ಬರ್ಮಿಂಗ್‌ಹ್ಯಾಮ್: ಕಾಯಂ ನಾಯಕ ರೋಹಿತ್ ಶರ್ಮ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದರೋ ಇಲ್ಲವೊ ಎಂಬ ಖಚಿತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಇಂಗ್ಲೆಂಡ್ ಪ್ರವಾಸದಲ್ಲಿರುವ (England Tour) ಭಾರತ ತಂಡ ಶುಕ್ರವಾರ ಆರಂಭವಾಗಲಿರುವ ಟೆಸ್ಟ್ ಪಂದ್ಯಕ್ಕಾಗಿ ಕಣಕ್ಕಿಳಿಯಬೇಕಾಗಿದ್ದು, ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾಗೆ ನಾಯಕತ್ವ ನೀಡಲು ಸಿದ್ಧತೆಗಳು ನಡೆದಿವೆ. ಹೀಗಾಗಿ ಒಂದು ವೇಳೆ ಬುಮ್ರಾ ನಾಯಕರಾದರೆ ಇಂಗ್ಲೆಂಡ್ ತಂಡದ ವಿರುದ್ಧ ಭಾರತ ತಂಡಕ್ಕೆ ಆಗುವ ಲಾಭವೇನು ಎಂಬುದು ಅಭಿಮಾನಿಗಳ ನಡುವಿನ ಚರ್ಚೆ.
ಅಂತೆಯೇ, ಜಸ್‌ಪ್ರಿತ್ ಬುಮ್ರಾಗೆ ಹೊಣೆಗಾರಿಕೆ ವಹಿಸಿದರೆ ಅವರು ಭಾರತ ಟೆಸ್ಟ್ ತಂಡದ ೩೬ನೇ ಕ್ಯಾಪ್ಟನ್ ಆಗಲಿದ್ದಾರೆ. ತಂಡದಲ್ಲಿ ಹಿರಿತನ ಹೊಂದಿದ, ಶಾಂತ ಸ್ವಭಾವದ ಹಾಗೂ ಉತ್ತಮ ಪ್ರದರ್ಶನ ನೀಡಬಲ್ಲ ಅವರು ನಾಯಕರಾಗುವುದರಿಂದ ತಂಡಕ್ಕೆ ಸಾಕಷ್ಟು ಲಾಭವಿದೆ ಎಂಬುದು ಕ್ರಿಕೆಟ್ ವಿಶ್ಲೇಷಕರ ಲೆಕ್ಕಾಚಾರ.
ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ, ಆರ್. ಅಶ್ವಿನ್, ಚೇತೇಶ್ವರ್ ಪೂಜಾರ ಸೇರಿದಂತೆ ಹಲವು ಹಿರಿಯ ಆಟಗಾರರು ಇದ್ದಾರೆ. ಜತೆಗೆ ಶುಬ್ಮನ್ ಗಿಲ್ ಅವರಂಥ ಕಿರಿಯರೂ ಸೇರಿಕೊಂಡಿದ್ದಾರೆ. ಎಲ್ಲರ ಜತೆಯೂ ಉತ್ತಮ ಬಾಂಧವ್ಯ ಹೊಂದಿರುವ ಬುಮ್ರಾಗೆ ನಾಯಕನ ಪಟ್ಟ ಕಟ್ಟಿದರೆ ನಿರ್ವಹಣೆ ಸುಲಭ ಎನ್ನುವುದು ಟೀಮ್ ಇಂಡಿಯಾದ ಮ್ಯಾನೇಜ್ಮೆಂಟ್ ಲೆಕ್ಕಾಚಾರ.
ಯುವ ಬೌಲರ್‌ಗಳಾದ ನವದೀಪ್ ಸೈನಿ ಮತ್ತು ಮೊಹಮ್ಮದ್ ಸಿರಾಜ್ ಕೂಡ ಭಾರತ ತಂಡದ ನಿಯೋಗದಲ್ಲಿದ್ದಾರೆ. ಒಂದು ವೇಳೆ ಅವರು ೧೧ರ ಬಳಗದಲ್ಲಿ ಅವಕಾಶ ಪಡೆದುಕೊಂಡರೆ ಉತ್ತಮ ರೀತಿಯಲ್ಲಿ ಬೌಲಿಂಗ್ ಮಾಡಲು ಮಾರ್ಗದರ್ಶನ ಮಾಡುವುದಕ್ಕೂ ಅನುಕೂಲ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ಅವಕಾಶ ಸಿಕ್ಕರೆ ಸದ್ಬಳಕೆ ಮಾಡುವೆ
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಕೆ.ಎಲ್ ರಾಹುಲ್ ನಾಯಕರಾಗಿ ಆಯ್ಕೆಯಾಗಿದ್ದ ವೇಳೆ ಬುಮ್ರಾಗೆ ಉಪನಾಯಕನ ಸ್ಥಾನ ನೀಡಲಾಗಿತ್ತು. ಆ ವೇಳೆ ರೋಹಿತ್ ಶರ್ಮಗೆ ಕಾಯಂ ನಾಯಕನ ಪಟ್ಟ ಕಟ್ಟಿರಲಿಲ್ಲ. ಟೆಸ್ಟ್ ತಂಡದ ನಾಯಕರಾಗುವಿರೇ ಎಂದು ಆ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಬುಮ್ರಾ “ಅವಕಾಶ ಸಿಕ್ಕರೆ ಖಂಡಿತಾ ಒಪ್ಪಿಕೊಳ್ಳುವೆ ಹಾಗೂ ಸದ್ಬಳಕೆ ಮಾಡಿಕೊಳ್ಳುವೆ,” ಎಂದು ಹೇಳಿದ್ದರು. ಹೀಗಾಗಿ ಟೆಸ್ಟ್ ತಂಡದ ನಾಯಕರಾಗುವ ಇಚ್ಛೆ ಅವರಿಗೆ ಎಂಬುದು ಸ್ಪಷ್ಟವಾಗಿತ್ತು. ಹೀಗಾಗಿ ರೋಹಿತ್ ಅಲಭ್ಯತೆಯಲ್ಲಿ ಸಿಗುವ ಅವಕಾಶವನ್ನು ಅವರು ಬಳಸಿಕೊಳ್ಳುವ ಯತ್ನ ಮಾಡಬಲ್ಲರು.
ಕ್ರಿಕೆಟ್‌ನಲ್ಲಿ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳಿಗೆ ನಾಯಕನ ಹೊಣೆಗಾರಿಕೆ ಕೊಡಲಾಗುತ್ತದೆ. ಬೌಲರ್‌ಗಳು ನಾಯಕರಾದ ಹಾಗೂ ಜವಾಬ್ದಾರಿಯಲ್ಲಿ ಯಶಸ್ಸು ಗಳಿಸಿದ ನಾನಾ ಉದಾಹರಣೆಗಳೂ ಇವೆ. ಫೀಲ್ಡಿಂಗ್ ವೇಳೆ ಫೀಲ್ಡ್ ಸೆಟ್ ಮಾಡಲು ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕ ಹಾಗೂ ೩೦ ಯಾರ್ಡ್ ವೃತ್ತದೊಳಗೆ ಇರುವುದಕ್ಕೂ ಸುಲಭ ಎಂಬ ಕಾರಣಕ್ಕೆ ಬ್ಯಾಟ್ಸ್‌ಮನ್‌ಗಳಿಗೆ ಪಟ್ಟ ಕಟ್ಟಲಾಗುತ್ತದೆ. ಇದಕ್ಕೆಲ್ಲ ಅಪವಾದ ಎಂಬಂತೆ ಹಲವು ಓವರ್‌ಗಳಷ್ಟು ಬೌಲಿಂಗ್ ಮಾಡಿ ನಾಯಕತ್ವವನ್ನು ಯಶಸ್ವಿಯಾಗಿ ನಿಭಾಯಿಸಿದ ಹಲವು ಆಟಗಾರರು ಇದ್ದಾರೆ. ಅವರ ಪಟ್ಟಿ ಇಂತಿದೆ.
ಬಾಬ್ ವಿಲ್ಲಿಸ್ (ಇಂಗ್ಲೆಂಡ್)
ಇಮ್ರಾನ್ ಖಾನ್ (ಪಾಕಿಸ್ತಾನ)
ಕಪಿಲ್ ದೇವ್ (ಭಾರತ)
ಶಾನ್ ಪೊಲಾಕ್ (ದಕ್ಷಿಣ ಆಫ್ರಿಕಾ)
ವಾಸಿಮ್ ಅಕ್ರಂ (ಪಾಕಿಸ್ತಾನ)
ವಕಾರ್ ಯೂನಿಸ್ (ಪಾಕಿಸ್ತಾನ)
ಕರ್ಟ್ನಿ ವಾಲ್ಶ್ (ವೆಸ್ಟ್ ಇಂಡೀಸ್)
ಹೀತ್ ಸ್ಟ್ರೀಕ್ (ಜಿಂಬಾಬ್ವೆ)
ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ)
ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್)
ಇದನ್ನೂ ಓದಿ : Team India ನಾಯಕ ರೋಹಿತ್ ಶರ್ಮಗೆ ಕೊರೊನಾ