ಗ್ವಾಲಿಯರ್: ಇಲ್ಲಿ ನಡೆಯುತ್ತಿರುವ ಇರಾನಿ ಕಪ್‌ನಲ್ಲಿ (Irani Cup) ಶೇಷ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಯುವ ಸ್ಫೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi Jaiswal )ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.
21 ವರ್ಷದ ಎಡಗೈ ಬ್ಯಾಟರ್ ಜೈಸ್ವಾಲ್ ಮಧ್ಯಪ್ರದೇಶ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ ದ್ವಿಶತಕ ಸಿಡಿಸಿ ಮಿಂಚಿದರೆ, ದ್ವಿತೀಯ ಇನಿಂಗ್ಸ್ನಲ್ಲಿ ಶತಕ ಸಿಡಿಸಿ ಮರೆದಾಡಿದರು. ಈ ಸಾಧನೆಯೊಂದಿಗೆ ಅವರು ಇರಾನಿ ಕಪ್ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು. ಜತೆಗೆ ಇರಾನಿ ಕಪ್‌ನಲ್ಲಿ 300ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಭಾರತೀಯ ಕೂಡ ಆಗಿದ್ದಾರೆ.
ಇದನ್ನೂ ಓದಿ Indian Super League: ವಿವಾದಾತ್ಮಕ ಗೋಲು; ಮೈದಾನ ತೊರೆದ ಕೇರಳ ತಂಡ
ಈ ಮೊದಲು ಈ ದಾಖಲೆ ಶಿಖರ್ ಧವನ್ ಹೆಸರಿನಲ್ಲಿತ್ತು. ಇದೀಗ ಜೈಸ್ವಾಲ್ ಅವರು ಧವನ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಜೈಸ್ವಾಲ್ ಮೊದಲ ಇನಿಂಗ್ಸ್ನಲ್ಲಿ 213 ರನ್ ಗಳಿಸಿದ್ದದರೆ, ಎರಡನೇ ಇನಿಂಗ್ಸ್ನಲ್ಲಿ 144 ರನ್ ಬಾರಿಸಿದರು. ಸದ್ಯ ಇವರ ಬ್ಯಾಟಿಂಗ್ ಪರಾಕ್ರಮದಿಂದ ಶೇಷ ಭಾರತ ಬೃಹತ್ ಮೊತ್ತ ಪೇರಿಸಿದೆ.