ಮುಂಬಯಿ: ಬಿಸಿಸಿಐನ ಹಿರಿಯ ಕ್ರಿಕೆಟಿಗರ ತಂಡದ ಆಯ್ಕೆ ಸಮಿತಿ ಮೇ 8ರಂದು ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೆ ಭಾರತ ತಂಡದ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಿದೆ. ಕೆ. ಎಲ್ ರಾಹುಲ್ ಗಾಯಗೊಂಡಿರುವ ಕಾರಣ ಜೂನ್ 7ರಂದು ಲಂಡ‘ನ್ನ ಓವಲ್ನಲ್ಲಿ ಆರಂಭವಾಗಲಿರುವ ಪಂದ್ಯಕ್ಕೆ ಎಡಗೈ ಬ್ಯಾಟರ್ಗೆ ಅವಕಾಶ ನೀಡಲಾಗಿದೆ. ಆದರೆ, ಇದುವರೆಗೆ ಒಂದೇ ಒಂದು ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಆಡದ ಇಶಾನ್ ಅವರನ್ನು ಪ್ರಮುಖ ಪಂದ್ಯವೊಂದಕ್ಕೆ ಆಯ್ಕೆ ಮಾಡಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಹೀಗಾಗಿ ಬಿಸಿಸಿಐ ವಿರುದ್ಧ ಸೋಶಿಯಲ್ ಮೀಡಿಯಾಗಳಲ್ಲಿ ಸತತವಾಗಿ ಟೀಕೆಗಳನ್ನು ಹರಿಬಿಡುತ್ತಿದ್ದಾರೆ.
ಐಪಿಎಲ್ನಲ್ಲಿ ಲಕ್ನೊ ಸೂಪರ್ ಜಯಂಟ್ಸ್ ತಂಡದ ನಾಯಕರಾಗಿದ್ದ ಕೆ. ಎಲ್ ರಾಹುಲ್ ಆರ್ಸಿಬಿ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದರು. ಅವರ ತೊಡೆಯ ನೋವಿಗೆ ಶಸ್ತ್ರ ಚಿಕಿತ್ಸೆ ಅಗತ್ಯ ಇರುವ ಕಾರಣ ಫೈನಲ್ನಲ್ಲಿ ಅವರಿಗೆ ಆಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಶಾನ್ಗೆ ಅವಕಾಶ ನೀಡಲಾಗಿದೆ. ಆದರೆ, ಆಸ್ಟ್ರೇಲಿಯಾ ವಿರುದ್ಧದ ತವರಿನ ಸರಣಿಯಲ್ಲಿ ಆಡಿರುವ ಕೆ. ಎಸ್ ಭರತ್ ಅವರನ್ನು ಬಿಟ್ಟು ಇಶಾನ್ಗೆ ಅವಕಾಶ ಕೊಟ್ಟಿದ್ದು ಸರಿಯಲ್ಲ ಎಂಬುದು ಕ್ರಿಕೆಟ್ ಅಭಿಮಾನಿಗಳ ವಾದ.
2023ರ ಫೆಬ್ರವರಿ-ಮಾರ್ಚ್ನಲ್ಲಿ ನಡೆದಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಕಿಶನ್ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಕೆ. ಎಸ್ ಭರತ್ ಆಡುವ ಅವಕಾಶ ಪಡೆದುಕೊಂಡಿದ್ದರು. ರಾಹುಲ್ ತಂಡದಲ್ಲಿ ಇದ್ದರೂ ಅವರು ಬ್ಯಾಟ್ಸ್ಮನ್ ಆಗಿ ಎರಡು ಪಂದ್ಯಗಳಲ್ಲಿ ಆಡಿದ್ದರು. ಆದರೆ, ಇಶಾನ್ಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಏಕಾಏಕಿ ಅವರಿಗೆ ಅವಕಾಶದ ಬಾಗಿಲು ತೆರೆದಿದೆ.
48 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅವರು 38.76ರ ಸರಾಸರಿಯಲ್ಲಿ 2985 ರನ್ ಗಳಿಸಿದ್ದಾರೆ. ಇತ್ತೀಚೆಗೆ ನಡೆದ ರಣಜಿ ಟ್ರೋಫಿ 2022-23 ರಲ್ಲಿ, ಕಿಶನ್ ನಾಲ್ಕು ಇನ್ನಿಂಗ್ಸ್ಗಳಲ್ಲಿ 45 ಸರಾಸರಿಯಲ್ಲಿ 180 ರನ್ ಗಳಿಸಿದ್ದಾರೆ.
ಇದನ್ನೂ ಓದಿ: IPL 2023: ಐಪಿಎಲ್ನಲ್ಲಿ ವಿಶೇಷ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2023 ರಲ್ಲಿ, ಬಿಹಾರ ಮೂಲದ ಬ್ಯಾಟ್ಸ್ಮನ್ ಹತ್ತು ಇನ್ನಿಂಗ್ಸ್ಗಳಿಂದ 293 ರನ್ ಗಳಿಸಿದ್ದಾರೆ. ಕೇವಲ ಎರಡು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ವೃದ್ಧಿಮಾನ್ ಸಾಹಾ ಅವರನ್ನೂ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ, ಆಯ್ಕೆ ಸಮಿತಿ ಅವರನ್ನು ಆಯ್ಕೆ ಮಾಡಿಲ್ಲ.
2022-23ರ ರಣಜಿ ಟ್ರೋಫಿಯಲ್ಲಿ, ಸಹಾ ಅದ್ಭುತ ಫಾರ್ಮ್ನಲ್ಲಿದ್ದರು, ಅವರು ಏಳು ಇನ್ನಿಂಗ್ಸ್ಗಳಿಂದ 52.16 ಸರಾಸರಿಯಲ್ಲಿ 313 ರನ್ ಗಳಿಸಿದ್ದರು. ಆದಾಗ್ಯೂ, ರೆಡ್-ಬಾಲ್ ಕ್ರಿಕೆಟ್ ಮತ್ತು ನಡೆಯುತ್ತಿರುವ ಐಪಿಎಲ್ನಲ್ಲಿ ಅವರ ಉತ್ತಮ ಪ್ರದರ್ಶನದ ಹೊರತಾಗಿಯೂ, ಅನುಭವಿ ವಿಕೆಟ್ ಕೀಪರ್ ಸೇವೆಯನ್ನು ನಿರಾಕರಿಸಿರುವುದೂ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.