ನಾಗ್ಪುರ : ಭಾರತ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಕುತೂಹಲಕಾರಿಯಾಗಿ ನಡೆಯುತ್ತಿದೆ. ಪ್ಯಾಟ್ ಕಮಿನ್ಸ್ ಬಳಗವನ್ನು 177 ರನ್ಗಳಿಗೆ ಆಲ್ಔಟ್ ಮಾಡಿರುವ ಭಾರತ ತಂಡ ಬ್ಯಾಟಿಂಗ್ ಮುಂದುವರಿಸಿ 100 ರನ್ಗೂ ಅಧಿಕ ಮುನ್ನಡೆ ಪಡೆದುಕೊಂಡಿದ್ದಾರೆ. ಆದರೆ, ಈ ಹಣಾಹಣಿ ಆರಂಭಗೊಳ್ಳುವ ಮೊದಲೇ ನಾಗ್ಪುರದ ವಿಸಿಎ ಪಿಚ್ (Nagpur Pitch Criticism) ಬಗ್ಗೆ ಆಸ್ಟ್ರೇಲಿಯಾದ ಮಾಧ್ಯಮಗಳು ಹಾಗೂ ಮಾಜಿ ಕ್ರಿಕೆಟಿಗರು ಪಿಚ್ ಬಗ್ಗೆ ತಕರಾರು ಎತ್ತಿದ್ದರು. ಮೊದಲ ದಿನ ಆಸ್ಟ್ರೇಲಿಯಾ ತಂಡದ ಸಣ್ಣ ಮೊತ್ತಕ್ಕೆ ಕುಸಿದಾಗ ಮತ್ತದೇ ಧ್ವನಿ ಕೇಳಿ ಬಂದಿತು. ಆದರೆ, ಆಸೀಸ್ ಕ್ರಿಕೆಟ್ ಬಳಗದ ಆಕ್ಷೇಪವನ್ನು ಭಾರತ ತಂಡದ ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್, ಕಠು ಮಾತುಗಳಿಂದ ಖಂಡಿಸಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜತೆ ಮಾತನಾಡಿದ ಇರ್ಫಾನ್ ಪಠಾಣ್, ಆಟದ ಮೊದಲ ದಿನವೇ ಪಿಚ್ನಲ್ಲಿ 2.9 ಡಿಗ್ರಿಗೂ ಮಿಕ್ಕಿ ಚೆಂಡು ತಿರುವು ಪಡೆಯುತ್ತಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಇಲ್ಲಿ ಪಿಚ್ ತಿರುವು ಪಡೆಯುತ್ತಿರುವುದು ಇದೇ ಮೊದಲಲ್ಲ ಎಂದಿದ್ದಾರೆ.
ನಾಗ್ಪುರ ಪಿಚ್ ಬಗ್ಗೆ ಇಲ್ಲ ಸಲ್ಲದ ಸದ್ದು ಮಾಡುವುದು ಯಾಕೆ? ಇಲ್ಲಿ ಚೆಂಡು ಮೊದಲ ದಿನವೇ ತಿರುವು ಪಡೆಯುವುದು ಹೊಸದಲ್ಲ. ಹಿಂದೆಯೂ ಇದೇ ರೀತಿ ತಿರುವು ಪಡೆದುಕೊಳ್ಳುತ್ತಿತ್ತು. ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯ ವೇಳೆಯೂ ಇದೇ ರೀತಿಯ ತಿರುವು ಕಂಡು ಬಂದಿತ್ತು ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.
ಇದನ್ನೂ ಓದಿ : IND VS AUS: ಜಡೇಜಾ ಬೆರಳಿಗೆ ಹಚ್ಚಿಕೊಂಡಿದ್ದೇನು?; ಸ್ಪಷ್ಟೀಕರಣ ನೀಡಿದ ಬಿಸಿಸಿಐ
ಇಲ್ಲಿ ವಿಕೆಟ್ ಪಡೆಯಬೇಕಾದರೆ ಉತ್ತಮ ಗುಣಮಟ್ಟದ ಬೌಲಿಂಗ್ ನಡೆಸಬೇಕು. ಮೊದಲ ದಿನ ಜಡೇಜಾ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು. ಹೀಗಾಗಿ ಅವರಿಗೆ ಹೆಚ್ಚು ವಿಕೆಟ್ಗಳು ಸಿಕ್ಕವು. ಅದನ್ನೇ ಪಿಚ್ ಟರ್ನ್ ಎಂದು ಕರೆಯಬೇಡಿ ಎಂದು ಇರ್ಫಾನ್ ಹೇಳಿದ್ದಾರೆ.