ಬೆಂಗಳೂರು: ಇಸ್ರೆಲ್ ಮತ್ತು ಪ್ಯಾಲೇಸ್ತೀನ್ (Israel Palestine War) ನಡುವಿನ ಯುದ್ಧದಿಂದಾಗಿ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಲೆಕ್ಕಕ್ಕಿಲ್ಲದಷ್ಟು ಮಂದಿ ಗಾಯಗೊಂಡಿದ್ದಾರೆ. ದೊಡ್ಡ ಸಂಖ್ಯೆಯ ಜನರು ಯುದ್ಧದ ಒತ್ತೆಯಾಳುಗಳಾಗಿದ್ದಾರೆ. ಇವೆಲ್ಲ ನಷ್ಟದ ನಡುವೆ ಜಾಗತಿಕ ಕ್ರೀಡಾ ಕ್ಷೇತ್ರಕ್ಕೂ ಈ ಯುದ್ಧ ಹಾನಿ ಉಂಟು ಮಾಡುತ್ತಿದೆ. ಅಂದ ಹಾಗೆ ಮುಂದಿನ ತಿಂಗಳು ನಡೆಯಬೇಕಿದ್ದ ಟೆಲ್ ಅವಿನ್ ಓಪನ್ ಟೆನಿಸ್ ಟೂರ್ನಿಯನ್ನು ರದ್ದುಪಡಿಸಲಾಗಿದೆ.
ಅಭಿಮಾನಿಗಳು ಮತ್ತು ಆಟಗಾರರ ಸುರಕ್ಷತೆ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಎಟಿಪಿ ಮೆನ್ಸ್ ಟೂರ್ ಭಾನುವಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. “ಇಸ್ರೇಲ್ನಲ್ಲಿ ನಡೆದ ಹಿಂಸಾಚಾರ ಮತ್ತು ಭಯೋತ್ಪಾದಕ ಕೃತ್ಯಗಳು ಗ್ರಹಿಸಲಾಗದವು” ಎಂದು ಎಟಿಪಿ ಅಧ್ಯಕ್ಷ ಆಂಡ್ರಿಯಾ ಗೌಡೆಂಜಿ ಹೇಳಿದ್ದಾರೆ.
ಇದೇ ವೇಳೆ ಅವರು ಯುದ್ಧದ ಪರಿಸ್ಥಿತಿಯನ್ನು ಟೀಕಿಸಿದರು. ಇಡೀ ಜಗತ್ತಿನಲ್ಲಿ ಶಾಂತಿ ಇರಬೇಕು ಎಂದು ಆಶಿಸಿದರು. ನಾವು ಯಾವುದೇ ರೀತಿಯ ಭಯೋತ್ಪಾದನೆಯನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ಈ ಸಂಘರ್ಷದಾದ್ಯಂತ ಮುಗ್ಧ ಜೀವಗಳ ನಷ್ಟಕ್ಕೆ ಶೋಕಿಸುತ್ತೇವೆ. ಈ ಪ್ರದೇಶದಲ್ಲಿ ಶಾಂತಿಗಾಗಿ ನಾವು ಆಶಿಸುತ್ತೇವೆ ಮತ್ತು ಪ್ರಾರ್ಥಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಈ ಟೂರ್ನಿಯಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಮರಿನ್ ಸಿಲಿಕ್ ಅವರನ್ನು ನೇರ ಸೆಟ್ ಗಳಿಂದ ಸೋಲಿಸಿ ಪ್ರಶಸ್ತಿ ಜಯಿಸಿದ್ದರು. ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಭಾರತದ ರೋಹನ್ ಬೋಪಣ್ಣ ಮತ್ತು ಮ್ಯಾಟ್ವೆ ಮಿಡೆಲ್ಕೂಪ್ ಜೋಡಿ ಸ್ಯಾಂಟಿಯಾಗೊ ಗೊನ್ಜಾಲೆಜ್ ಮತ್ತು ಆಂಡ್ರೆಸ್ ಮೊಲ್ಟೆನಿ ಅವರನ್ನು ಸೋಲಿಸಿ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದರು. ಎಟಿಪಿ 250 ಈವೆಂಟ್ ಪ್ರಾಥಮಿಕವಾಗಿ ಸಿಂಗಲ್ಸ್ ಸ್ಪರ್ಧೆಯಾಗಿತ್ತು. ಡಬಲ್ಸ್ ಸ್ಪರ್ಧೆಯನ್ನು 2000 ಮತ್ತು 2021 ರ ನಡುವೆ ಆರಂಭಿಸಲಾಗಿತ್ತು.
ಬೋಪಣ್ಣ, ಎಬ್ಡೆನ್ ಜೋಡಿಗೆ ಬೆಳ್ಳಿ
ಭಾರತದ ರೋಹನ್ ಬೋಪಣ್ಣ (Rohan Bopanna) ಮತ್ತು ಮ್ಯಾಥ್ಯೂ ಎಬ್ಡೆನ್(Matthew Ebden) ಜೋಡಿ ಶಾಂಘೈ ಓಪನ್(Shanghai Masters) ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಫೈನಲ್ನಲ್ಲಿ ಸೋಲು ಕಂಡು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ನಾಲ್ಕನೇ ಶ್ರೇಯಾಂಕ ಹೊಂದಿದ್ದ ಬೋಪಣ್ಣ– ಎಬ್ಡೆನ್ ಜೋಡಿ ಫೈನಲ್ನಲ್ಲಿ 5–7, 6–2, 10–7 ಅಂತರದಿಂದ ಸ್ಪೇನ್ನ ಮಾರ್ಸೆಲ್ ಗ್ರಾನೊಲೆರ್ಸ್ ಮತ್ತು ಅರ್ಜೆಂಟೀನಾದ ಹೊರಾಸಿಯೊ ಝೆಬೆಲೊಸ್ ವಿರುದ್ಧ ಸೋಲು ಕಂಡರು. ಮೊದಲ ಸೆಟ್ ಗೆದ್ದು ಉತ್ತಮ ಆರಂಭ ಪಡೆದಿದ್ದ ಇಂಡೋ-ಆಸೀಸ್ ಜೋಡಿ ಆ ಬಳಿಕದ ಸೆಟ್ನಲ್ಲಿ ಇದೇ ಲಯವನ್ನು ಮುಂದುವರಿಸುವಲ್ಲಿ ಎಡವಿತು. ಏಳನೇ ಶ್ರೇಯಾಂಕದ ಗ್ರಾನೊಲೆರ್ಸ್ ಮತ್ತು ಝೆಬೆಲೊಸ್ ಅವರು ಆಕ್ರಮಣಕಾರಿ ಆಟವಾಡಿ ಪಂದ್ಯವನ್ನು ಗೆದ್ದರು. ಈ ಪಂದ್ಯ ಒಂದು ಗಂಟೆ 23 ನಿಮಿಷಗಳ ಕಾಲ ನಡೆಯಿತು.
ಏಷ್ಯನ್ ಗೇಮ್ಸ್ನಲ್ಲಿ ಚಿನ್ನ
ಇದೇ ಅಕ್ಟೋಬರ್ ಮೊದಲ ವಾರ ಚೀನಾದಲ್ಲಿ ಮುಕ್ತಾಯ ಕಂಡ ಏಷ್ಯನ್ ಗೇಮ್ಸ್ನಲ್ಲಿ(Asian Games 2023) ರೋಹನ್ ಬೋಪಣ್ಣ(Rohan Bopanna) ಅವರು ರುತುಜಾ ಭೋಸಲೆ(Rutuja Bhosale) ಜತೆ ಮಿಕ್ಸೆಡ್ ಡಬಲ್ಸ್ ಆಡಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಒಂದು ವಾರದ ಅಂತರದಲ್ಲಿ ಮತ್ತೊಂದು ಪ್ರಶಸ್ತಿ ಪಡೆದಿರುವುದು ನಿಜಕ್ಕೂ ಮೆಚ್ಚಲೇ ಬೇಕು.
43 ವರ್ಷದ ಕೊಡಗಿನವರಾದ ರೋಹನ್ ಬೋಪಣ್ಣ ಅವರು ಕಳೆದ ತಿಂಗಳು ನಡೆದಿದ್ದ ಯುಎಸ್ ಓಪನ್ 2023ರ(US Open 2023) ಪುರುಷರ ಡಬಲ್ಸ್ ವಿಭಾಗದಲ್ಲಿ ರನ್ನರ್ಅಪ್ ಸ್ಥಾನ ಪಡೆದಿದ್ದರು. ಜತೆಗೆ ಗ್ರ್ಯಾಂಡ್ ಸ್ಲಾಮ್ ಡಬಲ್ಸ್ ಫೈನಲ್ ತಲುಪಿದ ಅತ್ಯಂತ ಹಿರಿಯ ಆಟಗಾರ ಎಂಬ ವಿಶ್ವ ದಾಖಲೆ ಬರೆದಿದ್ದರು. ಇದೇ ವರ್ಷ ದೋಹಾ ಮತ್ತು ಇಂಡಿಯನ್ ವೆಲ್ಸ್ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಎರಡು ತಿಂಗಳ ಹಿಂದೆ ನಡೆದಿದ್ದ ವಿಂಬಲ್ಡನ್ ಟೂರ್ನಿಯ(Wimbledon 2023) ಸೆಮಿಫೈನಲ್ ಪ್ರವೇಶಿಸಿದ ಸಾಧನೆ ಮಾಡಿತ್ತು. ಆದರೆ ಇಲ್ಲಿ ಅಗ್ರ ಶ್ರೇಯಾಂಕದ ನೆದರ್ಲೆಂಡ್ಸ್-ಬ್ರಿಟಿಷ್ ಜೋಡಿಯಾದ ವೆಸ್ಲೆ ಕೂಲ್ಹೋಫ್ ಮತ್ತು ನೀಲ್ ಸ್ಕಾಪ್ಸ್ಕಿ ಎದುರು ಸೋಲು ಕಂಡಿದ್ದರು.
2010ರ ಯುಎಸ್ ಓಪನ್ನಲ್ಲಿ ಬೋಪಣ್ಣ ಅವರು ಪಾಕಿಸ್ತಾನದ ಐಸಾಮ್-ಉಲ್-ಹಕ್ ಖುರೇಷಿ ಜತೆಗೆ ಕಣಕ್ಕಿಳಿದು ಈ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದರು. ಆದರೆ ಇಲ್ಲಿ 7–6(7–5), 7–6(7–4) ಅಂತರದಿಂದ ಸೋತು ರನ್ನರ್ ಅಪ್ಗೆ ತೃಪ್ತಿಪಟ್ಟಿದ್ದರು.