ಮುಂಬಯಿ: ಟೀಮ್ ಇಂಡಿಯಾದ ಯುವ ಬ್ಯಾಟರ್ ಇಶಾನ್ ಕಿಶನ್(Ishan Kishan) ಅವರು ಬಿಸಿಸಿಐ(BCCI) ಮತ್ತು ಕೋಚ್ ದ್ರಾವಿಡ್ ಸೂಚನೆಯ ಮೇರೆಗೂ ರಣಜಿ ಆಡದೆ ದರ್ಪ ತೋರಿದ ಕಾರಣದಿಂದ ಇತ್ತೀಚೆಗೆ ಪ್ರಕಟಗೊಂಡ ಕೇಂದ್ರ ಗುತ್ತಿಗೆ(BCCI Annual Contract) ಪಡೆದ ಆಟಗಾರರ ಪಟ್ಟಿಯಿಂ ಹೊರಬಿದ್ದಿದ್ದರು. ಇದೀಗ ಇಶಾನ್ ಅವರು ಮುಕೇಶ್ ಅಂಬಾನಿ(Mukesh Ambani) ಪುತ್ರ ಅನಂತ್ ಅಂಬಾನಿ(Anant Ambani) ಹಾಗೂ ರಾಧಿಕಾ ಮರ್ಚೆಂಟ್ (Radhika Merchant) ಅವರ ವಿವಾಹಪೂರ್ವ(Anant Ambani wedding) ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ.
ರಣಜಿ ಆಡಲು ಸೋಮಾರಿತನ ಆದರೆ, ಮೋಜು ಮಸ್ತಿಯಲ್ಲಿ ಮುಂದು ಎಂದು ಹೇಳುವ ಮೂಲಕ ಟೀಮ್ ಇಂಡಿಯಾ ಅಭಿಮಾನಿಗಳು ಇಶಾನ್ಗೆ ಸಾಮಾಜಿಕ ಜಾಲತಾಣದಲ್ಲಿ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಜಾಮ್ ನಗರದಲ್ಲಿ (Jamnagar) ನಡೆಯುತ್ತಿರುವ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಎಂ.ಎಸ್ ಧೋನಿ, ರೋಹಿತ್ ಶರ್ಮ, ಜಹೀರ್ ಖಾನ್, ಡ್ವೇನ್ ಬ್ರಾವೋ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಕೃನಾಲ್ ಪಾಂಡ್ಯ , ರಶೀದ್ ಖಾನ್, ಸ್ಯಾಮ್ ಕರನ್, ಗ್ರೇಮ್ ಸ್ಮಿತ್ ಕೂಡ ಪಾಲ್ಗೊಂಡಿದ್ದಾರೆ. ಈ ಆಟಗಾರರು ಕುಟುಂಬ ಸಮೇತರಾಗಿ ಆಗಮಿಸಿದ ವಿಡಿಯೊಗಳು ಈಗಾಗಲೇ ವೈರಲ್ ಆಗಿದೆ. ಮೂರು ದಿನಗಳ ಕಾಲ ಈ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ನಡೆಯಲಿದೆ.
ಇದನ್ನೂ ಓದಿ Ishan Kishan: ಮತ್ತೆ ಎಡವಟ್ಟು ಮಾಡಿಕೊಂಡು ಬಿಸಿಸಿಐ ಕೆಂಗಣ್ಣಿಗೆ ಗುರಿಯಾದ ಇಶಾನ್ ಕಿಶನ್
#WATCH | Cricketer Ishan Kishan arrives in Jamnagar, Gujarat for the three-day pre-wedding celebrations of Anant Ambani and Radhika Merchant. pic.twitter.com/GH9l04asMB
— ANI (@ANI) March 1, 2024
ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ಸಮಯದಲ್ಲಿ ಇಶಾನ್ ತಮ್ಮ ಮಾನಸಿಕ ಯೋಗಕ್ಷೇಮಕ್ಕಾಗಿ ವಿರಾಮವನ್ನು ಬಯಸಿ ಈ ಸರಣಿಯಿಂದ ಹಿಂದೆ ಸರಿದಿದ್ದರು. ಹೀಗಾಗಿ ಕೊನೇ ಕ್ಷಣದಲ್ಲಿ ಕೆ. ಎಸ್ ಭರತ್ ಅವರನ್ನು ಬಿಸಿಸಿಐ ದಕ್ಷಿಣ ಆಫ್ರಿಕಾಗೆ ಕಳುಹಿಸಿತ್ತು. ರಜೆ ಪಡೆದಿದ್ದ ಇಶಾನ್ ನೆರವಾಗಿ ಭಾರತಕ್ಕೆ ಬರುವ ಬದಲು ದುಬೈನಲ್ಲಿ ಇಳಿದು ಪಾರ್ಟಿಗೆ ಹೋಗಿದ್ದರು. ಬಳಿಕ ಅವರು ರಾಷ್ಟ್ರೀಯ ತಂಡಕ್ಕೆ ಹಿಂತಿರುಗಲಿಲ್ಲ.
ಡಿವೈ ಪಾಟೀಲ್ ಟಿ20 ಟೂರ್ನಿಯಲ್ಲಿ(DY Patil T20 Cup 2024) ಆಡುವ ಮೂಲಕ ಇಶಾನ್ ಕಿಶನ್ ಮತ್ತೆ ಬಿಸಿಸಿಐ(BCCI) ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಬಿಸಿಸಿಐ ಲೋಗೊ ಇರುವ ಹೆಲ್ಮೆಟ್ ಧರಿಸಿ ಆಡಿದ್ದು ಇದಕ್ಕೆ ಪ್ರಮುಖ ಕಾರಣ. ದೇಶೀಯ ಕ್ರಿಕೆಟ್ನಲ್ಲಿ ಆಡುವಾಗ ಯಾವುದೇ ಆಟಗಾರರು ಕೂಡ ಬಿಸಿಸಿಐ ಲೋಗೋ ಇರುವ ಹೆಲ್ಮೆಟ್ ಧರಿಸಿ ಆಡುವಂತಿಲ್ಲ. ಒಂದೊಮ್ಮೆ ಈ ಹೆಲ್ಮೆಟ್ ಧರಿಸಿ ಆಡಿದರೂ ಕೂಡ ಲೋಗೊದ ಮೇಲೆ ಪ್ಲಾಸ್ಟರ್ ಹಾಕಿ ಆಡಬೇಕು. ಆದರೆ ಇಶಾನ್ ಈ ಕ್ರಮ ಪಾಲಿಸಲಿಲ್ಲ. ಹೀಗಾಗಿ ಬಿಸಿಸಿಐ ಇಶಾನ್ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.