ಮುಂಬಯಿ: ‘ಬುಚ್ಚಿಬಾಬು ಟ್ರೋಫಿ’ ಆಹ್ವಾನಿತ(Buchi Babu Tournament) ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಶಾನ್ ಕಿಶನ್(Ishan Kishan) ವಿಸ್ಫೋಟಕ ಬ್ಯಾಟಿಂಗ್ ಮೂಲಕ ಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಮತ್ತೆ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದಾರೆ. ರಣಜಿ ಆಡಲು ನಿರಾಕರಿಸಿದ್ದ ಕಾರಣದಿಂದಾಗಿ ಇಶಾನ್ ಕಿಶನ್ ಅವರನ್ನು ಬಿಸಿಸಿಐ ಟೀಮ್ ಇಂಡಿಯಾದಿಂದ ದೂರ ಇರಿಸಿತ್ತು. ಇದೀಗ ದೇಶೀಯ ರೆಡ್ ಬಾಲ್ ಟೂರ್ನಿಯಲ್ಲಿ ಇಶಾನ್ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.
ಜಾರ್ಖಂಡ್ ತಂಡದ ನಾಯಕನಾಗಿರುವ ಇಶಾನ್ ಕಿಶನ್ ಮಧ್ಯಪ್ರದೇಶ ವಿರುದ್ಧ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದು ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ 86 ಎಸೆತಗಳಲ್ಲಿ ಶತಕ ಪೂರೈಸಿದರು. ಅಚ್ಚರಿ ಎಂದರೆ ಸತತ 2 ಸಿಕ್ಸರ್ ಬಾರಿಸುವ ಮೂಲಕ ಅವರು ಈ ಶತಕ ಪೂರ್ತಿಗೊಳಿಸಿದರು. ಅಂತಿಮವಾಗಿ ಬರೋಬ್ಬರಿ 10 ಸಿಕ್ಸರ್ ಮತ್ತು 5 ಬೌಂಡರಿ ಸಿಡಿಸಿ 114 ರನ್ ಬಾರಿಸಿದರು. ಇವರ ಶತಕದ ನೆರವಿನಿಂದ ತಂಡ ಉತ್ತಮ ರನ್ ಕಲೆಹಾಕಿದೆ.
ಕಳೆದ ವರ್ಷ ನವೆಂಬರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಸರಣಿಯ ಮೂರನೇ ಟಿ20 ಸಂದರ್ಭದಲ್ಲಿ ಕಿಶನ್ ಕೊನೆಯದಾಗಿ ಭಾರತಕ್ಕಾಗಿ ಆಡಿದ್ದರು. ನಂತರದ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದರೂ ಕೂಡ ಅಂತಿಮ ಹಂತದಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ಟೆಸ್ಟ್ ಸರಣಿಯಿಂದ ಹೊರಗುಳಿದರು. ಸ್ವಲ್ಪ ವಿರಾಮವನ್ನು ತೆಗೆದುಕೊಂಡ ಇಶಾನ್ಗೆ ಅಂದಿನ ಕೋಚ್ ದ್ರಾವಿಡ್ ಮತ್ತು ಆಯ್ಕೆ ಸಮಿತಿ ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡುವಂತೆ ಸೂಚನೆ ನೀಡಿತ್ತು. ಆದರೆ ಇದನ್ನು ಇಶಾನ್ ಕಡೆಗಣಿಸಿದ್ದರು. ಈ ಕಾರಣದಿಂದ ಬಿಸಿಸಿಐ ಅವರನ್ನು ಕೇಂದ್ರೀಯ ಗುತ್ತಿಗೆಯಿಂದಲೂ ಕೈಬಿಟ್ಟಿತ್ತು.
ಸೆಪ್ಟೆಂಬರ್ 5ರಿಂದ ಆರಂಭಗೊಳ್ಳಲಿರುವ ದುಲೀಪ್ ಟ್ರೋಫಿಯಲ್ಲಿಯೂ ಅವಕಾಶ ಪಡೆದಿರುವ ಇಶಾನ್ ಕಿಶನ್, ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ತೋರಿದರೆ, ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವಕಾಶ ಪಡೆಯುವುದು ಖಚಿತವಾಗಿದೆ.
ಇದನ್ನೂ ಓದಿ Buchi Babu Tournament: ಬುಚ್ಚಿಬಾಬು ಕ್ರಿಕೆಟ್ ಟೂರ್ನಿ ಆಡಲಿದ್ದಾರೆ ಸೂರ್ಯಕುಮಾರ್, ಅಯ್ಯರ್
ಮಾನಸಿಕ ಒತ್ತಡದದಿಂದ ಬಳಲುತ್ತಿರುವುದಾಗಿ ಸುಳ್ಳು ಕಾರಣ ನೀಡಿ ಮುಕೇಶ್ ಅಂಬಾನಿ(Mukesh Ambani) ಪುತ್ರ ಅನಂತ್ ಅಂಬಾನಿ(Anant Ambani) ಹಾಗೂ ರಾಧಿಕಾ ಮರ್ಚೆಂಟ್ (Radhika Merchant) ಅವರ ವಿವಾಹಪೂರ್ವ(Anant Ambani wedding) ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ದುಬೈನಲ್ಲಿಯೂ ಪಾರ್ಟಿ ಮಾಡಿ ಸಿಕ್ಕಿಬಿದ್ದಿದ್ದರು. ಇದು ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿತ್ತು.
ತಂಡಕ್ಕೆ ಆಯ್ಕೆ ಮಾಡದಿರುವುದರ ಕುರಿತು ಕೆಲ ದಿನಗಳ ಹಿಂದೆ ಪ್ರತಿಕ್ರಿಯೆ ನೀಡಿದ್ದ ಇಶಾನ್, “ನಾನು ಬ್ರೇಕ್ ಪಡೆದಿದ್ದೆ, ನನ್ನ ಪ್ರಕಾರ ಇದು ಸಾಮಾನ್ಯ. ತಂಡಕ್ಕೆ ಕಮ್ ಬ್ಯಾಕ್ ಮಾಡಬೇಕಾದರೆ ದೇಶೀಯ ಕ್ರಿಕೆಟ್ನಲ್ಲಿ ಪ್ರದರ್ಶನ ನೀಡಬೇಕು ಎಂಬ ನಿಯಮವಿದೆ ಎನ್ನುವುದು ನನಗೆ ತಿಳಿದಿದೆ. ಆದರೆ, ಅಂದು ನಾನು ಆಡುವ ಮನಸ್ಥಿತಿಯಲ್ಲಿ ಇರಲಿಲ್ಲ. ಹಿಗಾಗಿಯೇ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಬ್ರೇಕ್ ಪಡೆದಿದ್ದೆ. ಉತ್ತಮ ಫಾರ್ಮ್ನಲ್ಲಿರುವಾಗ ಅಂತಾರಾಷ್ಟ್ರೀಯ ಕ್ರಿಕೆಟ್ ಬಿಟ್ಟು ದೇಶೀಯ ಕ್ರಿಕೆಟ್ನಲ್ಲಿ ಆಡಬೇಕು ಎನ್ನುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದು ಇಂಡಿಯನ್ ಎಕ್ಸ್ ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.