ಮುಂಬಯಿ: ಐರ್ಲೆಂಡ್(India tour of Ireland) ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲು(Ireland T20 series) ಜಸ್‌ಪ್ರೀತ್ ಬುಮ್ರಾ(Jasprit Bumrah) ಸಾರಥ್ಯದ ಟೀಮ್ ಇಂಡಿಯಾ(Team India) ಇಂದು(ಮಂಗಳವಾರ) ಡಬ್ಲಿನ್ ಪ್ರಯಾಣ ಬೆಳೆಸಿದೆ. 77ನೇ ಸ್ವಾತಂತ್ರ್ಯದ ಸಂಭ್ರಮ ಮುಗಿಸಿ ಆಟಗಾರರು ಐರ್ಲೆಂಡ್ಗೆ ವಿಮಾನ ಏರಿದ್ದಾರೆ.
ಭಾರತ ಮತ್ತು ಐರ್ಲೆಂಡ್ ನಡುವಿನ ಟಿ20 ಸರಣಿ ಆಗಸ್ಟ್ 18ಕ್ಕೆ ಆರಂಭಗೊಳ್ಳಲಿದೆ. ಕಳೆದ 11 ತಿಂಗಳ ಬಳಿಕ ಜಸ್‌ಪ್ರೀತ್ ಬುಮ್ರಾ ಆಡುತ್ತಿರುವ ಮೊದಲ ಕ್ರಿಕೆಟ್ ಸರಣಿ ಇದಾಗಿದೆ. ಏಷ್ಯಾ ಕಪ್ ಮತ್ತು ಏಕದಿನ ವಿಶ್ವಕಪ್ ನಿಟ್ಟಿನಲ್ಲಿ ಬುಮ್ರಾ ಅವರಿಗೆ ಈ ಸರಣಿ ಅಗ್ನಿಪರೀಕ್ಷೆ ಎಂದರೂ ತಪ್ಪಗಲಾರದು. ಅವರ ಫಿಟ್ನೆಸ್ ಮತ್ತು ಈ ಹಿಂದಿನ ಪ್ರದರ್ಶನದ ಮೇಲೆ ಆಯ್ಕೆ ಸಮಿತಿ ಬೆಟ್ಟದಷ್ಟು ನಿರೀಕ್ಷೆ ಇರಿಸಿದೆ. ಇವರೊಂದಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣ(Prasidh Krishna) ಕೂಡಾ ಐರ್ಲೆಂಡ್ ಪ್ರವಾಸಕ್ಕೆ ತೆರಳಿದ್ದಾರೆ.
ಬುಮ್ರಾ, ಋತುರಾಜ್ ಗಾಯಕ್ವಾಡ್, ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್, ಶಿವಂ ದುಬೆ ಅವರು ವಿಮಾನದಲ್ಲಿ ಪ್ರಯಾಣಿಸುವ ಫೋಟೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಸಿಕ್ಸರ್ ಕಿಂಗ್ ರಿಂಕುಗೆ ಚೊಚ್ಚಲ ಅವಕಾಶ
ಈ ಬಾರಿ ನಡೆದ 16ನೇ ಐಪಿಎಲ್ ಟೂರ್ನಿಯಲ್ಲಿ ಅಸಾಮಾನ್ಯ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಹಲವು ಸ್ಮರಣೀಯ ಗೆಲುವು ತಂದು ಕೊಟ್ಟ ರಿಂಕು ಸಿಂಗ್ಗೆ ಇದು ಮೊದಲ ಟೀಮ್ ಇಂಡಿಯಾ ಪ್ರವಾಸವಾಗಿದೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಸತತ 5 ಸಿಕ್ಸರ್ ಬಾರಿಸಿದ ಬಳಿಕ ಸಿಕ್ಸರ್ ಕಿಂಗ್ ಎಂದು ಖ್ಯಾತಿ ಪಡೆದ ಅವರು ಈ ಸರಣಿಯಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಬುಮ್ರಾ ಹೊರತುಪಡಿಸಿ ಉಳಿದ ಎಲ್ಲ ಆಟಗಾರರು ಕೂಡ ಕಿರಿಯರೇ ಆಗಿದ್ದಾರೆ. ಚೆನ್ನೈ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದ ಶಿವಂ ದುಬೆ ಕೂಡ ಸರಣಿಯಲ್ಲಿ ಅವಕಾಶ ಪಡೆದಿದ್ದಾರೆ.
Ireland 🇮🇪, here we come ✈️ #TeamIndia | #IREvIND pic.twitter.com/A4P66WZJzP
— BCCI (@BCCI) August 15, 2023
ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಪಾಲ್ಗೊಂಡ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಅಶ್ದೀಪ್ ಸಿಂಗ್ ಮತ್ತು ಮುಖೇಶ್ ಕುಮಾರ್ ಅವರು ವೆಸ್ಟ್ ಇಂಡೀಸ್‌ನಿಂದ ನೇರವಾಗಿ ಐರ್ಲೆಂಡ್ಗೆ ಬರಲಿದ್ದಾರೆ. ಉಳಿದ ಎಲ್ಲ ಆಟಗಾರರು ಮುಂಬಯಿಯಿಂದ ವಿಮಾನ ಏರಿದ್ದಾರೆ.
ಭಾರತ ತಂಡ
ಜಸ್‌ಪ್ರೀತ್ ಬುಮ್ರಾ (ನಾಯಕ), ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ರಿಂಕು ಸಿಂಗ್, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಾಬಾಜ್ ಅಹ್ಮದ್, ರವಿ ಬಿಷ್ಣೋಯಿ, ಪ್ರಸಿದ್ಧ್ ಕೃಷ್ಣ, ಅರ್ಶ್ದೀಪ್ ಸಿಂಗ್, ಮುಕೇಶ್ ಕುಮಾರ್, ಆವೇಶ್ ಖಾನ್.