ಮುಂಬಯಿ: ದ್ವಿಶತಕ ವೀರ, ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಕಮ್ ಬ್ಯಾಟರ್ ಇಶಾನ್ ಕಿಶನ್(Ishan Kishan) ಅವರು ಈ ಬಾರಿಯ ದುಲೀಪ್ ಟ್ರೋಫಿ ಕ್ರಿಕೆಟ್(Duleep Trophy 2023) ಟೂರ್ನಿಯನ್ನು ಆಡದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಅವರನ್ನು ವೆಸ್ಟ್ ಇಂಡೀಸ್(west indies) ಪ್ರವಾಸದ ಟೆಸ್ಟ್ ಸರಣಿಗೆ ಪರಿಗಣಿಸುವುದು ಅನುಮಾನ ಎನ್ನಲಾಗಿದೆ.
ಯಾವುದೇ ಸರಣಿ ಆರಂಭಕ್ಕೂ ಮುನ್ನ ಆಟಗಾರರು ದೇಶಿಯ ಟೂರ್ನಿ ಇದ್ದರೆ ಅದರಲ್ಲಿ ಆಡಿ ಲಯವನ್ನು ಕಂಡುಕೊಳ್ಳಲು ಬಯಸುತ್ತಾರೆ. ಆದರೆ ಇಶಾನ್ ಈ ವಿಚಾರದಲ್ಲಿ ತದ್ವಿರುದ್ಧವಾಗಿದ್ದಾರೆ. ಆಸೀಸ್ ವಿರುದ್ಧದ ಟೆಸ್ಟ್ ವಿಶ್ವಕಪ್ನಲ್ಲಿ ರಾಹುಲ್ ಬದಲು ತಂಡಕ್ಕೆ ಆಯ್ಕೆಯಾದರೂ ಅವರಿಗೆ ಆಡುವ ಅವಕಾಶ ಸಿಗಲಿಲ್ಲ.
ದುಲೀಪ್ ಟ್ರೋಫಿಗಾಗಿ ಪೂರ್ವ ವಲಯ ತಂಡದಲ್ಲಿ ಇಶಾನ್ ಅವರನ್ನು ನಾಯಕನನ್ನಾಗಿ ಮಾಡಲಾಗಿತ್ತು. ಆದರೆ ಅವರು ತಮ್ಮ ಹೆಸರನ್ನು ಹಿಂಪಡೆದಿದ್ದಾರೆ. ಈ ವಿಚಾರವನ್ನು ತಂಡದ ಆಯ್ಕೆ ಸಮಿತಿಯ ಸದ್ಯಸರೊಬ್ಬರು ತಿಳಿಸಿದ್ದಾರೆ. ಇಶಾನ್ ಹಿಂದೆ ಸರಿದ ಕಾರಣ ಭಾರತ “ಎ” ತಂಡದ ಆಟಗಾರ ಅಭಿಮನ್ಯು ಈಶ್ವರನ್ ಅವರನ್ನು ತಂಡದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಸ್ಪಿನ್ನರ್ ಶಹಬಾಜ್ ನದೀಮ್ಗೆ ಉಪನಾಯಕನ ಸ್ಥಾನ ನೀಡಲಾಗಿದೆ.
ಇಶಾನ್ ಅವರು ಸೀಮಿತ ಓವರ್‌ಗಳಲ್ಲಿ ಭಾರತಕ್ಕಾಗಿ ನಿರಂತರವಾಗಿ ಆಡುತ್ತಿದ್ದಾರೆ. ಜತೆಗೆ ಐಪಿಎಲ್ ಕೂಡ ಆಡಿದ ಕಾರಣ ಅವರು ವಿಶ್ರಾಂತಿ ಬಯಸಿರಬೇಕು ಇದೇ ಕಾರಣಕ್ಕೆ ಅವರು ದುಲಿಪ್ ಟ್ರೋಫಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇಶಾನ್ ಮಾತ್ರ ತಾವು ಈ ಟೂರ್ನಿಯಿಂದ ಹಿಂದೆ ಸರಿದಿರುವುದಕ್ಕೆ ಸ್ಪಷ್ಟ ಕಾರಣ ತಿಳಿಸಿಲ್ಲ.
ಇದನ್ನೂ ಓದಿ IPL 2023 : ಇಶಾನ್ ಬದಲಿಗೆ ಆಡಿದ ಈ ಆಟಗಾರ ಐಪಿಎಲ್ ಇತಿಹಾಸದ ಮೊದಲ ಕಂಕಶನ್ ಸಬ್ಸ್ಟಿಟ್ಯೂಟ್
ಪಂತ್ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡದ ಕೀಪಿಂಗ್ ಹೊಣೆ ಹೊತ್ತಿರುವ ಶ್ರೀಕರ್ ಭರತ್ ಇದುವರೆಗೆ ಆಡಿದ ಪಂದ್ಯಗಳಲ್ಲಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ವಿಂಡೀಸ್ ವಿರುದ್ಧದ ಸರಣಿಗೂ ಮುನ್ನ ಅವರು ದುಲಿಪ್ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಬ್ಯಾಟಿಂಗ್ ಲಯವನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಒಂದೊಮ್ಮೆ ವಿಂಡೀಸ್ ಸರಣಿಗೆ ಆಯ್ಕೆಯಾಗಿ ಅಲ್ಲಿಯೂ ಕಳಪೆ ಪ್ರದರ್ಶನ ತೋರಿದರೆ ಅವರನ್ನು ಕಡೆಗಣಿಸಿ ಬಿಸಿಸಿಐ(BCCI) ಬೇರೊಬ್ಬ ಕೀಪರ್ ಹುಡುಕುವ ಪ್ರಯತ್ನ ನಡೆಸಬಹುದು.