Site icon Vistara News

IPL | ಮುಂದಿನ ದಿನಗಳಲ್ಲಿ ಐಪಿಎಲ್‌ ವಿಶ್ವದ ನಂ.1 ಕ್ರೀಡಾ ಲೀಗ್‌ ಆಗಲಿದೆ; ಅರುಣ್‌ ಧುಮಾಲ್‌ ವಿಶ್ವಾಸ

IPL 2023

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಮುಂದಿನ ದಿನಗಳಲ್ಲಿ ವಿಶ್ವದ ಅತ್ಯಂತ ದೊಡ್ಡ ಕ್ರೀಡಾ ಲೀಗ್ ಆಗಿ ಹೊರಹೊಮ್ಮಲಿದೆ ಎಂದು ಲೀಗ್‌ನ ನೂತನ ಅಧ್ಯಕ್ಷ ಅರುಣ್ ಧುಮಾಲ್ ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಬಿಸಿಸಿಐ ವಿದೇಶಿ ಲೀಗ್‌ಗಳಲ್ಲಿ ಭಾರತೀಯ ಆಟಗಾರರಿಗೆ ಆಡಲು ಅನುಮತಿ ನೀಡದಿರುವುದಕ್ಕೆ ಕಾರಣವನ್ನೂ ತಿಳಿಸಿದ್ದಾರೆ.

ಮಂಗಳವಾರ ಪಿಟಿಐ ಸಂದರ್ಶನದಲ್ಲಿ ಮಾತನಾಡಿದ ಅರುಣ್ ಧುಮಾಲ್, ನಾವು ಐಪಿಎಲ್ ಕೂಟದಲ್ಲಿ ಹೊಸ ಪ್ರಯೋಗವನ್ನು ನಡೆಸಲು ಚಿಂತಿಸುತ್ತಿದ್ದು ಈ ಮೂಲಕ ಐಪಿಎಲ್‌ ಕೂಟವನ್ನು ವಿಶ್ವದ ನಂ.೧ ಕ್ರೀಡಾ ಲೀಗ್‌ ಮಾಡುವ ಗುರಿ ಹೊಂದಿದ್ದೇವೆ ಎಂದಿದ್ದಾರೆ.

“ಲೀಗ್‌ನ ವೇಳಾಪಟ್ಟಿಯನ್ನು ಮುಂಚಿತವಾಗಿಯೇ ಪ್ರಕಟಿಸಲು ಸಾಧ್ಯವಾದರೆ, ವಿಶ್ವಾದ್ಯಂತದ ಅಭಿಮಾನಿಗಳು ಇದಕ್ಕೆ ಅನುಗುಣವಾಗಿ ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುತ್ತಾರೆ. ಇದರಿಂದ ಅಭಿಮಾನಿಗಳು ವಿನಿಯೋಗಿಸುವ ಹಣದಲ್ಲೂ ಉಳಿತಾಯ ಮಾಡಬಹುದು ” ಎಂದು ಧುಮಾಲ್ ಹೇಳಿದರು.

ಹತ್ತಕ್ಕಿಂತ ಅಧಿಕ ತಂಡವಿಲ್ಲ

ಐಪಿಎಲ್‌ನಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿರುವ ಕಾರಣ ತಂಡಗಳ ಸಂಖ್ಯೆ ಹೆಚ್ಚಾಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಧುಮಾಲ್‌. ಇಲ್ಲ ಏನೇ ಹೊಸತನ ಪರಿಚಯಿಸಿದರೂ ಮುಂದಿನ ದಿನಗಳಲ್ಲಿ ಒಂದೊಮ್ಮೆ ತಂಡಗಳ ಸಂಖ್ಯೆ 10ಕ್ಕಿಂತ ಕಡಿಮೆಯಾದರೂ ಅಚ್ಚರಿ ಪಡಬೇಕಿಲ್ಲ. ಆದರೆ ಹೆಚ್ಚಿಸಲು ಮಾತ್ರ ಸಾಧ್ಯವೇ ಇಲ್ಲ ಎಂದಿದ್ದಾರೆ. ಈಗಾಗಲೇ ೧೦ ತಂಡಗಳಿಂದ ಟೂರ್ನಿ ಆಯೋಜನೆ ಕಷ್ಟವಾಗಿದೆ. ಇನ್ನೂ ತಂಡಗಳನ್ನು ಹೆಚ್ಚಿಸಿದರೆ ಬಹುಶಃ ಇದು ದೊಡ್ಡ ಇವೆಂಟ್ ಆಗಲಿದೆ ಆದ್ದರಿಂದ ತಂಡಗಳ ಸಂಖ್ಯೆ ೧೦ಕ್ಕೆ ಸೀಮಿತಗೊಳಿಸಿಲಾಗಿದೆ ಎಂದು ಧುಮಾಲ್‌ ಹೇಳಿದರು.

ಆಟಗಾರರ ಸುರಕ್ಷೆಗೆ ಈ ಕ್ರಮ

ಭಾರತೀಯ ಆಟಗಾರರಿಗೆ ವಿದೇಶಿ ಲೀಗ್‌ಗಳಲ್ಲಿ ಏಕೆ ಆಡುವುದಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಧುಮಾಲ್‌, ನಮ್ಮ ಕೇಂದ್ರ ಗುತ್ತಿಗೆ ಪಡೆದಿರುವ ಆಟಗಾರರು ಯಾವುದೇ ಲೀಗ್‌ಗಳಲ್ಲಿ ಆಡದಿರುವುದು ಬಿಸಿಸಿಐ ನಿರ್ಧಾರವಾಗಿದೆ. ಏಕೆಂದರೆ ವರ್ಷದಲ್ಲಿ ಸಾಕಷ್ಟು ಕ್ರಿಕೆಟ್‌ ಆಡಲಾಗುತ್ತದೆ. ಇದನ್ನು ಮನದಲ್ಲಿಟ್ಟುಕೊಂಡು ಆಟಗಾರರ ಸುರಕ್ಷೆಯನ್ನು ಬಯಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕೆ ನಾವು ಬದ್ಧರಾಗಿದ್ದೇವೆ. ಭಾರತದ ಪರ ಆಡಬೇಕೆಂಬ ಆಸೆ ಹೊಂದಿರುವ ಗುತ್ತಿಗೆ ರಹಿತ ಆಟಗಾರರಿಗೂ ಈ ನಿಯಮ ಅನ್ವಯಿಸುತ್ತದೆ ಎಂದು ಧುಮಾಲ್ ತಿಳಿಸಿದರು.

ಇದನ್ನೂ ಓದಿ | T20 World Cup | ಅಂಪೈರ್‌ಗಳ ಪಟ್ಟಿ ಕಂಡು ಟೀಮ್‌ ಇಂಡಿಯಾ ಅಭಿಮಾನಿಗಳಲ್ಲಿ ಸಂತಸ; ಕಾರಣ ಏನು?

Exit mobile version