ಹೋಬರ್ಟ್: ಟಿ20 ವಿಶ್ವ ಕಪ್ (T20 World Cup) ಟೂರ್ನಿಯ ಬಿ ಗುಂಪಿನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ಐರ್ಲೆಂಡ್ ತಂಡ 6 ವಿಕೆಟ್ಗಳ ಅಮೋಘ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಐರ್ಲೆಂಡ್ ತಂಡ ಸೂಪರ್ 12 ಪ್ರವೇಶದ ಆಸೆ ಜೀವಂತವಿರಿಸಿದೆ.
ಬೆಲ್ಲೆರಿವ್ ಓವಲ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಸ್ಕಾಟ್ಲೆಂಡ್ ತಂಡ ಮೈಕೆಲ್ ಜೋನ್ಸ್ (86) ಮತ್ತು ನಾಯಕ ಬೆರಿಂಗ್ಟನ್ (37) ಹಾಗೂ ಎಂ. ಕ್ರಾಸ್ (28) ಅವರ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಐರ್ಲೆಂಡ್ ತಂಡವು 19 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 180 ರನ್ ಪೇರಿಸಿ ಗೆಲುವಿನ ನಗೆ ಬೀರಿತು.
ಚೇಸಿಂಗ್ ವೇಳೆ 61 ರನ್ಗೆ 4 ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿದ್ದ ಐರ್ಲೆಂಡ್ ತಂಡಕ್ಕೆ ಕರ್ಟಿಸ್ ಕ್ಯಾಂಫರ್ ಮತ್ತು ಜಾರ್ಜ್ ಡಾಕ್ರೆಲ್ ಆಸರೆಯಾದರು. ಅಜೇಯರಾಗಿ 119 ರನ್ ಜತೆಯಾಟ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಜತೆಯಾಟದೊಂದಿಗೆ ವಿಶ್ವ ದಾಖಲೆಯೊಂದು ನಿರ್ಮಾಣವಾಯಿತು. ಟಿ20 ವಿಶ್ವ ಕಪ್ನಲ್ಲಿ ಅತಿ ದೊಡ್ಡ ಮೊತ್ತದ ಜತೆಯಾಟ ನಡೆಸಿದ ದಾಖಲೆ ಈ ಇಬ್ಬರು ಆಟಗಾರರ ಹೆಸರಿಗೆ ಸೇರ್ಪಡೆಗೊಂಡಿತು. ಇದಕ್ಕೂ ಮುನ್ನ ಈ ದಾಖಲೆ ನೆದರ್ಲೆಂಡ್ಸ್ ತಂಡದ ಕೆ. ಓಬ್ರಿಯನ್ ಮತ್ತು ಪೊಯಿಂಟರ್ ಹೆಸರಿನಲ್ಲಿತ್ತು. ಈ ಜೋಡಿ 2014ರ ವಿಶ್ವ ಕಪ್ನಲ್ಲಿ 101 ರನ್ ಜತೆಯಾಟ ನಡೆಸಿತ್ತು.
ಕರ್ಟಿಸ್ ಕ್ಯಾಂಫರ್ (32 ಎಸೆತಗಳಲ್ಲಿ ಅಜೇಯ 72 ರನ್) ಹಾಗೂ ಜಾರ್ಜ್ ಡಾಕ್ರೆಲ್ (ಅಜೇಯ 39) ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸ್ಕಾಟ್ಲೆಂಡ್ ಪರ ಮಾರ್ಕ್ ವ್ಯಾಟ್, ಬ್ರಾಡ್ ವ್ಹೀಲ್, ಸಫ್ಯಾನ್ ಷರೀಫ್ ಹಾಗೂ ಮೈಕೆಲ್ ಲೀಸ್ಕ್ ತಲಾ ಒಂದು ವಿಕೆಟ್ ಉರುಳಿಸಿದರು. ಐರ್ಲೆಂಡ್ ಪರ ಕರ್ಟಿಸ್ ಕ್ಯಾಂಫರ್ ಎರಡು ವಿಕೆಟ್ ಪಡೆದು ಮಿಂಚಿದರೆ, ಜೋಶುವಾ ಲಿಟಲ್ ಮತ್ತು ಮಾರ್ಕ್ ಅಡೇರ್ ತಲಾ ಒಂದು ವಿಕೆಟ್ ಪಡೆದರು.
ಸ್ಕೋರ್ ವಿವರ:
ಸ್ಕಾಟ್ಲೆಂಡ್: 20 ಓವರ್ಗಳಲ್ಲಿ 176ಕ್ಕೆ 5 (ಮೈಕೆಲ್ ಜೋನ್ಸ್ 86, ಬೆರಿಂಗ್ಟನ್ 37, ಕರ್ಟಿಸ್ ಕ್ಯಾಂಫರ್ 9ಕ್ಕೆ 2).
ಐರ್ಲೆಂಡ್: 19 ಓವರ್ಗಳಲ್ಲಿ 180ಕ್ಕೆ 4 (ಕರ್ಟಿಸ್ ಕ್ಯಾಂಫರ್ ಅಜೇಯ 72, ಜಾರ್ಜ್ ಡಾಕ್ರೆಲ್ ಅಜೇಯ 39, ಮೈಕೆಲ್ ಲೀಸ್ಕ್ 16ಕ್ಕೆ 1). ಪಂದ್ಯಶ್ರೇಷ್ಠ: ಕರ್ಟಿಸ್ ಕ್ಯಾಂಫರ್
ಇದನ್ನೂ ಓದಿ | T20 World Cup | ಮಳೆ ಕಾಟ, ಭಾರತ-ನ್ಯೂಜಿಲೆಂಡ್ ಅಭ್ಯಾಸ ಪಂದ್ಯ ರದ್ದು