ಅಹಮದಾಬಾದ್: ಫೈನಲ್ ಪಂದ್ಯದ ತನಕ ಒಂದೂ ಪಂದ್ಯವನ್ನು ಸೋಲದೆ ಅಜೇಯವಾಗಿದ್ದ ಭಾರತ ಫೈನಲ್ ಪಂದ್ಯದಲ್ಲಿ(India vs Australia, Final) ಎಡವಿತು. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿ ಪ್ರಶಸ್ತಿಯಿಂದ ವಂಚಿತವಾಯಿತು. ಸೋಲಿನ ಬೆನ್ನಲ್ಲೇ ಕೋಚ್ ರಾಹುಲ್ ದ್ರಾವಿಡ್(Rahul Dravid) ಅವರು ತಮ್ಮ ಹುದ್ದೆಯನ್ನು ತ್ಯಜಿಸಲಿದ್ದಾರಾ ಎನ್ನುವ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 240 ರನ್ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ಗೆಲುವು ಸಾಧಿಸಿತು. ಟ್ರಾವಿಸ್ ಹೆಡ್ 137 ರನ್ ಬಾರಿಸಿ ಭಾರತದ ಗೆಲುವನ್ನು ಕಸಿದರು. ಆಸೀಸ್ ಪಾಲಿಗೆ ಗೆಲುವಿನ ರೂವಾರಿ ಎನಿಸಿಕೊಂಡರು.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಚ್ ರಾಹುಲ್ ದ್ರಾವಿಡ್, ಆಟಗಾರನಾಗಿ ಮತ್ತು ಕೋಚ್ ಆಗಿ ವಿಶ್ವಕಪ್ ಗೆಲ್ಲುವುದರಲ್ಲಿ ನಾನು ಮತ್ತೆ ವಿಫಲನಾದೆ. ಸೋಲಿನಿಂದ ಬೇಸರವಾಗಿರುವ ನಿಜ. ಆದರೆ, ನಮ್ಮ ತಂಡ ಫೈನಲ್ ತನಕ ಸಾಗಿ ಬಂದ ದಾರಿಯನ್ನು ನೋಡುವಾಗ ನಿಜವಾಗಿಯೂ ಹೆಮ್ಮೆ ಅನಿಸುತ್ತದೆ. ಎಲ್ಲ ಆಟಗಾರರು ಉತ್ಕೃಷ್ಟ ಮಟ್ಟದ ಆಟ ಆಡಿದ್ದಾರೆ. ಸೋಲು ಗೆಲುವು ಕ್ರೀಡೆಯ ಒಂದು ಭಾಗ. ನಮ್ಮ ಎಲ್ಲ ಆಟಗಾರರು ಡ್ರೆಸ್ಸಿಂಗ್ ರೋಮ್ನಲ್ಲಿ ಈ ಸೋಲನ್ನು ಅರಗಿಸಿಕೊಳ್ಳಲಾಗದೆ ಬೇಸರದಿಂದ ಕುಳಿತಿದ್ದಾರೆ. ಅವರನ್ನು ಸಮಾಧಾನ ಪಡೆಸುವ ಸವಾಲು ಕೂಡ ನನ್ನ ಮುಂದಿದೆ ಎಂದರು.
ಸೋಲಿನ ನೋವನ್ನು ಹತ್ತಿರದಿಂದ ಕಂಡಿದ್ದೇನೆ
“ಡ್ರೆಸ್ಸಿಂಗ್ ರೂಮಿನಲ್ಲಿ ಎಲ್ಲರೂ ಭಾವುಕರಾಗಿರುತ್ತಾರೆ. ಅವರನ್ನು ಕೋಚ್ ಆಗಿ ನೋಡುವುದು ಕಷ್ಟವಾಗುತ್ತಿದೆ. ಸೋಲಿನ ನೋವು ಎನೆಂಬುದು ನನಗೆ ತಿಳಿದಿದೆ. ಇದನ್ನೂ ನಾನು ಬಹಳ ಹತ್ತಿರದಿಂದ ಕಂಡಿದ್ದೇನೆ. ನಾನು ಕೂಡ ಒಂದು ಕಾಲದಲ್ಲಿ ಆಟಗಾರನಾಗಿದ್ದೆ. ಹೀಗಾಗಿ ಎಷ್ಟೇ ಸಮಾಧಾನ ಪಡೆಸಿದರೂ ಆ ನೋವು ಮನಸ್ಸಲ್ಲಿ ಇದೇ ಇರುತ್ತದೆ. ಆದರೂ ನಾವು ಇದನ್ನೂ ಒಪ್ಪಿಕೊಂಡು ಮುಂದೆ ಸಾಗಬೇಕು. ತಂಡದ ಪ್ರದರ್ಶನದ ಬಗ್ಗೆ ಹೆಮ್ಮೆ ಇದೆ” ಎಂದು ದ್ರಾವಿಡ್ ಹೇಳಿದರು.
ಇದನ್ನೂ ಓದಿ ‘ನಾವು ಎಲ್ಲವನ್ನೂ ಪ್ರಯತ್ನಿಸಿದ್ದೇವೆ’; ಸೋಲಿಗೆ ಕಾರಣ ತಿಳಿಸಿದ ರೋಹಿತ್
“ನಾವು ಗುಣಮಟ್ಟದ ಕ್ರಿಕೆಟ್ ಆಡಿದ ರೀತಿ ನಮಗೆ ಹೆಮ್ಮೆ ತಂದಿದೆ. ಉತ್ತಮ ಪ್ರದರ್ಶನ ನೀಡಿದ್ದೇವೆ. ಆಸ್ಟ್ರೇಲಿಯಾ ನಮಗಿಂತ ಉತ್ತಮವಾಗಿತ್ತು. ಅವರಿಗೆ ಅಭಿನಂದನೆಗಳು. ನಾವು 40 ರನ್ ಹೆಚ್ಚು ಬಾರಿಸುತ್ತಿದ್ದರೆ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದಿತ್ತು. ನಾವು ಹೆಚ್ಚು ಬೌಂಡರಿಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ವಿಕೆಟ್ಗಳನ್ನು ಕಳೆದುಕೊಳ್ಳುತ್ತಲೇ ಇದ್ದೆವು. ಸ್ಕೋರ್ 290 ತಲುಪಿದ್ದರೆ ಆಟ ವಿಭಿನ್ನವಾಗುತ್ತಿತ್ತು. ಟ್ರಾವಿಸ್ ಹೆಡ್ ಅದ್ಭುತ ಬ್ಯಾಟಿಂಗ್ ಮಾಡಿದರು” ಎಂದರು.
ಇನ್ನೂ ಅದರ ಬಗ್ಗೆ ಯೋಚಿಸಿಲ್ಲ
ಮುಂದಿನ ವರ್ಷದ ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ಆಡಬೇಕಾಗಿದೆ. ಈ ಟೂರ್ನಿಯವರೆಗೂ ಟೀಮ್ ಇಂಡಿಯಾದ ಕೋಚ್ ಆಗಿ ಉಳಿಯಲು ಬಯಸುತ್ತೀರಾ? ಎಂದು ದ್ರಾವಿಡ್ ಅವರನ್ನು ಮಾಧ್ಯಮದವರು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ದ್ರಾವಿಡ್, ನಾನು ಇದರ ಬಗ್ಗೆ ಇನ್ನೂ ಯೋಚಿಸಿಲ್ಲ. ಸಮಯ ಸಿಕ್ಕಾಗ ನಿರ್ಧಾರ ಮಾಡುತ್ತೇನೆ ಎಂದರು.
ದ್ರಾವಿಡ್ ನವೆಂಬರ್ 2021ರಲ್ಲಿ ಭಾರತ ತಂಡದ ಕೋಚ್ ಆಗಿ ಆಯ್ಕೆಯಾದರು. ದ್ರಾವಿಡ್ ಕೋಚ್ ಆದಾಗ ಅವರ ಮೇಲೆ ಅತಿಯಾದ ನಿರೀಕ್ಷೆಯಿತ್ತು. ಆದರೆ ನಿರೀಕ್ಷೆಗೆ ತಕ್ಕ ಪ್ರದರ್ಶನ ಅವರ ಕೋಚಿಂಗ್ ಅವಧಿಯಲ್ಲಿ ಕಂಡು ಬರಲಿಲ್ಲ. ಹೀಗಾಗಿ ಅವರ ಕೋಚಿಂಗ್ ಬಗ್ಗೆ ಹಲವು ಟೀಕೆಗಳು ಕೂಡ ವ್ಯಕ್ತವಾಗಿತ್ತು. ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಹೆಡ್ ಕೋಚ್ ಆದ ಬಳಿಕ ನಿರೀಕ್ಷಿತ ಯಶಸ್ಸು ತಂಡಕ್ಕೆ ಸಿಕ್ಕಿಲ್ಲ. ಅಂಡರ್-19 ಕ್ರಿಕೆಟ್ ಮಾರ್ಗದರ್ಶನದಲ್ಲಿ ಅವರಿಗೆ ಸಿಕ್ಕಷ್ಟು ಯಶಸ್ಸು ಸೀನಿಯರ್ಸ್ ತಂಡದಲ್ಲಿ ಸಿಕ್ಕಿಲ್ಲ.
ದ್ರಾವಿಡ್ ಮಾರ್ಗದರ್ಶನದಲ್ಲಿ ಏಷ್ಯಾಕಪ್ 2022, ಐಸಿಸಿ ಟಿ20 ವಿಶ್ವಕಪ್, ಐಸಿಸಿ ವಿಶ್ವಕಪ್ ಟೆಸ್ಟ್ ಪಂದ್ಯದಲ್ಲಿಯೂ ಕಪ್ ಗೆಲ್ಲಲು ತಂಡ ವಿಫಲವಾಗಿತ್ತು. ಇದೀಗ ಏಕದಿನ ವಿಶ್ವಕಪ್ ಕೂಡ ಒಲಿಯಲ್ಲಿಲ್ಲ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಅಂದಿನ ಅಧ್ಯಕ್ಷ ಸೌರವ್ ಗಂಗೂಲಿ ಅವರು 2021ರಲ್ಲಿ ಒಪ್ಪಿಸಿದ್ದ ಕಾರಣ ಕೋಚ್ ಹುದ್ದೆ ವಹಿಸಿಕೊಂಡಿದ್ದರು. ಸದ್ಯ ದ್ರಾವಿಡ್ ಅವರು ಕೋಚ್ ಆಗಿ ಮುಂದುವರಿಯಲಿದ್ದಾರಾ ಎನ್ನುವುದು ಕೆಲ ದಿನಗಳಲ್ಲಿ ಅಧಿಕೃತವಾಗಿ ತಿಳಿಯಲಿದೆ.