Site icon Vistara News

Sara Khadem: ಹಿಜಾಬ್​ ಧರಿಸದೆ ಚೆಸ್​ ಆಡಿದ್ದ ಇರಾನ್​ ಆಟಗಾರ್ತಿಗೆ ಸ್ಪೇನ್​ ದೇಶದ ಪೌರತ್ವ

Iranian chess player Sara Khadem

ಟೆಹ್ರಾನ್: ಹಿಜಾಬ್ ಇಲ್ಲದೆ ಚೆಸ್ ಟೂರ್ನಿಯಲ್ಲಿ ಸ್ಪರ್ಧಿಸಿದ್ದ ಇರಾನ್ ಆಟಗಾರ್ತಿ ಸಾರಾ ಖಡೆಮ್(Sara Khadem) ಅವರಿಗೆ ಸ್ಪೇನ್​ ತನ್ನ ದೇಶದ ಪೌರತ್ವ (Spain Citizenship) ನೀಡಲು ನಿರ್ಧರಿಸಿದೆ. ಈಗಾಗಲೇ ಸ್ಪೇನ್‌ ಸರ್ಕಾರ ಕ್ಯಾಬಿನೆಟ್‌ನಲ್ಲಿ ಅನುಮೋದನೆ ನೀಡಿದ್ದು ಶೀಘ್ರದಲ್ಲೇ ಚೆಸ್‌ ಆಟಗಾರ್ತಿಗೆ ತನ್ನ ದೇಶದ ಪೌರತ್ವ ನೀಡಲಿದೆ ಎಂದು ತಿಳಿದುಬಂದಿದೆ.

ಇದೇ ವರ್ಷ ಕಜಕಿಸ್ತಾನದ ಅಲ್ಮಾಟಿಯಲ್ಲಿ ನಡೆದ ಫೀಡೆ ವರ್ಲ್ಡ್ ರಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಸಾರಾ ಖಡೆಮ್ ಹಿಜಾಬ್ ಇಲ್ಲದೆ ಸ್ಪರ್ಧಿಸಿದ್ದರು. ಇದು ಈ ದೇಶದ ಮೂಲಭೂತವಾದಿ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ದೇಶಕ್ಕೆ ಮರಳದಂತೆ ಎಚ್ಚರಿಕೆ ನೀಡಿ ಬಂಧನಕ್ಕೆ ವಾರಂಟ್‌ ಜಾರಿಗೊಳಿಸಲಾಗಿತ್ತು.

ಇರಾನ್‌ನ ಕಟ್ಟುನಿಟ್ಟಾದ ಡ್ರೆಸ್ ಕೋಡ್‌ಗಳ ಅಡಿಯಲ್ಲಿ ಹೆಡ್ ಸ್ಕಾರ್ಫ್ ಕಡ್ಡಾಯವಾಗಿರುವ ಹಿಜಾಬ್ ಧರಿಸಿದೆ ಸ್ಪರ್ಧಿಸಿದ ಹಿನ್ನಲೆಯಲ್ಲಿ ಸಾರಾ ಖಡೆಮ್ ಅವರಿಗೆ ಮೂಲಭೂತವಾದಿಗಳು ಜೀವ ಬೆದರಿಕೆ ಹಾಕಿದ್ದರು. ಮಾತ್ರವಲ್ಲದೇ ಇರಾನ್‌ನಲ್ಲಿರುವ ಖಾಡೆಂ ಅವರ ಸಂಬಂಧಿಕರು ಮತ್ತು ಪೋಷಕರಿಗೂ ಬೆದರಿಕೆ ಹಾಕಿದ್ದರು.

ಇದಕ್ಕೂ ಮುನ್ನ ಇರಾನಿಯನ್ ಅಥ್ಲೀಟ್​,​​ ಪರ್ವತಾರೋಹಿ ಎಲ್ನಾಜ್ ರೆಕಾಬಿ ಅವರು ದಕ್ಷಿಣ ಕೊರಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ಹಿಜಾಬ್​ ಧರಿಸದೆ ಪಾಲ್ಗೊಂಡಿದ್ದಕ್ಕೆ ಇಲ್ಲಿನ ಮೂಲಭೂತವಾದಿಗಳು ಎಲ್ನಾಜ್ ಅವರ​ ಮನೆ ಧ್ವಂಸಗೊಳಿಸಿದ್ದರು. ಹೀಗಾಗಿ ಜೀವ ಭಯದಿಂದ ಅವರು ತಮ್ಮ ದೇಶವನ್ನು ಬಿಟ್ಟು ಸ್ಪೇನ್‌ಗೆ ತೆರಳಿ ಅಲ್ಲಿ ಆಶ್ರಯ ಪಡೆದಿದ್ದರು. ಇದೀಗ ಈ ಪ್ರಕರಣವನ್ನು ವಿಶೇಷ ಸಂದರ್ಭವಾಗಿ ಪರಿಗಣನೆಗೆ ತೆಗೆದುಕೊಂಡ ಸ್ಪೇನ್‌ ಸರ್ಕಾರ ಕ್ಯಾಬಿನೆಟ್‌ನಲ್ಲಿ ತಮ್ಮ ದೇಶದ ಪೌರತ್ವ ನೀಡಲು ಅನುಮೋದನೆ ನೀಡಿದೆ.

ಇದನ್ನೂ ಓದಿ Hijab for Hindu Girls: ಮಧ್ಯ ಪ್ರದೇಶದ ಖಾಸಗಿ ಶಾಲೆಯಲ್ಲಿ ಹಿಂದು ಹೆಣ್ಣುಮಕ್ಕಳಿಗೂ ಹಿಜಾಬ್‌!

ಕಳೆದ ವರ್ಷ ಮಹ್ಸಾ ಅಮಿನಿ ಎನ್ನುವ 22 ವರ್ಷದ ಯುವತಿ ಹಿಜಾಬ್ ಧರಿಸದೇ ಇದ್ದಿದ್ದಕ್ಕೆ ಇರಾನ್​ನ ಟೆಹ್ರಾನ್‍ನಲ್ಲಿ ಬಂಧನಕ್ಕೊಳಗಾಗಿ ನೈತಿಕ ಪೊಲೀಸ್‍ಗಿರಿಗೆ ಬಲಿಯಾಗಿದ್ದರು. ಇದಕ್ಕೆ ವಿಶ್ವಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆದರೂ ಇರಾನ್​ನ ಮೂಲಭೂತವಾದಿಗಳು ತಮ್ಮ ದೇಶದಲ್ಲಿ ಹಿಜಾಬ್ ಪಾಲನೆ ಕಡ್ಡಾಯ ತಪ್ಪಿದ್ದಲ್ಲಿ ತೀವ್ರ ಶಿಕ್ಷೆ ನೀಡುವುದಾಗಿ ತಿಳಿಸಿತ್ತು.

Exit mobile version