Site icon Vistara News

Rishabh Pant | ಕಾರು ಅವಘಡದಲ್ಲಿ ಗಾಯಗೊಂಡಿರುವ ರಿಷಭ್​ ಪಂತ್​ ಐಪಿಎಲ್​, ವಿಶ್ವ ಕಪ್​ಗೆ ಅಲಭ್ಯ?

rishabh pant

ನವ ದೆಹಲಿ : ಭಾರತ ತಂಡದ ಯುವ ವಿಕೆಟ್​ಕೀಪರ್​ ಬ್ಯಾಟರ್​ ರಿಷಭ್​ ಪಂತ್ (Rishabh Pant)​ ಕಾರು ಅವಘಡದಲ್ಲಿ ಗಾಯಗೊಂಡಿದ್ದಾರೆ. ಡೆಲ್ಲಿ- ಡೆಹ್ರಾಡೂನ್ ಎಕ್ಸ್​ಪ್ರೆಸ್​ವೇನಲ್ಲಿ ಸಾಗುತ್ತಿದ್ದ ಅವರ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಭಸ್ಮವಾಗಿದೆ. ದೊಡ್ಡ ಪ್ರಮಾಣದಲ್ಲಿ ಅಪಘಾತ ಉಂಟಾಗಿದ್ದರೂ ಸಾಮಾನ್ಯ ಸ್ವರೂಪದ ಗಾಯಗಳೊಂದಿಗೆ ಪಂತ್​ ಪಾರಾಗಿದ್ದಾರೆ. ಅವರ ವೈದ್ಯಕೀಯ ಪರೀಕ್ಷೆಗಳು ಇನ್ನೂ ಮುಂದುವರಿದಿದ್ದು ವರದಿಗಳು ಬರಬೇಕಷ್ಟೆ.

ರಿಷಭ್​ ಅವರು ಪ್ರಯಾಣಿಸುತ್ತಿದ್ದ ಕಾರು ಡಿವೈಡರ್​ಗೆ ಬಡಿದು ಕಬ್ಬಿಣದ ತಡೆಗೊಡೆಗಳಿಗೆ ಉಜ್ಜಿಕೊಂಡು 100 ಮೀಟರ್​ನಷ್ಟು ದೂರ ಹೋಗಿದೆ. ಈ ಘರ್ಷಣೆಯ ವೇಳೆ ಕಾರಿನೊಳಗಿದ್ದ ಪಂತ್​ ಅವರ ಮಂಡಿ, ಬೆನ್ನು ಹಾಗೂ ಹಣೆಗೆ ಏಟಾಗಿದೆ. ಅವರನ್ನು ಸ್ಥಳೀಯರು ಡೆಹ್ರಾಡೂನ್​ನ ಸಕ್ಷಮ್​ ಆಸ್ಪತ್ರೆಗೆ ಸೇರಿಸಿದ್ದು ಅಲ್ಲಿಂದ ಡೆಲ್ಲಿಗೆ ಏರ್​ಲಿಫ್ಟ್​ ಮಾಡುವುದಕ್ಕೆ ಉತ್ತರಾಖಂಡ ಸರಕಾರ ಮುಂದಾಗಿದೆ.

ಪಂತ್​ ಅವರ ಎಡ ಕಣ್ಣಿನ ಮೇಲ್ಭಾಗದಲ್ಲಿ ಜಜ್ಜಿ ರಕ್ತ ಸ್ರಾವ ಉಂಟಾಗಿದೆ. ಬೆನ್ನಿನ ಭಾಗದಲ್ಲೂ ಚರ್ಮ ಸುಲಿದು ಹೋಗಿದೆ. ಅಂತೆಯೇ ಮಂಡಿಯೊಳಗೆ ಸಣ್ಣ ಮುರಿತ ಉಂಟಾಗಿದೆ. ಹೀಗಾಗಿ ಬೆನ್ನು ಹಾಗೂ ಹಣೆಯ ಭಾಗಕ್ಕೆ ಪ್ಲಾಸ್ಟಿಕ್​ ಸರ್ಜರಿ ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಏಟು ಬಿದ್ದಿರು ಮಂಡಿಗೂ ಶಸ್ತ್ರ ಚಿಕಿತ್ಸೆಯೂ ಅಗತ್ಯವಿದೆ ಎನ್ನಲಾಗುತ್ತಿದೆ . ಈ ಎಲ್ಲ ಸಮಸ್ಯೆಯಿಂದ ಸುಧಾರಿಸಿಕೊಳ್ಳುವುದಕ್ಕೆ ಕನಿಷ್ಠ ಪಕ್ಷ ಒಂದು ವರ್ಷ ಬೇಕಾಗಬಹುದು.

ಗಾಯಗೊಂಡಿರುವ ರಿಷಭ್​ ಅವರು ಮುಂದಿನ ಐಪಿಎಲ್​ನಲ್ಲಿ ಆಡುವುದು ಕಷ್ಟ. ಅವರು ಡೆಲ್ಲಿ ತಂಡದ ಕಾಯಂ ಸದಸ್ಯರಾಗಿದ್ದು ಅವರ ಅಲಭ್ಯತೆಯಿಂದ ತಂಡಕ್ಕೆ ಹಿನ್ನಡೆಯಾಗಲಿದೆ. ಅದೇ ರೀತಿ ಅಕ್ಟೋಬರ್​ ಮತ್ತು ನವೆಂಬರ್​ನಲ್ಲಿ ಭಾರತದ ಆತಿಥ್ಯದಲ್ಲಿ ಏಕ ದಿನ ವಿಶ್ವ ಕಪ್​ ನಡೆಯಲಿದೆ. ಅದಕ್ಕಾಗಿ ತಂಡದ ಸಂಯೋಜನೆ ಬಗ್ಗೆ ಬಿಸಿಸಿಐ ಯೋಜನೆ ರೂಪಿಸಿಕೊಂಡಿದ್ದು, ಅದಕ್ಕೂ ಪಂತ್​ ಲಭ್ಯ ಇರಲಾರರು. ಟೀಮ್​ ಇಂಡಿಯಾಗೂ ಇದರಿಂದ ಹಿನ್ನಡೆ ಉಂಟಾಗಲಿದೆ.

ಇದನ್ನೂ ಓದಿ | Rishabh Pant | ಡಿವೈಡರ್​​ಗೆ ಡಿಕ್ಕಿ ಹೊಡೆದು ಸುಟ್ಟು ಭಸ್ಮವಾದ ಕಾರು; ಖ್ಯಾತ ಕ್ರಿಕೆಟರ್​ ರಿಷಭ್​ ಪಂತ್​​ಗೆ ಗಂಭೀರ ಗಾಯ

Exit mobile version