ಮುಂಬಯಿ: ಹಾರ್ದಿಕ್ ಪಾಂಡ್ಯ ನೇತೃತ್ವದ Team India ಐರ್ಲೆಂಡ್‌ನಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟಿ೨೦ ಸರಣಿ ಮುಗಿದ ಬಳಿಕ ಭಾರತಕ್ಕೆ ವಾಪಸ್ ಬರುವುದಿಲ್ಲ. ಬದಲಾಗಿ ಅಲ್ಲಿಂದಲೇ ಇಂಗ್ಲೆಂಡ್‌ಗೆ ತೆರಳಿ ಮೂರು ಪಂದ್ಯಗಳ ಟಿ೨೦ ಸರಣಿಯಲ್ಲಿ ಪಾಲ್ಗೊಳ್ಳಲಿದೆ.
ಜೂನ್ ೨೬ ಹಾಗೂ ೨೮ರಂದು ಐರ್ಲೆಂಡ್ ರಾಜಧಾನಿ ಡಬ್ಲಿನ್‌ನಲ್ಲಿ ಟಿ೨೦ ಪಂದ್ಯಗಳು ನಡೆಯಲಿವೆ. ಹಿರಿಯ ಆಟಗಾರರನ್ನು ಒಳಗೊಂಡಿರುವ ಭಾರತ ತಂಡ ಆ ವೇಳೆ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಕಿ ಉಳಿದಿರುವ ಒಂದು ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿರುತ್ತದೆ. ಹೀಗಾಗಿ ಸಂಜು ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ ಯಾದವ್ ಅವರನ್ನೊಳಗೊಂಡಂತೆ ಯುವ ಆಟಗಾರರ ಪಡೆ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾಗಿಯಾಗಲಿದೆ. ಇದೇ ತಂಡ ಅಲ್ಲಿಂದ ನೇರವಾಗಿ ಇಂಗ್ಲೆಂಡ್‌ಗೆ ತೆರಳಲಿದ್ದು, ಅದೇ ಆಟಗಾರರು ಜುಲೈ ೭ರಿಂದ ೧೦ರವರೆಗೆ ನಡೆಯಲಿರುವ ೩ ಪಂದ್ಯಗಳ ಟಿ೨೦ ಸರಣಿಯಲ್ಲಿ ಆಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜುಲೈ ೧ರಿಂದ ಜುಲೈ ೫ರವರೆಗೆ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಟೆಸ್ಟ್ ಪಂದ್ಯ ಆಯೋಜನೆಗೊಂಡಿದೆ. ಅದು ಮುಗಿದ ತಕ್ಷಣ ಅಂದರೆ ಜುಲೈ ೭ರಂದು ಸೌತಾಂಪ್ಟನ್‌ನ ಏಜಸ್‌ಬೌಲ್‌ನಲ್ಲಿ ಮೊದಲ ಟಿ೨೦ ಪಂದ್ಯ ನಡೆಯಲಿದೆ. ಟೆಸ್ಟ್ ಪಂದ್ಯದಲ್ಲಿ ಆಡಿದ ಆಟಗಾರರಿಗೆ ತಕ್ಷಣದಲ್ಲೇ ಟಿ೨೦ ಮಾದರಿಗೆ ಹೊಂದಿಕೆಯಾಗಲು ಸಾಧ್ಯವಿಲ್ಲ ಎಂಬ ಅಂಶದ ಆಧಾರದಲ್ಲಿ ಐರ್ಲೆಂಡ್‌ನಲ್ಲಿ ಟಿ೨೦ ಆಡಿದ ತಂಡವನ್ನೇ ಈ ಸರಣಿಯಲ್ಲೂ ಕಣಕ್ಕಿಳಿಸಲು ಟೀಮ್ ಇಂಡಿಯಾದ ಮ್ಯಾನೇಜ್ಮೆಂಟ್ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಅಭ್ಯಾಸ ಪಂದ್ಯವೂ ಇದೆ
ಟೆಸ್ಟ್ ಸರಣಿಯ ೫ನೇ ಪಂದ್ಯ ನಡೆಯುತ್ತಿದ್ದಂತೆ ಇನ್ನೊಂದು ಕಡೆ ಟಿ೨೦ ಸರಣಿಗೆ ಪೂರ್ವಭಾವಿಯಾಗಿ ಅಭ್ಯಾಸ ಪಂದ್ಯಗಳನ್ನೂ ಆಯೋಜಿಸಲಾಗಿದೆ. ಸ್ಥಳೀಯ ತಂಡಗಳ ವಿರುದ್ಧ ಭಾರತ ತಂಡದ ಆಟಗಾರರು ಅಭ್ಯಾಸ ಪಂದ್ಯದಲ್ಲಿ ಆಡಲಿದ್ದಾರೆ. ಐರ್ಲೆಂಡ್ ವಿರುದ್ಧದ ಸರಣಿ ಹಾಗೂ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಂಡಿರುವ ಕಾರಣ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಇಂಗ್ಲೆಂಡ್ ತಂಡವನ್ನು ಎದುರಿಸಲು ಸುಲಭವಾಗಬಹುದು ಎಂಬ ಯೋಜನೆಯೊಂದಿಗೆ ಅದೇ ತಂಡವನ್ನು ಆಡಿಸುವುದು ಬಿಸಿಸಿಐ ಉದ್ದೇಶವಾಗಿದೆ.
೧೭ ಆಟಗಾರರ ತಂಡ
ಕಳೆದ ವಾರ ಬಿಸಿಸಿಐ ೧೭ ಆಟಗಾರರನ್ನು ಒಳಗೊಂಡಿರುವ ಭಾರತ ತಂಡವನ್ನು ಐರ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಿತ್ತು. ಜಸ್‌ಪ್ರೀತ್ ಬುಮ್ರಾ, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ರಿಷಭ್ ಪಂತ್ ಇಂಗ್ಲೆಂಡ್ ಟೆಸ್ಟ್‌ನಲ್ಲಿ ಪಾಲ್ಗೊಳ್ಳಬೇಕಾಗಿರುವ ಕಾರಣ ಯುವ ಆಟಗಾರರಿಗೆ ಅವಕಾಶ ಲಭಿಸಿತ್ತು.
೪ ವರ್ಷಗಳ ಬಳಿಕ ಪ್ರವಾಸ
Team India ಐರ್ಲೆಂಡ್‌ಗೆ ಪ್ರವಾಸ ಮಾಡುತ್ತಿರುವುದು ಇದು ಎರಡನೇ ಬಾರಿ. ಹಿಂದೆ ೨೦೧೮ರಲ್ಲಿ ಮೊದಲ ಪ್ರವಾಸ ಮಾಡಿತ್ತು. ಅಲ್ಲಿ ನಡೆದ ಎರಡು ಪಂದ್ಯಗಳ ಸರಣಿಯಲ್ಲಿ Team India ಕ್ಲೀನ್ ಸ್ವೀಪ್ ಮಾಡಿತ್ತು. ಅಂತೆಯೇ ೨೦೦೯ರ ವಿಶ್ವ ಕಪ್‌ನಲ್ಲಿ ಇತ್ತಂಡಗಳು ಮೊದಲ ಬಾರಿ ಮುಖಾಮುಖಿಯಾಗಿದ್ದವು. ಇಲ್ಲೂ ವಿಜಯ ಭಾರತದ ಪಾಲಾಗಿತ್ತು.
ರಾತ್ರಿ ೯ರಿಂದ ಪಂದ್ಯ
ಐರ್ಲೆಂಡ್ ವಿರುದ್ಧದ ಪಂದ್ಯ ರಾತ್ರಿ ೯ ಗಂಟೆಗೆ ಆರಂಭವಾಗಲಿದೆ. ಐರ್ಲೆಂಡ್‌ನಲ್ಲಿ ಸಂಜೆ ೫ ಗಂಟೆಗೆ ಪಂದ್ಯ ಆರಂಭಗೊಳ್ಳಲಿದ್ದು, ಭಾರತದ ಕಾಲಮಾನ ಅಲ್ಲಿಗಿಂತ ಮುಂದಿರುವ ಕಾರಣ ಇಲ್ಲಿ ರಾತ್ರಿ ೯.೩೦ ಆಗಲಿದೆ.
ಭಾರತ ತಂಡ ಇಂತಿದೆ
ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ಯಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್, ಉಮ್ರಾನ್ ಮಲಿಕ್, ಆವೇಶ್ ಖಾನ್.
ನೇರ ಪ್ರಸಾರ:
ಪಂದ್ಯವನ್ನು ಸೋನಿ ನೆಟ್ವರ್ಕ್ ಚಾನೆಲ್‌ಗಳ ಮೂಲಕ ವೀಕ್ಷಿಸಬಹುದು. ಅದೇ ರೀತಿ ಸೋನಿ ಲೈವ್‌ನಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಇರುತ್ತದೆ.
ಇದನ್ನೂ ಓದಿ| Ireland Tour | ಟೀಮ್ ಇಂಡಿಯಾಕ್ಕೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್