Site icon Vistara News

Ishan Kishan: ಐಪಿಎಲ್​ ನೀತಿ ಸಂಹಿತೆ ಉಲ್ಲಂಘನೆ; ಇಶಾನ್​ ಕಿಶನ್​ಗೆ ಬಿತ್ತು ದಂಡದ ಬರೆ

Ishan Kishan

ನವದೆಹಲಿ: ಮುಂಬೈ ಇಂಡಿಯನ್ಸ್​(Mumbai Indians) ತಂಡದ ಯುವ ಎಡಗೈ ಬ್ಯಾಟರ್​ ಇಶಾನ್​ ಕಿಶನ್(Ishan Kishan)​ ಅವರಿಗೆ ದಂಡದ ಬರೆ ಬಿದ್ದಿದೆ. ಡೆಲ್ಲಿ ಕ್ಯಾಪಿಟಲ್ಸ್(Delhi Capitals) ವಿರುದ್ಧದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಬಿಸಿಸಿಐ(BCCI) ಕಿಶನ್​ಗೆ ಪಂದ್ಯ ಶುಲ್ಕದ ಶೇ 10ರಷ್ಟು ದಂಡ ವಿಧಿಸಲಾಗಿದೆ.

ಶನಿವಾರ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ(DC vs MI) ವಿರುದ್ಧದ ಪಂದ್ಯದಲ್ಲಿ ಇಶಾನ್​ ಐಪಿಎಲ್‌ನ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಅಡಿಯಲ್ಲಿ ಲೆವೆಲ್ 1 ಅಪರಾಧ ಎಸಗಿದ್ದಾರೆ. ಐಪಿಎಲ್ ನೀತಿ ಸಂಹಿತೆಯ ಹಂತ 1 ಉಲ್ಲಂಘನೆಗಳಿಗೆ ಅವರಿಗೆ ದಂಡ ವಿಧಿಸಲಾಗಿದೆ ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಕಿಶನ್​ ಯಾವ ತಪ್ಪು ಮಾಡಿದ್ದಾರೆ ಎನ್ನುವ ವಿಚಾರವನ್ನು ಬಿಸಿಸಿಐ ನಿರ್ದಿಷ್ಟವಾಗಿ ತಿಳಿಸಿಲ್ಲ.

ಆರ್ಟಿಕಲ್ 2.2 ನೀತಿ ಸಂಹಿತೆಯ ಅಡಿಯಲ್ಲಿ ಆಟಗಾರರು ಪಂದ್ಯದ ವೇಳೆ ಅತಿರೇಕದ ವರ್ತನೆ, ವಿಕೆಟ್​ಗಳಿಗೆ ಬ್ಯಾಟ್​ನಿಂದ ಹೊಡೆಯುವುದು ಅಥವಾ ಒದೆಯುವುದು, ಉದ್ದೇಶಪೂರ್ವಕವಾಗಿ ಜಾಹೀರಾತು ಫಲಕಗಳು, ಗಡಿ ಬೇಲಿಗಳು, ಡ್ರೆಸ್ಸಿಂಗ್ ಕೋಣೆಯ ಬಾಗಿಲುಗಳು, ಕನ್ನಡಿಗಳು, ಕಿಟಕಿಗಳು, ಬೌಂಡರಿ ಗೆರೆಗೆ ಬ್ಯಾಟ್​ನಿಂದ ಬಡಿದು ಹಾನಿ ಮಾಡಿದರೆ ಅಂತಹ ಆಟಗಾರರಿಗೆ ಈ ನಿಯಮದಡಿಯಲ್ಲಿ ವಾಗ್ದಂಡನೆ ವಿಧಿಸಲಾಗುತ್ತದೆ.

ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಇಶಾನ್​ ಕಿಶನ್​ 14 ಎಸೆತಗಳಿಂದ 20 ರನ್​ ಬಾರಿಸಿದ್ದರು. ಈ ಬಾರಿಯ ಐಪಿಎಲ್​ನಲ್ಲಿ ಇಶಾನ್​ ಅಷ್ಟಾಗಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಯಶಸ್ಸು ಕಂಡಿಲ್ಲ. ಆಯ್ಕೆ ಸಮಿತಿ ಮತ್ತು ಹೆಡ್​ ಕೋಚ್​ ಸೂಚನೆಯನ್ನು ಕಡೆಗಣಿಸಿ ದೇಶೀಯ ಕ್ರಿಕೆಟ್​ ಆಡಲು ನೀರಾಕರಿಸಿದ ಕಾರಣ ಇಶಾನ್​ ಅವರನ್ನು ಬಿಸಿಸಿಐ ಆಟಗಾರರ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗಿತ್ತು.

ಇದನ್ನೂ ಓದಿ IPL 2024 Points Table: ಲಕ್ನೋ, ಮುಂಬೈ ಸೋಲಿನ ಬಳಿಕ ಅಂಕಪಟ್ಟಿ ಹೇಗಿದೆ?

ಡೆಲ್ಲಿಗೆ 10 ರನ್​ ಗೆಲುವು


ಮುಂಬೈ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ 10 ರನ್​ ಗೆಲುವು ಸಾಧಿಸಿತು. ಇಲ್ಲಿನ ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬಯಿ ಇಂಡಿಯನ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್​ ಮಾಡಿದ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಬಳಗ ನಿಗದಿತ 20 ಓವರ್​​ಗಳಲ್ಲಿ 4 ವಿಕೆಟ್​ಗೆ 257 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಮುಂಬಯಿ ತನ್ನೆಲ್ಲ ಓವರ್​ಗಳು ಮುಕ್ತಾಯಗೊಂಡಾಗ 9 ವಿಕೆಟ್​ ನಷ್ಟಕ್ಕೆ 247 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ದೊಡ್ಡ ಮೊತ್ತವನ್ನು ಬೆನ್ನಟ್ಟಲು ಹೊರಟ ಮುಂಬೈ ತಂಡಕ್ಕೆ ಅದಕ್ಕೆ ಪೂರಕವಾಗಿರುವ ಆರಂಭ ದೊರಕಲಿಲ್ಲ. ರೋಹಿತ್ ಶರ್ಮಾ 8 ರನ್​ಗೆ ಔಟಾದರೆ ಇಶಾನ್ ಕಿಶನ್​ 20 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು. 45 ರನ್​ಗೆ 2 ವಿಕೆಟ್​ ನಷ್ಟ ಮಾಡಿಕೊಂಡ ಮುಂಬೈಗೆ ಆತಂಕ ಎದುರಾಯಿತು. ಈ ವೇಳೆ ಆಡಲು ಬಂದ ಸೂರ್ಯಕುಮಾರ್ ಯಾದವ್​ 13 ಎಸೆತಕ್ಕೆ 26 ರನ್ ಬಾರಿಸಿ ಮಿಂಚುವ ಸೂಚನೆ ಕೊಟ್ಟರು. ಆದರೆ ಸೂರ್ಯನ ಆಟ ಹೆಚ್ಚು ಹೊತ್ತು ನಡೆಯಲಿಲ್ಲ. ಆದರೆ, ಮತ್ತೊಂದು ಬದಿಯಲ್ಲಿ ತಿಲಕ್ ವರ್ಮಾ ಗಟ್ಟಿಯಾಗಿ ನಿಂತು ಡೆಲ್ಲಿ ಬೌಲರ್​ಗಳನ್ನು ದಂಡಿಸಿದರು. ಅದೇ ರೀತಿ ಹಾಲಿ ಆವೃತ್ತಿಯಲ್ಲಿ ಮೊದಲ ಬ್ಯಾರಿಗೆ ಬ್ಯಾಟಿಂಗ್​ನಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ 24 ಎಸೆತಕ್ಕೆ 46 ರನ್ ಬಾರಿಸಿದರು. ಡೆಲ್ಲಿ ಪರ ರಸಿಕ್​ ಸಲಾಂ ಹಾಗೂ ಮುಖೇಶ್ ಕುಮಾರ್​ ತಲಾ 3 ವಿಕೆಟ್​ ಉರುಳಿಸಿ ತಂಡ ಗೆಲುವಿಗೆ ನೆರವಾದರು.

Exit mobile version