ಮುಂಬಯಿ: ಮುಂದಿನ 16ನೇ ಆವೃತ್ತಿಯ ಐಪಿಎಲ್(IPL )ಗೆ ಈಗಾಗಲೇ ಸಿದ್ಧತೆಗಳು ಆರಂಭವಾಗಿದೆ. ಅದರಂತೆ ಡಿಸೆಂಬರ್ 16ರಂದು ಆಟಗಾರರ ಹರಾಜು ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಇದಕ್ಕೂ ಮುನ್ನವೇ ಇದೀಗ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬಾಯ್ಕಾಟ್ ಐಪಿಎಲ್ ಎಂಬ ಅಭಿಯಾನವೊಂದನ್ನು ಆರಂಭಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಗೆ ಬಿಸಿಸಿಐ ಶಾರ್ಟ್ ಲಿಸ್ಟ್ ಮಾಡಿದ್ದು, ಟರ್ಕಿಯ ಇಸ್ತಾಂಬುಲ್ ಹಾಗೂ ಬೆಂಗಳೂರನ್ನು ಫೈನಲ್ ಮಾಡಿದೆ. ಅದರಲ್ಲೂ ಮೊದಲ ಆಯ್ಕೆಯಾಗಿ ಇಸ್ತಾಂಬುಲ್ ಆಯ್ಕೆ ಆಡಿದ್ದು ಭಾರತೀಯ ಐಪಿಎಲ್ ಅಭಿಮಾನಿಗಳನ್ನು ಕೆರಳಿಸುವಂತೆ ಮಾಡಿದೆ. ಅದರಂತೆ ಇಂಡಿಯನ್ ಪ್ರೀಮಿಯರ್ ಲೀಗ್ ಕೌನ್ಸಿಲ್ ಮತ್ತು ಬಿಸಿಸಿಐ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಭಾರತದ ಯಾವುದೇ ನಗರದಲ್ಲಿ ಬೇಕಾದರೂ ಹರಾಜು ನಡೆಸಬಹುದಲ್ಲವೇ? ಟರ್ಕಿ ಏಕೆ ಎಂದು ನೆಟ್ಟಿಗರು ಬಿಸಿಸಿಐ ನಿರ್ಧಾರ ಪ್ರಶ್ನಿಸಿದ್ದಾರೆ. ದೇಶದ ಹಣವು ದೇಶದಲ್ಲಿಯೇ ಬಳಕೆಯಾಗಬೇಕೆ ಹೊರತು ಹಿಂದೂ ವಿರೋಧಿ ರಾಷ್ಟ್ರ ಟರ್ಕಿಯಲ್ಲಲ್ಲ. ದೇಶ..ದೇಶ ಎಂದು ಮಾತನಾಡುವ ಕೆಲವರು ಇದೀಗ ಐಪಿಎಲ್ ಹರಾಜು ಟರ್ಕಿಯಲ್ಲಿ ನಡೆಸಲು ಮುಂದಾಗಿರುವುದು ನಾಚಿಕೆಗೇಡಿನ ವಿಚಾರ ಎಂದು ಕಿಡಿ ಕಾರಿದ್ದಾರೆ.
ಟರ್ಕಿ ಹಿಂದೂ ವಿರೋಧಿ ದೇಶವಾಗಿದ್ದು, ನಮ್ಮ ದೇಶದ ಜತೆಗೆ ಉತ್ತಮ ಸಂಬಂಧವನ್ನ ಹೊಂದಿಲ್ಲ. ಟರ್ಕಿಯಲ್ಲಿ ನೀವು ಆಟಗಾರರ ಹರಾಜು ನಡೆಸಿದ್ದೇ ಆದಲ್ಲಿ ನಾವು ಐಪಿಎಲ್ 2023ರ ಸೀಸನ್ ಬಹಿಷ್ಕರಿಸುವಂತೆ ಪ್ರಚೋದಿಸುತ್ತೇವೆ ಎಂದು ಅನೇಕರು ಎಚ್ಚರಿಕೆ ನೀಡಿದ್ದಾರೆ. ಇನ್ನೂ ಕೆಲವರು ಐಪಿಎಲ್ ಎಂಬ ಹೆಸೆರನ್ನು ಟಿಪಿಎಲ್ ಎಂದು ಬದಲಾಯಿಸುವ ಯೋಜನೆಯೇ ಎಂದು ಪ್ರಶ್ನಿಸಿದ್ದಾರೆ.
ಸಿನಿಮಾ ವಿಚಾರದಲ್ಲಿ ಕೆಲ ಕೋಮುಸೂಕ್ಷ್ಮ ವಿಚಾರದ ಕುರಿತು ಮಾತನಾಡುವ ಕೆಲವರು ಇದೀಗ ಮುಸ್ಲಿಂ ರಾಷ್ಟ್ರದಲ್ಲಿ ಐಪಿಎಲ್ ಆಟಗಾರರ ಹರಾಜು ನಡೆಸಲು ಮುಂದಾಗಿರುವ ಹಿಂದಿನ ವಿಚಾರ ಅರ್ಥವಾಗುತ್ತಿಲ್ಲ ಎಂದು ಕೆಲ ನೆಟ್ಟಿಗರು ಪರೋಕ್ಷವಾಗಿ ಕೇಂದ್ರ ಸರಕಾರದ ವಿರುದ್ಧ ಕುಟುಕಿದ್ದಾರೆ. ಆದರೆ ಐಪಿಎಲ್ ಹರಾಜು ಪ್ರಕ್ರಿಯೆ ಕುರಿತು ಯಾವುದೇ ಅಂತಿಮ ತೀರ್ಮಾನ ಹೊರಬಿದ್ದಿಲ್ಲ ಹಾಗೂ ಇದು ಕೇವಲ ವರದಿಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಬಿಸಿಸಿಐ ಯಾವ ನಿರ್ಧಾರ ಕೈಗೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ | T20 World Cup | ಟೀಮ್ ಇಂಡಿಯಾದಲ್ಲಿ ಪಾಕಿಸ್ತಾನ ತಂಡದ ಬೌಲರ್; ಕೊಹ್ಲಿ, ರೋಹಿತ್ ಮೆಚ್ಚುಗೆ