Site icon Vistara News

Ishan Kishan: ಕೊನೆಗೂ ಆಲಸ್ಯ ಬಿಟ್ಟು ​ಕ್ರಿಕೆಟ್​ ಅಭ್ಯಾಸ ಆರಂಭಿಸಿದ ಇಶಾನ್​ ಕಿಶನ್​

Ishan Kishan

ಅಹಮದಾಬಾದ್​: ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದಿದ್ದ ಇಶಾನ್ ಕಿಶನ್(Ishan Kishan)​ ಇನ್ನೇನು ಸರಣಿ ಆರಂಭಕ್ಕೆ ಒಂದೆರಡು ದಿನಗಳು ಬಾಕಿ ಇರುವಾಗ ಮಾನಸಿಕ ಸಮಸ್ಯೆಯ ವಿಷಯವನ್ನು ಮುನ್ನೆಲೆಗೆ ತಂದು ಈ ಸರಣಿಯಿಂದ ಹಿಂದೆ ಸರಿದಿದ್ದರು. ಬಳಿಕ ಆಯ್ಕೆ ಸಮಿತಿ ಮತ್ತು ಕೋಚ್​ ಅವರ ಕೆಲ ನಿರ್ದೇಶನಗಳನ್ನು ಪಾಲಿಸದೇ ಇದ್ದ ಕಾರಣ ಇಶಾನ್​ ವಿರುದ್ಧ ಅಶಿಸ್ತಿನ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿತ್ತು. ಇದೀಗ ಇಶಾನ್ ಬರೋಡಾದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರೊಂದಿಗೆ ಅಭ್ಯಾಸ ನಡೆಸುತ್ತಿದ್ದಾರೆ(ishan kishan practice) ಎಂದು ತಿಳಿದುಬಂದಿದೆ.

ರಜೆ ಪಡೆದಿದ್ದ ಇಶಾನ್​ ನೆರವಾಗಿ ಭಾರತಕ್ಕೆ ಬರುವ ಬದಲು ದುಬೈನಲ್ಲಿ ಇಳಿದು ಪಾರ್ಟಿಗೆ ಹೋಗಿದ್ದರು. ಬಳಿಕ ದ್ರಾವಿಡ್​ ಅವರು ರಣಜಿ ಆಡುವಂತೆ ಸೂಚನೆ ನೀಡಿದರೂ ಕೂಡ ಇದನ್ನು ಇಶಾನ್​ ಕಡೆಗಣಿಸಿದ್ದರು. ಹೀಗಾಗಿ ಶಿಸ್ತು ಕ್ರಮದ ಉಲ್ಲಂಘನೆಯಾಗಿರುವ ಕಾರಣ ಅವರನ್ನು ತಂಡಕ್ಕೆ ಪರಿಗಣಿಸಿಲ್ಲ ಎಂಬುದಾಗಿ ವರದಿಯಾಗಿತ್ತು. ಇದೀಗ ಇಶಾನ್​ ಅವರು ಬರೋಡಾದಲ್ಲಿ ಕ್ರಿಕೆಟ್​ ಅಭ್ಯಾಸ ಆರಂಭಿಸಿದ್ದಾರೆ ಎನ್ನಲಾಗಿದೆ.

ಇಂಗ್ಲೆಂಡ್​ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಕೋಚ್​ ರಾಹುಲ್​ ದ್ರಾವಿಡ್​,”ನಾವು ಯಾವುದೇ ಆಟಗಾರರನ್ನು ಬಲವಂತವಾಗಿ ಆಡಿಸಲು ಸಾಧ್ಯವಿಲ್ಲ. ನಾನು ಇಶಾನ್​ಗೆ ದೇಶೀಯ ಕ್ರಿಕೆಟ್ ಆಡಲೇಬೇಕೆಂದು ಹೇಳಲಿಲ್ಲ. ಅವರು ಯಾವಾಗ ಕ್ರಿಕೆಟ್​ ಆಡಲು ಸಿದ್ಧವೋ ಆ ವೇಳೆ ಸ್ವಲ್ಪ ಕ್ರಿಕೆಟ್ ಆಡಬೇಕು ಮತ್ತು ಹಿಂತಿರುಗಬೇಕು ಎಂದು ಹೇಳಿದ್ದೆ, ಆಯ್ಕೆ ಅವರುದು, ನಾವು ಎಲ್ಲವನ್ನೂ ಮಾಡಲು ಅವರನ್ನು ಒತ್ತಾಯಿಸುತ್ತಿಲ್ಲ,” ಎಂದು ತಂಡದ ಮ್ಯಾನೇಜ್‌ಮೆಂಟ್ ನಿಲುವನ್ನು ಸ್ಪಷ್ಟಪಡಿಸಿದ್ದರು. ಜತೆಗೆ ಇಶಾನ್​ಗೆ ಪರೋಪಕ್ಷವಾಗಿ ಖಡಕ್​ ಎಚ್ಚರಿಕೆಯೊಂದನ್ನು ಕೂಡ ನೀಡಿದ್ದರು.

ಇದನ್ನೂ ಓದಿ MS Dhoni: ಧೋನಿಯ ಹೊಸ ಬ್ಯಾಟ್​ಗೂ ಬಾಲ್ಯದ ಗೆಳೆಯನಿಗೂ ಇರುವ ನಂಟೇನು? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

ದ್ರಾವಿಡ್​ ಅವರ ಈ ಹೇಳಿಕೆಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಇಶಾನ್​, ಬರೋಡಾದಲ್ಲಿ ಅಭ್ಯಾಸ ನಡೆಸಲು ಆರಂಭಿಸಿದ್ದಾರೆ. ಶ್ರೀಕರ್​ ಭರತ್​ ಅವರು ಇಂಗ್ಲೆಂಡ್​ ವಿರುದ್ಧದ ಆಡಿದ ಎರಡು ಟೆಸ್ಟ್​ ಪಂದ್ಯಗಳಲ್ಲಿ ವಿಫಲರಾಗಿದ್ದು ಮೂರನೇ ಟೆಸ್ಟ್​ ಪಂದ್ಯದಿಂದ ಅವರನ್ನು ಕೈಬಿಡುವ ಸಾಧ್ಯತೆ ಇದೆ. ಇವರ ಸ್ಥಾನಕ್ಕೆ ಇಶಾನ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಮೂರನೇ ಟೆಸ್ಟ್​ಗೆ ಇನ್ನೂ ಕೂಡ ಭಾರತ ತಂಡ ಪ್ರಕಟಗೊಂಡಿಲ್ಲ. ಇಂದು ಅಥವಾ ನಾಳೆ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಬಿಹಾರ ಮೂಲದ ಇಶಾನ್​ ಜಾರ್ಖಂಡ್ ಪರ ಆಡುವ ವೇಳೆ ತನ್ನ ತಂದೆಯ ಕಾರನ್ನು ಅಪಾಯಕಾರಿ ರೀತಿಯಲ್ಲಿ ಚಾಲನೆ ಮಾಡಿಕೊಂಡು ಹೋಗಿ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದ್ದರು. ಪರಿಣಾಮ ಅದರಲ್ಲಿದ್ದವರು ಗಾಯಗೊಂಡಿದ್ದರು. ಪ್ರಕರಣ ದಾಖಲಾಗದಿದ್ದರೂ, ಕೋಪಗೊಂಡ ಸ್ಥಳೀಯರು ಕಿಶನ್ ಮೇಲೆ ಹಲ್ಲೆ ನಡೆಸಿದ್ದರಿಂದ ಪರಿಸ್ಥಿತಿ ಉಲ್ಬಣಗೊಂಡಿತ್ತು. ಕಿಶನ್ ಅವರ ತಂದೆ ಗಾಯಗೊಂಡವರ ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿ ಮತ್ತು ಆಟೋ ರಿಕ್ಷಾ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ ಬಳಿಕ ಜಗಳ ಕೊನೆಗೊಂಡಿತ್ತು. ಆದರೆ ಪೊಲೀಸರು ಇಶಾನ್ ಕಿಶನ್ ಅವರನ್ನು ಬಂಧಿಸಿ ಜೈಲಿನಲ್ಲಿ ಇರಿಸಿದ್ದರು. ಅವರು ಒಂದು ರಾತ್ರಿ ಜೈಲಿನಲ್ಲಿ ಕಳೆಯುವಂತಾಗಿತ್ತು.

Exit mobile version