗಾರರು ಸೇರಿದ್ದಾರೆ. ಅಸೋಸಿಯೇಟ್ ದೇಶಗಳ ಇಬ್ಬರು ಆಟಗಾರರು ಅವಕಾಶ ಪಡೆದಿದ್ದಾರೆ.

ಒಟ್ಟು 333 ಆಟಗಾರರ ಪೈಕಿ ಕೇವಲ 23 ಆಟಗಾರರಿಗೆ ಮಾತ್ರ ಎರಡು ಕೋಟಿ ರೂ. ಮೂಲಬೆಲೆ ನಿಗದಿ ಮಾಡಲಾಗಿದೆ. ಆದರೆ ಇದರಲ್ಲಿ ಕೇವಲ ಮೂರು ಮಂದಿ ಮಾತ್ರ ಭಾರತೀಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಅವರೆಂದರೆ, ಆರ್​ಸಿಬಿಯಿಂದ ಬಿಡುಗಡೆಯಾದ ಹರ್ಷಲ್ ಪಟೇಲ್, ಕೆಕೆಆರ್​ನಿಂದ ಬಿಡುಗಡೆಯಾದ ಶಾರ್ದೂಲ್ ಠಾಕೂರ್ ಮತ್ತು ಉಮೇಶ್ ಯಾದವ್. ಕಳೆದ ಬಾರಿ ಹರಾಜಾಗದ ಆಸೀಸ್​ನ ಸ್ಟೀವನ್​ ಸ್ಮಿತ್ ಅವರು ಈ ಬಾರಿ 2 ಕೋಟಿ ರೂ. ಮೂಲಬೆಲೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಘಜನ್ಫರ್ ಕಿರಿಯ ಆಟಗಾರ

ಅಫಘಾನಿಸ್ತಾನದ 16 ವರ್ಷದ ಸ್ಪಿನ್ನರ್​ ಅಲ್ಲಾ ಮೊಹಮ್ಮದ್ ಘಜನ್ಫರ್ ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಕಾಣಿಸಿಕೊಂಡ ಅತ್ಯಂತ ಕಿರಿಯ ಆಟಗಾರ. 15 ಜುಲೈ 2007 ರಂದು ಜನಿಸಿದ ಘಜನ್ಫರ್ ಇದುವರೆಗಿನ ತಮ್ಮ ಕ್ರಿಕೆಟ್​ ವೃತ್ತಿಜೀವನದಲ್ಲಿ ಕೇವಲ 4 ಲಿಸ್ಟ್ ‘ಎ’ ಮತ್ತು 3 ಟಿ20 ಪಂದ್ಯಗಳನ್ನು ಆಡಿದ್ದಾನೆ. ಕಿರಿಯ ವಯಸ್ಸಿನಲ್ಲಿಯೇ ಅವರು ಮಿಸ್ ಐನಾಕ್ ನೈಟ್ಸ್ ಮತ್ತು ಟೀಮ್ ಅಬುಧಾಬಿಗಾಗಿ ಆಡಿದ ಕೀರ್ತಿ ಹೊಂದಿದ್ದಾರೆ. ಅಫ್ಘಾನಿಸ್ತಾನದ ಪರ ಜೂನಿಯರ್​ ಏಕದಿನ ಟೂರ್ನಿಯಲ್ಲೂ ಆಡಿದ್ದಾನೆ. ಇದೇ ವರ್ಷ ನಡೆದಿದ್ದ ವಜೀರ್ ಮೊಹಮ್ಮದ್ ಅಕ್ಬರ್ ಖಾನ್ ಪ್ರಾಂತೀಯ ಗ್ರೇಡ್ 1 ಏಕದಿನ ಪಂದ್ಯಾವಳಿಯಲ್ಲಿ ಕಾಬೂಲ್ ಪ್ರಾಂತ್ಯದ ಪರವಾಗಿ ಕಣಕ್ಕಿಳಿದಿದ್ದ. ಲಿಸ್ಟ್​ ಎ ಟೂರ್ನಿಯಲ್ಲಿ ಒಟ್ಟು 4 ಮತ್ತು ಟಿ20 ಕ್ರಿಕೆಟ್​ನಲ್ಲಿ 5 ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾನೆ.

ಇದನ್ನೂ ಓದಿ IPL 2024: ಕನಿಷ್ಠ 15 ಕೋಟಿ ರೂ. ಮೊತ್ತಕ್ಕೆ ಸೇಲ್ ಆಗಬಲ್ಲ 5 ಪ್ರಮುಖ ಆಟಗಾರರು ಇವರು…

ನಬಿ ಅತ್ಯಂತ ಹಿರಿಯ ಆಟಗಾರ

ಅಚ್ಚರಿ ಎಂದರೆ ಈ ಬಾರಿಯ ಹರಾಜಿನಲ್ಲಿ ಕಾಣಿಸಿಕೊಂಡ ಹಿರಿಯ ಮತ್ತು ಕಿರಿಯ ಆಟಗಾರರು ಅಫಘಾನಿಸ್ತಾನ ತಂಡದವರೇ ಆಗಿದ್ದಾರೆ. ಹಿರಿಯ ಆಟಗಾರನೆಂದರೆ ಮೊಹಮ್ಮದ್​ ನಬಿ. ಅವರಿಗೆ 38 ವರ್ಷ. ಅನುಭವಿ ಆಲ್​ರೌಂಡರ್​ ಆಗಿರುವ ನಬಿಗೆ ಈ ಬಾರಿಯ ಹರಾಜಿನಲ್ಲಿ 1.5 ಕೋಟಿ ಮೂಲಬೆಲೆ ನಿಗದಿ ಮಾಡಲಾಗಿದೆ. ಕೆಕೆಆರ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ಪರ ಆಡಿದ ಅನುಭವ ಹೊಂದಿದ್ದಾರೆ. ಒಟ್ಟಾರೆಯಾಗಿ ಅವರು ಇದುವರೆಗೆ 17 ಐಪಿಎಲ್​ ಪಂದ್ಯ ಆಡಿ 180 ರನ್​ ಮತ್ತು 13 ವಿಕೆಟ್ ಕಡೆವಿದ್ದಾರೆ. ಇದರಲ್ಲಿ 11 ರನ್​ಗೆ 4 ವಿಕೆಟ್​ ಉರುಳಿಸಿದ್ದು ಅವರ ವೈಯಕ್ತಿಕ ಸಾಧನೆಯಾಗಿದೆ.

Exit mobile version