ನವ ದೆಹಲಿ : ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಮೊದಲ ಟೆಸ್ಟ್ನಲ್ಲಿ 1 ಹಾಗೂ 19 ರನ್ ಬಾರಿಸಿದರೆ, ಎರಡನೇ ಟೆಸ್ಟ್ನಲ್ಲಿ 24 ಹಾಗೂ 1 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಅವರು ದ್ವಿಪಕ್ಷೀಯ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ವಿರಾಟ್ ಕೊಹ್ಲಿ ಟಿ20 ಹಾಗೂ ಏಕ ದಿನ ಮಾದರಿಯಲ್ಲಿ ಫಾರ್ಮ್ಗೆ ಮರಳಿದ್ದಾರೆ. ಆದರೆ ಬಾಂಗ್ಲಾ ವಿರುದ್ಧದ ಪ್ರದರ್ಶನವನ್ನು ನೋಡಿದಾಗ ಟೆಸ್ಟ್ ಮಾದರಿಯಲ್ಲಿ ಫಾರ್ಮ್ ಕಂಡುಕೊಂಡಂತಿಲ್ಲ. ಇವೆಲ್ಲದರ ನಡುವೆ ಅವರು ಶನಿವಾರ ಬಾಂಗ್ಲಾ ವಿರುದ್ಧದ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ ಎದುರಾಳಿ ತಂಡದ ಆಟಗಾರರ ಜತೆ ವಾಗ್ವಾದ ನಡೆಸಿದ್ದರು. ಈ ಮೂಲಕ ಅವರು ಉತ್ತಮ ಪ್ರದರ್ಶನ ನೀಡದ್ದಕ್ಕಿಂತ ಹೆಚ್ಚಾಗಿ ಅವರು ಜಗಳವಾಡಿದ್ದೇ ಸುದ್ದಿಯಾಯಿತು.
22 ಎಸೆತಗಳನ್ನು ಎದುರಿಸಿದ್ದ ವಿರಾಟ್ ಕೊಹ್ಲಿ ಮೆಹೆದಿ ಹಸನ್ ಮಿರ್ಜಾ ಅವರ ಎಸೆತಕ್ಕೆ ಮೊಮಿನುಲ್ ಹಕ್ಗೆ ಕ್ಯಾಚಿತ್ತಿದ್ದರು. ಒಂದು ರನ್ಗೆ ಔಟಾದ ಅವರು ನಿರಾಸೆಯಿಂದ ಹೊರಡುವಾಗ ಬಾಂಗ್ಲಾದೇಶದ ಫೀಲ್ಡರ್ಗಳು ಮಿತಿ ಮೀರಿ ಕೇಕೆ ಹಾಕಿದ್ದರು. ತಾಳ್ಮೆ ಕಳೆದುಕೊಂಡ ವಿರಾಟ್ ಕೊಹ್ಲಿ ಬಾಂಗ್ಲಾ ನಾಯಕ ಶಕಿಬ್ ಅಲ್ ಹಸನ್ ಅವರನ್ನು ಕರೆದು ಆಕ್ಷೇಪ ವ್ಯಕ್ತಪಡಿಸಿದ ಜತೆಗೆ ಜಗಳವಾಡಿಕೊಂಡೇ ಹೋಗಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರ ಬಾಲ್ಯದ ಕೋಚ್ ರಾಜ್ಕುಮಾರ್ ಶರ್ಮ, ಬ್ಯಾಟರ್ ಒಬ್ಬನಿಗೆ ಔಟಾದಾಗ ಸಿಕ್ಕಾಪಟ್ಟೆ ನಿರಾಸೆ ಉಂಟಾಗುವುದು ಸಹಜ. ಅಂತೆಯೇ ವಿರಾಟ್ ಕೊಹ್ಲಿಗೂ ಒಂದು ರನ್ ವಿಕೆಟ್ ಒಪ್ಪಿಸಿದಾಗ ಬೇಸರವಾಗಿದೆ. ಹೀಗಾಗಿ ಅವರು ಬಾಂಗ್ಲಾದೇಶದ ಆಟಗಾರರ ಜತೆ ಜಗಳವಾಡಿದ್ದಾರೆ. ಅವರು ಜಗಳವಾಡಿದ್ದನ್ನು ಬೇಕಾದರೆ ಸಹಿಸಿಕೊಳ್ಳಬಹುದು. ಆದರೆ, ಅವರು ಸ್ಪಿನ್ನರ್ಗಳಿಗೆ ಬೆದರಿ ಆಡಿರುವ ಪರಿಯನ್ನು ಮಾತ್ರ ಒಪ್ಪಲಾಗದು ಎಂದು ಹೇಳಿದ್ದಾರೆ.
ಮಿಡ್-ಆನ್ ಮತ್ತು ಮಿಡ್ ಆಫ್ ಫೀಲ್ಡರ್ಗಳು ಸರ್ಕಲ್ಗಿಂತ ಒಳಗೆ ಇದ್ದ ವೇಳೆ ಅವರು ಹೆಚ್ಚು ಸಲೀಸಾಗಿ ಬ್ಯಾಟ್ ಬೀಸಬಹುದಾಗಿತ್ತು. ಇಂಥ ಸಮಯದಲ್ಲಿ ಸ್ಲೋ ಸ್ವೀಪ್ ಅಥವಾ ಸ್ವೀಪ್ ಮಾಡಬಹುದಾಗಿತ್ತು ಎಂಬುದಾಗಿ ರಾಜ್ಕುಮಾರ್ ಶರ್ಮ ಸಲಹೆ ಕೊಟ್ಟಿದ್ದಾರೆ.
ಇದನ್ನೂ ಓದಿ | INDvsBAN | ಬಾಂಗ್ಲಾ ವಿರುದ್ಧದ ಟೆಸ್ಟ್; ಒಂದೇ ದಿನ ನಾಲ್ಕು ಕ್ಯಾಚ್ ಬಿಟ್ಟ ವಿರಾಟ್ ಕೊಹ್ಲಿ ಫುಲ್ ಟ್ರೋಲ್